ADVERTISEMENT

ಕಲಬುರಗಿ: ವಿಭಾಗೀಯ ಕಚೇರಿಗೆ ₹ 1 ಸಾವಿರ ಹಂಚಿಕೆ!

ಕಲ್ಯಾಣ ಕರ್ನಾಟಕಕ್ಕೆ ಮತ್ತೆ ನಿರಾಸೆ; ಪ್ರಮುಖ ರೈಲುಗಳ ಬಗ್ಗೆ ಪ್ರಸ್ತಾವವಿಲ್ಲ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 5:52 IST
Last Updated 4 ಫೆಬ್ರುವರಿ 2023, 5:52 IST

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜನತೆಯ ಪ್ರಮುಖ ಬೇಡಿಕೆಯಾಗಿದ್ದ ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಆರಂಭ ಮತ್ತೆ ಕನಸಾಗಿಯೇ ಉಳಿದಿದ್ದು, ರೈಲ್ವೆ ಇಲಾಖೆಯು ವಿಭಾಗೀಯ ಕಚೇರಿ ಆರಂಭಕ್ಕೆ ಈ ಬಜೆಟ್‌ನಲ್ಲಿ ಕೇವಲ ₹ 1 ಸಾವಿರ ಹಂಚಿಕೆ ಮಾಡಿದೆ!

ಕಳೆದ ವರ್ಷವೂ ಇಷ್ಟೇ ಹಣವನ್ನೂ ಹಂಚಿಕೆ ಮಾಡಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಕಲಬುರಗಿಗೆ ರೈಲ್ವೆ ವಿಭಾಗವನ್ನು ಮಂಜೂರು ಮಾಡಿ ₹ 5 ಕೋಟಿ ಮೀಸಲಿಟ್ಟಿದ್ದರು. ವಿಭಾಗೀಯ ಕಚೇರಿಗಳ ನಿರ್ಮಾಣಕ್ಕಾಗಿ 40 ಎಕರೆ ಜಮೀನನ್ನು ಗುರುತಿಸಿದ್ದರು. ಯುಪಿಎ ಬಳಿಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ವಿಭಾಗೀಯ ಕೇಂದ್ರದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿತು. ಹಾಗಾಗಿಯೇ, ಉದ್ದೇಶಪೂರ್ವಕವಾಗಿ ಕಡಿಮೆ ಹಣವನ್ನು ಮಂಜೂರು ಮಾಡಲಾಗುತ್ತಿದೆ. ₹ 1 ಸಾವಿರದಲ್ಲಿ ವಿಭಾಗೀಯ ಕೇಂದ್ರ ಆರಂಭಿಸಲು ಸಾಧ್ಯವೇ. ಇದೊಂದು ಅಸಮರ್ಥ ಡಬಲ್ ಎಂಜಿನ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರೈಲ್ವೆ ಹೋರಾಟಗಾರ ಸುನೀಲ ಕುಲಕರ್ಣಿ.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರು ವಿಭಾಗೀಯ ಕಚೇರಿಗೆ ಮಂಜೂರಾತಿ ನೀಡಿದ ಬಳಿಕವೇ ಕಲಬುರಗಿಗೆ ಭೇಟಿ ನೀಡುವುದಾಗಿ ಘೋಷಿಸಿದ್ದರು. ಅಷ್ಟರಲ್ಲಿ ಅವರು ಕೋವಿಡ್‌ನಿಂದ ಮೃತಪಟ್ಟರು. ಆ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕದ ಅದರಲ್ಲೂ ಕಲ್ಯಾಣ ಕರ್ನಾಟಕದ ರೈಲ್ವೆ ಯೋಜನೆಗಳ ಬಗ್ಗೆ ಅತೀವ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಇದರಲ್ಲಿ ಮಧ್ಯ ರೈಲ್ವೆಯ ಲಾಬಿಯೂ ಇದೆ. ಕಲಬುರಗಿಗೆ ಪ್ರತ್ಯೇಕ ವಿಭಾಗ ರಚನೆಯಾದರೆ ಬಹುತೇಕ ವರಮಾನ ಸೊಲ್ಲಾಪುರ ವಿಭಾಗಕ್ಕೆ ನಿಂತು ಹೋಗುತ್ತದೆ. ಹಾಗಾಗಿಯೇ, ಈ ಪ್ರಸ್ತಾವವನ್ನು ಕಪಾಟಿನಲ್ಲಿರಿಸಲಾಗಿದೆ ಎನ್ನುತ್ತಾರೆ ಸುನೀಲ.

ADVERTISEMENT

ಗದಗ–ವಾಡಿ ಮಾರ್ಗಕ್ಕೆ ₹ 200 ಕೋಟಿ

ಬಹು ನಿರೀಕ್ಷಿತ ಗದಗ–ವಾಡಿ ನೂತನ ರೈಲು ಮಾರ್ಗಕ್ಕೆ ರೈಲ್ವೆ ಇಲಾಖೆ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ₹ 200 ಕೋಟಿಯನ್ನು ಮೀಸಲಿರಿಸಲಾಗಿದೆ. ಬೀದರ್–ನಾಂದೇಡ್ ನೂತನ ರೈಲು ಮಾರ್ಗಕ್ಕೆ ₹ 100 ಕೋಟಿ ಹಂಚಿಕೆ ಮಾಡಲಾಗಿದೆ. ಮುನಿರಾಬಾದ್–ಮೆಹಬೂಬ್‌ ನಗರ ನೂತನ ರೈಲು ಮಾರ್ಗಕ್ಕೆ ₹ 150 ಕೋಟಿ ಮೀಸಲಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.