ADVERTISEMENT

ಗಾಣಗಾಪುರ ದತ್ತ ಮಂದಿರ ಅಭಿವೃದ್ಧಿಗೆ ₹ 10 ಕೋಟಿ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 12:28 IST
Last Updated 17 ಅಕ್ಟೋಬರ್ 2019, 12:28 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಕಲಬುರ್ಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿಗೆ ₹ 10 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದರು.

ಗುರುವಾರ ಗಾಣಗಾಪುರಕ್ಕೆ ತೆರಳಿ ದತ್ತಾತ್ರೇಯ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

‘ಪ್ರಸಿದ್ಧ ಯಾತ್ರಾ ಸ್ಥಳವಾದ ದತ್ತ ಮಂದಿರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಹಣಕಾಸು ನೆರವು ನೀಡುವಂತೆ ಜಿಲ್ಲೆಯ ಜನಪ್ರತಿನಿಧಿಗಳು ಮನವಿ ಸಲ್ಲಿಸಿದ್ದರು. ಅದಕ್ಕಾಗಿ ತಕ್ಷಣ ಹಣವನ್ನು ಬಿಡುಗಡೆ ಮಾಡಿದ್ದೇನೆ’ ಎಂದರು.

ADVERTISEMENT

ಕೆಕೆಆರ್‌ಡಿಬಿಗೆ ಕಾರಜೋಳ ಅಧ್ಯಕ್ಷ: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಉರುಳಿದ ಬಳಿಕ ಖಾಲಿ ಉಳಿದಿದ್ದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಮೊದಲು ಹೈ–ಕ ಪ್ರದೇಶ ಅಭಿವೃದ್ಧಿ ಮಂಡಳಿ) ಸಚಿವ ಗೋವಿಂದ ಎಂ. ಕಾರಜೋಳ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನಾಲ್ಕೈದು ದಿನಗಳಲ್ಲಿ ಆದೇಶ ಹೊರಬೀಳಲಿದೆ ಎಂದೂ ಯಡಿಯೂರಪ್ಪ ಪ್ರಕಟಿಸಿದರು.

ಮಹಾರಾಷ್ಟ್ರದ ಜತ್ತ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ನೀರು ಬಿಡುವ ಕುರಿತು ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ, ‘ಬೇಸಿಗೆಯಲ್ಲಿ ರಾಜ್ಯದ ಕೃಷ್ಣಾ ಹಾಗೂ ಭೀಮಾ ನದಿಗೆ ಮಹಾರಾಷ್ಟ್ರ 4 ಟಿಎಂಸಿ ಅಡಿ ನೀರನ್ನು ಹರಿಸಿದರೆ ಪ್ರತಿಯಾಗಿ ವಿಜಯಪುರ ಜಿಲ್ಲೆ ಬಬಲೇಶ್ವರದ ತುಬಚಿ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದ್ದೇನೆ. ಈ ಬಗ್ಗೆ ಅಪಾರ್ಥ ಮಾಡಿಕೊಳ್ಳುವುದು ಬೇಡ. ಮಹಾರಾಷ್ಟ್ರದವರು ನಮಗೆ ದಾಯಾದಿಗಳೇನೂ ಅಲ್ಲ. ಆ ರಾಜ್ಯದ ಮುಖ್ಯಮಂತ್ರಿ ಮಹಾರಾಷ್ಟ್ರದಿಂದ ನೀರು ಕೊಟ್ಟರೆ, ಪ್ರತಿಯಾಗಿ ಕರ್ನಾಟಕದಿಂದಲೂ ಉಜನಿ ಜಲಾಶಯಕ್ಕೆ ನೀರು ಕೊಡುವಂತೆ ಕೇಳಿದ್ದರು. ಇದು ಇನ್ನೂ ಚರ್ಚೆಯ ಹಂತದಲ್ಲಿದೆಯೇ ಹೊರತು ನಿರ್ಧಾರವಾಗಿಲ್ಲ’ ಎಂದರು.

ನೀರು ಬಿಡುವ ಮೂಲಕ ರಾಜಕೀಯ ಗಿಮಿಕ್‌ ಮಾಡಿದ್ದಾರೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯೆ ಮೀಡಿದ ಯಡಿಯೂರಪ್ಪ, ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಗಿಮಿಕ್‌ ಮಾಡಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.