ADVERTISEMENT

ಸಭಾಂಗಣಕ್ಕೆ ಇಂದಿರಾ ಮಾನ್ವಿಕರ್‌ ಹೆಸರು

ಸಂಗಮೇಶ್ವರ ಮಹಿಳಾ ಮಂಡಳದ ಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 4:40 IST
Last Updated 11 ಜೂನ್ 2018, 4:40 IST

ಕಲಬುರ್ಗಿ: ‘ಇಂದಿರಾ ಮಾನ್ವಿಕರ್‌ ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಅನನ್ಯ. ಮಹಿಳೆಯರು ಮನೆಯಿಂದ ಹೊರಬರಲು ಆಗದ ಆಗಿನ ಕಾಲದಲ್ಲಿ ಅವರು ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಧೈರ್ಯ, ಯೋಚನಾ ಲಹರಿ ವಿಶೇಷವಾದುದು’ ಎಂದು ಸರೋಜಾ ಅನಗರ್ಕರ್‌ ಹೇಳಿದರು.

ಇಲ್ಲಿಯ ಸಂಗಮೇಶ್ವರ ಮಹಿಳಾ ಮಂಡಳದ ಸಭಾಂಗಣಕ್ಕೆ ಇಂದಿರಾ ಮಾನ್ವಿಕರ ಅವರ ನಾಮಕರಣ ಮಾಡಿದ್ದು, ಇದರ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘40 ವರ್ಷಗಳಿಂದ ಇಂದಿರಾ ಮಾನ್ವಿಕರ್‌ ಅವರು ಸಂಗಮೇಶ್ವರ ಮಹಿಳಾ ಮಂಡಳ ಕಟ್ಟಿ ಬೆಳೆಸಿದರು. ಅವರ ಕೊನೆ ಉಸಿರು ಇರುವವರೆಗೂ ಮಳೆಯರ ಅಭಿವೃದ್ಧಿಗೆ ಶ್ರಮಿಸಿದ್ದರು’ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಮೀರಾ ಪಂಡಿತ್‌, ‘ಇಂದಿರಾ ಅವರು ಹಮ್ಮಿಕೊಂಡಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೆ. ಅವರ ಒಡನಾಟದಿಂದ ಸಾಕಷ್ಟು ಕಲಿತಿದ್ದೇನೆ. ಅವರು ಸಾಕಷ್ಟು ಮಹಿಳೆಯರನ್ನು ಬೆಳೆಸಿದ್ದಾರೆ’ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷೆ ಡಾ.ಮಹಾದೇವಿ ಮಾಲಕರಡ್ಡಿ ಮಾತನಾಡಿ, ‘ಇಂದಿರಾ ನನ್ನ ಆಪ್ತಸ್ನೇಹಿತೆಯಾಗಿದ್ದಳು. ಆಕೆಯ ಆಲೋಚನೆಗಳು ಸಮಾಜಮುಖಿ ಮತ್ತು ಮಹಿಳೆಯರ ಅಭಿವೃದ್ಧಿ ಪರ ಇರುತ್ತಿದ್ದವು. ಹಿಡಿದ ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸುವ ಛಲ ಇತ್ತು’ ಎಂದರು.

ಅಧ್ಯಕ್ಷತೆ ವಹಿಸಿದ್ದ ವೈಶಾಲಿ ದೇಶಮುಖ, ಸಂಗಮೇಶ್ವರ ಮಹಿಳಾ ಮಂಡಳದ ಪ್ರಾರಂಭದ ದಿನಗಳನ್ನು ಸ್ಮರಿಸಿಕೊಂಡು ಎಲ್ಲರೂ ಒಟ್ಟಾಗಿ ಸಾಗೋಣ ಎಂದರು.

ಮಾನ್ವಿಕರ್ ಕುಟುಂಬದ ಸಂಗೀತಾ ಕುಲಕರ್ಣಿ, ಕವಿತಾ ಪಾಟೀಲ, ಮನೋಜ್ , ಮಯೂರ, ಮಮತಾ ಹಾಗೂ ಡಾ.ಸುಧೀಂದ್ರ ಸಿದ್ದಾಪುರಕರ್, ಮೀನಾ ಸಿದ್ದಾಪುರಕರ್, ಶ್ರೀನಿವಾಸ ಸಿರನೂರಕರ್, ಗವೀಶ್ ಹಿರೇಮಠ, ಸುಜಾತಾ ಜಂಗಮಶೆಟ್ಟಿ, ಸಂಧ್ಯಾ ಹೊನಗುಂಟಿಕರ್‌ ಇದ್ದರು.

ಸುನಂದಾ ಸಾಲೋಡಗಿ ಅವರು ಪ್ರಾರ್ಥಿಸಿದರು. ಶೋಭಾ ರಂಜೋಳಕರ್ ನಿರೂಪಿಸಿದರು. ಶಾಂತಾ ಭೀಮಸೇನ್‌ ರಾವ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.