ADVERTISEMENT

ಹೊಲದಲ್ಲಿ ಭೋಜನ ಸವಿದ ರೈತರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 6:31 IST
Last Updated 19 ಡಿಸೆಂಬರ್ 2017, 6:31 IST

ಸೇಡಂ: ರೈತನ ಪವಿತ್ರ ಹಬ್ಬವೆಂದೇ ಕರೆಯಲ್ಪಟ್ಟ ಎಳ್ಳಮಾವಾಸ್ಯೆ ಹಬ್ಬವನ್ನು ಸೋಮವಾರ ರೈತರು ತಾಲ್ಲೂಕಿನಾದ್ಯಂತ ಅತಿ ಸಂಭ್ರಮದಿಂದ ಆಚರಿಸಿದರು. ತಾಲ್ಲೂಕಿನ ಕೋಡ್ಲಾ, ಮಳಖೇಡ, ಮುಧೋಳ, ಕೋಲ್ಕುಂದಾ, ಆಡಕಿ, ತೆಲ್ಕೂರ, ಸೂರವಾರ, ಹಾಬಾಳ, ಕುರಕುಂಟಾ, ಮೀನಹಾಬಾಳ, ತೊಟ್ನಳ್ಳಿ, ಸಂಗಾವಿ, ಊಡಗಿ, ಅಳ್ಳೊಳ್ಳಿ, ಕಾನಗಡ್ಡಾ, ಬಟಗೇರಾ, ಹೈಯ್ಯಾಳ, ಮದಕಲ್, ರಂಜೋಳ, ಸಿಂಧನಮಡು, ಹುಳಗೋಳ, ಹಂದರಕಿ, ಇಟಕಾಲ್, ಗೌಡನಳ್ಳಿ, ನಾಮವಾರ, ಮೈಲ್ವಾರ, ಮದನಾ, ಕೋನಾಪೂರ , ಕುಕ್ಕುಂದಾ, ಯಡಗಾ, ಕಾಚೂರ, ಮುಗನೂರು ಸೇರಿದಂತೆ ತಾಲ್ಲೂಕಿನಾದ್ಯಂತ ಆಚರಿಸಲಾಯಿತು.

ಹಬ್ಬದ ನಿಮಿತ್ತ ಮಹಿಳೆಯರು ಶನಿವಾರ ಹಾಗೂ ಭಾನುವಾರ ಮನೆಯಲ್ಲಿ ಬಟ್ಟೆಗಳನ್ನು ತೊಳೆದು ಸ್ವಚ್ಛಗೊಳಿಸಿದ್ದರು. ಸೋಮವಾರ ಬೆಳಿಗ್ಗೆ ರೈತರು ಬೆಳಿಗ್ಗೆ ಎತ್ತು, ಆಕಳು, ವಾಹನಗಳನ್ನು ತೊಳೆದು ಅವುಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿದರು. ಮನೆಯಲ್ಲಿ ತರಹೇವಾರಿ ಅಡುಗೆಯನ್ನು ತಯಾರಿಸಿಕೊಂಡು ರೈತರು ಎತ್ತಿನಗಾಡಿಯಲ್ಲಿ ಕುಟುಂಬದ ಮಹಿಳೆಯರು, ಸಂಬಂಧಿಕರೊಂದಿಗೆ ಹೊಲಕ್ಕೆ ತೆರಳಿದರು. ಜೋಳ ಹಾಗೂ ಕಡಲೆ ಹೊಲದಲ್ಲಿ ಪಂಚಶಿಲೆಗಳನ್ನು ಇಟ್ಟು ಅವುಗಳಿಗೆ ವಿಭೂತಿ ಮತ್ತು ಕುಂಕುಮದಿಂದ ಪೂಜೆ ಮಾಡಿ, ದೀಪ ಬೆಳಗಿಸಿದರು. ನಂತರ ಪಂಚಶೀಲೆಗಳಿಗೆ ಹೂವಿನ ಹಾರ ಹಾಕಿ, ಮನೆಯಿಂದ ತಂದಿದ್ದ ನೈವೇದ್ಯವನ್ನು ಸಮರ್ಪಿಸಿದರು. ಕುಟುಂಬದ ಎಲ್ಲರೂ ಪಂಚ ಶಿಲೆಗಳಿಗೆ (ಪಂಚ ಪಾಂಡವರು ಎನ್ನುವ ನಂಬಿಕೆ ಇದೆ) ಹಾಗೂ ಭೂತಾಯಿಗೆ ನಮನ ಸಲ್ಲಿಸಿದರು. ನಂತರ ತಟ್ಟೆಯಲ್ಲಿನ ನೈವೇದ್ಯವನ್ನು ರೈತರು ‘ಓಲಿ ಓಲಿಗೋ, ಚೆಲ್ಲಂಪೋಲಿಗೋ’ ಎಂದು ಕೂಗುತ್ತಾ ಹೊಲದಲ್ಲಿ ಚರಗ ಚೆಲ್ಲಿದರು.

ಮನೆಯಲ್ಲಿ ತಯಾರಿಸಿದ ರೊಟ್ಟಿ, ಹೋಳಿಗೆ, ಜೋಳದ ಕಡುಬು, ಪುಂಡಿಪಲ್ಯಾ, ಉಳ್ಳಾಗಡ್ಡಿ ಖಾರಾ, ಶೇಂಗಾ ಹಿಂಡಿ, ತುಪ್ಪಾ, ಕುಸುಬೆ ಎಣ್ಣೆ, ಚಟ್ನಿ, ಸೇರಿದಂತೆ ಘಮಲು ಬರುವ ಅನೇಕ ತಿಂಡಿಯನ್ನು ರೈತರು ಸಂಬಂಧಿಕರೊಂದಿಗೆ ಸವಿದರು. ಎಲ್ಲವೂ ಮನೆಯಿಂದಲೇ ಕಟ್ಟಿಕೊಂಡು ಧಾರ್ಮಿಕ ಏಕತೆ, ಸಹೋದರತ್ವದಿಂದ ಕುಳಿತು ಊಟ ಮಾಡಿದರು. ನಂತರ ಹೊಲದಲ್ಲಿ ಜೋಕಾಲಿ ಆಡಿ ಸಂಭ್ರಮಿಸಿದರು. ವಿವಿಧ ರೀತಿಯ ಆಟಗಳನ್ನು ಆಡಿ ಖುಷಿಪಟ್ಟರು.

ADVERTISEMENT

‘ಬೆಳಿಗ್ಗೆ 10.30ಕ್ಕೆ ಮನೆಯಿಂದ ಹೊರನಡೆದ ರೈತರು ಸಂಜೆ 5 ಗಂಟೆಗೆ ಮನೆಯತ್ತ ಸಾಗುತ್ತಿರುವುದು ಕಂಡುಬಂತು. ರಸ್ತೆಗಳಲ್ಲಿ ಎತ್ತಿಗಾಡಿಯೊಂದಿಗೆ ಹೊಲಕ್ಕೆ ತೆರಳುವ ರೈತರ ದಂಡು ಸರ್ವೆ ಸಾಮಾನ್ಯವಾಗಿತ್ತು. ಕೆಲ ರೈತರು ಖಾಸಗಿ ವಾಹನ ಮಾಡಿಕೊಂಡು ಹೊಲಕ್ಕೆ ತೆರಳಿ ಊಟ ಸವಿದಿದ್ದು ಕಂಡುಬಂತು.

‘ಭೂಮಿಯಿಂದ ಪಡೆದದ್ದನ್ನು ಎಂದೂ ನಾವು ಮರೆಯದೇ ಭೂತಾಯಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಸಮರ್ಪಣೆ ಮಾಡುವುದು ನಮಗೆ ತೃಪ್ತಿ ಇದೆ. ಈ ಹಬ್ಬ ನನಗೆ ಅತೀವ ಸಂತೋಷ ನೀಡುತ್ತದೆ. ಈ ಹಬ್ಬದಂದು ಮನೆಯಲ್ಲಿನ ಪ್ರತಿಯೊಬ್ಬರೂ ಹೊಲಕ್ಕೆ ತೆರಳಿ, ಭೂತಾಯಿಗೆ ನಮನ ಸಲ್ಲಿಸುತ್ತೇವೆ. ಇದರಿಂದ ಭೂತಾಯಿ ಮತ್ತು ನಮ್ಮ ಸಂಬಂಧ ನಿರಂತರವಾಗಿ ಇರುತ್ತದೆ’ ಎಂದು ರೈತ ಭೀಮಣ್ಣಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.