ADVERTISEMENT

10 ಸಾವಿರ ಎಕರೆ ಕಬ್ಬಿಗೆ ಕುತ್ತು

ಅಂತರ್ಜಲ ಮಟ್ಟ ಸಂಪೂರ್ಣ ಕುಸಿತ: ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 21 ಮೇ 2018, 6:36 IST
Last Updated 21 ಮೇ 2018, 6:36 IST
ನೀರಿಲ್ಲದೇ ಕಬ್ಬಿನ ಬೆಳೆ ಒಣಗುತ್ತಿರುವುದು
ನೀರಿಲ್ಲದೇ ಕಬ್ಬಿನ ಬೆಳೆ ಒಣಗುತ್ತಿರುವುದು   

ಅಫಜಲಪುರ: ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದರಿಂದ ತಾಲ್ಲೂಕಿನಲ್ಲಿ ಕಳೆದ ವರ್ಷ ನಾಟಿ ಮಾಡಿರುವ 20 ಸಾವಿರ ಎಕರೆ ಕಬ್ಬಿನಲ್ಲಿ ಸುಮಾರು 10 ಸಾವಿರ ಎಕರೆ ಒಣಗುತ್ತಿದ್ದು, ರೈತರು ಆತಂಕ ಪಡುವಂತಾಗಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ ಕಳೆದ ವರ್ಷ 20 ಸಾವಿರ ಎಕರೆಯಲ್ಲಿ ರೈತರು ಕಬ್ಬು ನಾಟಿ ಮಾಡಲಾಗಿದೆ. ಆದರೆ ಅಂತರ್ಜಲ ಮಟ್ಟ ಸಂಪೂರ್ಣ ಕುಸಿತವಾಗಿದ್ದರಿಂದ, ಕಬ್ಬಿನ ಬೆಳೆ ದಿನದಿಂದ ದಿನಕ್ಕೆ ಒಣಗುತ್ತಿದೆ. ಕೆಲವು ರೈತರು ಕಬ್ಬು ಉಳಿಸಿಕೊಳ್ಳಲು ಹನಿ ನೀರಾವರಿ ಅಳವಡಿಸಿದರು. ಕಬ್ಬಿಗೆ ನೀರು ಪೊರೈಕೆ ಮಾಡುವುದು ಸಾಧ್ಯವಾಗುತ್ತಿಲ್ಲ. ಇನ್ನೊಂದು ಕಡೆ ಮಳೆಯು ಬರುತ್ತಿಲ್ಲ. ಹೀಗಾಗಿ ರೈತರಿಗೆ ಕಬ್ಬಿನ ಬೆಳೆ ಪ್ರಸ್ತುತ ವರ್ಷ ಕೈಕೊಡುವ ಲಕ್ಷಣ ಕಂಡುಬರುತ್ತಿದೆ.

ಈ ಕುರಿತು ಕಬ್ಬು ಬೆಳೆ ಕಳೆದು ಕೊಳ್ಳುತ್ತಿರುವ ಅಫಜಲಪುರ ರೈತರಾದ ಯಲ್ಲಪ್ಪ ಮ್ಯಾಕೇರಿ ಹಾಗೂ ಅಂಬರೀಷ ಬುರಲಿ ಮಾಹಿತಿ ನೀಡಿ ಕಳೆದ ವರ್ಷ ನಮ್ಮ ಜಮೀನಿನಲ್ಲಿ 5 ಎಕರೆ ಕಬ್ಬು ನಾಟಿ ಮಾಡಿದ್ದೇವೆ.  ಆದರೆ ಕಳೆದ 3 ತಿಂಗಳಿಂದ ಕೊಳವೆ ಬಾವಿ ಸಂಪೂರ್ಣ ಬತ್ತಿ ಹೋಗಿದೆ. ಹೀಗಾಗಿ ಕಬ್ಬು ಒಣಗುತ್ತಿದೆ. ಕಳೆದ ವರ್ಷವೂ ಮಳೆ ಕಡಿಮೆಯಾಗಿದ್ದರಿಂದ ಯಾವುದೇ ಕೃಷಿ ಹೊಂಡಗಳು ಮತ್ತು ಕೆರೆಗಳು ತುಂಬದೇ ಇರುವುದರಿಂದ ಅಂತರ್ಜಲ ಮಟ್ಟ ಖಾಲಿಯಾಗಿದೆ. ಮಳೆಗಾಗಿ ಕಾಯುತ್ತಿದ್ದು, ಇನ್ನೂ ಒಂದು ವಾರ ಮಳೆ ಬರದಿದ್ದರೆ ಸಂಪೂರ್ಣ ಕಬ್ಬು ಒಣಗಿ ಹೋಗುತ್ತದೆ. ಎಕರೆಗೆ ಕನಿಷ್ಠ ₹1 ಲಕ್ಷ ನಷ್ಟವಾಗುತ್ತದೆ ಎಂದರು.

ADVERTISEMENT

ಈ ಕುರಿತು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮಾಹಿತಿ ನೀಡಿದರು. ‘ಸಹಜವಾಗಿಯೇ ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಭೀಮಾ ನದಿಯ ದಂಡೆಯ ಮೇಲಿರುವ ಕಬ್ಬು ಸ್ವಲ್ಪ ಚೆನ್ನಾಗಿದೆ. ಆದರೆ ಕೊಳವೆ ಮತ್ತು ತೆರೆದ ಬಾವಿಗಳನ್ನು ಅವಲಂಭಿಸಿರುವ ಕಬ್ಬು ಒಣಗುತ್ತಿದೆ. ಮುಂಗಾರು ಮಳೆ ಬೇಗನೆ ಆರಂಭವಾದರೆ ಬೇಸಿಗೆ ಬೆಳೆಗಳಾದ ಬಾಳೆ ಮತ್ತು ಕಬ್ಬು ಬೆಳೆಗಳಿಗೆ ಅನುಕೂಲವಾಗುತ್ತದೆ. ಹವಾಮಾನ ಇಲಾಖೆ ಪ್ರಕಾರ ಪ್ರಸ್ತುತ ವರ್ಷ ಸರಾಸರಿ ಮಳೆ ಚೆನ್ನಾಗಿ ಬರಲಿದೆ ಎಂದು ಹೇಳಿದರು.

ತಾಲ್ಲೂಕಿನ ಬಳೂರ್ಗಿ, ಬಡದಾಳ, ಕರಜಗಿ, ಹಳ್ಯಾಳ, ಅತನೂರ, ಅಫಜಲಪುರ ಪಟ್ಟಣ, ಚಿಂಚೋಳಿ, ಮಲ್ಲಾಬಾದ, ಮಾತೋಳಿ, ಅತನೂರ ಗ್ರಾಮಗಳಲ್ಲಿ ನಾಟಿ ಮಾಡಿರುವ ಕಬ್ಬು ಒಣಗಿ ಹೋಗುತ್ತಿದೆ.

ಹೀಗಾಗಿ ರೈತ ಕಬ್ಬು ಬೆಳೆಯಲು ದುಬಾರಿ ಬಡ್ಡಿ ದರದಲ್ಲಿ ಸಾಲ ಮಾಡಿದ್ದಾರೆ. ಇನ್ನೊಂದು ಕಡೆ ಕಳೆದ ವರ್ಷ ರೈತರು ರೇಣುಕಾ ಸಕ್ಕರೆ ಕಾರ್ಖಾನೆಗೆ ಪೊರೈಕೆ ಮಾಡಿದ ಕಬ್ಬಿನ ಬಿಲ್ಲು ಇದುವರೆಗೂ ಪಾವತಿಯಾಗದ ಕಾರಣ ನಾವು ಇನ್ನಷ್ಟು ಸಂಕಷ್ಟ ಪಡುವಂತಾಗಿದೆ ಎಂದು ಬಳೂರ್ಗಿಯ ರಮೇಶ ಪಾಟೀಲ, ಶಿವುಪುರದ ನಾಗಪ್ಪಗೌಡ ಪಾಟೀಲ ಹೇಳಿದರು.

– ಶಿವಾನಂದ ಹಸರಗುಂಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.