ADVERTISEMENT

ಕಲಬುರಗಿ: ಜನಸ್ಪಂದನದಲ್ಲಿ 112 ಅರ್ಜಿ ಸ್ವೀಕಾರ, 11 ಇತ್ಯರ್ಥ

ಮೇಳಕುಂದಾ ಗ್ರಾಮಸ್ಥರ ಸಮಸ್ಯೆಗಳಿಗೆ ಕಿವಿಯಾದ ಶಾಸಕ ಅಲ್ಲಮಪ್ರಭು ಪಾಟೀಲ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 7:24 IST
Last Updated 3 ಆಗಸ್ಟ್ 2025, 7:24 IST
ಕಲಬುರಗಿ ತಾಲ್ಲೂಕಿನ ಮೇಳಕುಂದಾ ಗ್ರಾಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ವೃದ್ಧೆಯೊಬ್ಬರ ಅಹವಾಲು ಆಲಿಸಿದರು. ತಹಶೀಲ್ದಾರ್ ಆನಂದಶೀಲ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು
ಕಲಬುರಗಿ ತಾಲ್ಲೂಕಿನ ಮೇಳಕುಂದಾ ಗ್ರಾಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ವೃದ್ಧೆಯೊಬ್ಬರ ಅಹವಾಲು ಆಲಿಸಿದರು. ತಹಶೀಲ್ದಾರ್ ಆನಂದಶೀಲ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು   

ಕಲಬುರಗಿ: ಶಾಸಕ ಅಲ್ಲಮಪ್ರಭು ಪಾಟೀಲ ಅವರು ತಾಲ್ಲೂಕಿನ ಮೇಳಕುಂದಾ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ 112 ಅರ್ಜಿಗಳನ್ನು ಸ್ವೀಕರಿಸಿ 11 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿದರು.

ಜನಸ್ಪಂದನದಲ್ಲಿ ಅಹವಾಲು ಆಲಿಸಿ ಮಾತನಾಡಿದ ಶಾಸಕ ಅಲ್ಲಮಪ್ರಭು, ‘ಅಭಿವೃದ್ಧಿ ಬಗ್ಗೆ ಪ್ರಶ್ನೆ ಎತ್ತುವವರು ಇದನ್ನ ನೋಡಲಿ. ಜನರ ಅರ್ಜಿ, ಅಹವಾಲು ಸ್ವೀಕರಿಸಿ ಇತ್ಯರ್ಥ ಮಾಡಲಾಗುತ್ತಿದೆ. ಬಹುಕೋಟಿ ವೆಚ್ಚದ ಪ್ರಗತಿ ಯೋಜನೆ ಕೈಗೊಳ್ಳಲಾಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳೂ ಅಭಿವೃದ್ಧಿಯೇ ಅಲ್ಲವೆ’ ಎಂದು ಪ್ರಶ್ನಿಸಿದರು.

‘ಜನ ಕಚೇರಿಗೆ ಅಧಿಕಾರಿಗಳನ್ನು ಹುಡುಕಿಕೊಂಡು ಅಲೆಯಬಾರದೆಂದು ಪಂಚಾಯ್ತಿವಾರು ಜನಸ್ಪಂದನೆ ಮಾಡುತ್ತಿರುವೆ. ಇದು 6ನೇ ಜನಸ್ಪಂದನ. ಉಳಿದ ಅರ್ಜಿಗಳಿಗೆ ಮುಂಬರುವ ದಿನಗಳಲ್ಲಿ ಗಡುವಿನೊಳಗೇ ಪರಿಹಾರ ಸೂಚಿಸಲಾಗುತ್ತದೆ’ ಎಂದರು.

ADVERTISEMENT

‘ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ವಿಧವಾ ಪಿಂಚಣಿ, ವೃದ್ಧಾಪ್ಯ ಪಿಂಚಣಿಗಳ ಆದೇಶಗಳನ್ನು ಫಲಾನುಭವಿಗಳಿಗೆ ನೀಡಿದ ಶಾಸಕರು, ಬರುವ ದಿನಗಳಲ್ಲಿ ಅರ್ಹರಿಗೆ ಮನೆ ಮನೆಗೆ ಹೋಗಿ ಪಿಂಚಣಿ ಕೊಡಿಸಲಾಗುವುದು’ ಎಂದು ಹೇಳಿದರು.

ಜಲ ಜೀವನ್‌ ಮಿಷನ್‌ನಲ್ಲಿಯೂ ತುಂಬ ವಿಳಂಬವಾಗುತ್ತಿದೆ. ಕಾಮಗಾರಿ ಸರಿಯಾಗಿ ಆಗುತ್ತಿಲ್ಲವೆಂದು ದೂರುಗಳು ಬಂದವು. ಸಭೆಯಲ್ಲಿ ಹೊಸ ರೈತ ಸಂಪರ್ಕ ಕೇಂದ್ರದ ಬೇಡಿಕೆ ಕೇಳಿ ಬಂತು. 

ಮೇಳಕುಂದಾ ಸೇರಿದಂತೆ ಕಲಬುರಗಿ ದಕ್ಷಿಣ ಮತಕ್ಷೇತ್ರಕ್ಕೆ ತೊಗರಿ ಹಾನಿಯ ಬೆಳೆವಿಮೆ ಮೊತ್ತ ₹ 15.13 ಕೋಟಿ ಬಂದಿದೆ. ಇದರಿಂದ ಮೇಳಕುಂದಾದ 735 ಜನ ರೈತರಿಗೆ ಹಣ ಪಾವತಿಯಾಗಿದೆ ಎಂದರು.

ಸಭೆಯಲ್ಲಿ ತಹಶೀಲ್ದಾರ್‌ ಆನಂದಶೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೈಯ್ಯದ್‌ ಪಟೇಲ್‌, ಪಿಆರ್‌ಇ ಎಇಇ ಶಾಮಸುಂದರ ಕಾಳೇಕರ್‌, ಎಂಜಿನಿಯರ್ ಭಾಸ್ಕರ್‌, ಪಿಆರ್‌ಇ ಶರಣಯ್ಯ ಹಿರೇಮಠ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳಿದ್ದರು.

ಭೀಮರಾಯಗೌಡ ಮೇಳಕುಂದಾ, ಗ್ರಾ.ಪಂ. ಅಧ್ಯಕ್ಷ ಅಣ್ಣಾರಾಯ ಕೆರಮಗಿ, ಉಪಾಧ್ಯಕ್ಷೆ ರಾಜೇಶ್ವರಿ ದೊಡ್ಮನಿ, ಪಿಡಿಒ ಸುವರ್ಣಾ ಬಿರಾದಾರ, ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.

ನಮ್ಮೂರಿಗೆ ಬಸ್ ಬಿಡಲಾಗಿತ್ತು. ಅದನ್ನು ಸರಿಯಾಗಿ ಹೊರಳಿಸಲು ಜಾಗವಿಲ್ಲವೆಂದು ನಿಲ್ಲಿಸಿದ್ದಾರೆ. ಊರಲ್ಲಿ ಕೇವಲ ಹಣ ಕೊಟ್ಟವರಿಗೆ ಖಾತ್ರಿ ಯೋಜನೆ ಉದ್ಯೋಗ ನೀಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು
ಮಂಜುನಾಥ ಕಾಡನಾಳ ಗ್ರಾಮ
ಜನರ ಸಮಸ್ಯೆಗಳಿಗೆ ಕಿವಿಯಾಗುವ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಮೊದಲೇ ಸೂಚನೆ ನೀಡಿದ್ದರೂ ಹಲವು ಅಧಿಕಾರಿಗಳು ಬಂದಿಲ್ಲ. ಅವರಿಗೆ ಶೋಕಾಸ್ ನೋಟಿಸ್‌ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ
ಅಲ್ಲಮಪ್ರಭು ಪಾಟೀಲ ಶಾಸಕ

ಜೆಸ್ಕಾಂ ಅಧಿಕಾರಿಗಳ ವಿರುದ್ಧ ಲಂಚದ ಆರೋಪ:

ಮೇಳಕುಂದಾ (ಬಿ) ಗ್ರಾಮದಲ್ಲಿ ಮನೆಗಳ ಮಾಳಿಗೆಗಳಲ್ಲಿ ನಿಂತರೆ ಕೈಗೆ ನಿಲುಕುವ ಮಟ್ಟಿಗೆ ಮೇನ್​ ಲೈನ್​ ವೈರ್​ ಇದ್ದು ಅವುಗಳನ್ನು ಸ್ಥಳಾಂತರ ಮಾಡಬೇಕು. ಗ್ರಾಮದ ಮುಖ್ಯ ರಸ್ತೆಯ ಮಧ್ಯದಲ್ಲಿಯೇ ವಿದ್ಯುತ್​ ಕಂಬವಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕಂಬ ಸ್ಥಳಾಂತರಕ್ಕೆ ₹ 10 ಸಾವಿರ ಲಂಚ ಕೇಳುತ್ತಾರೆ. ನಾವೇಕೆ ಕೊಡಬೇಕು ಎಂದು ರೈತರು ಶಾಸಕರನ್ನು ಪ್ರಶ್ನಿಸಿದರು. ಟಿಸಿಗಳನ್ನು ಕೂಡಿಸಲು ಅರ್ಜಿ ಸಲ್ಲಿಸಿದರೆ ಬೇಕಾಬಿಟ್ಟಿ ಹಣ ಕೇಳುತ್ತಾರೆ. ವಿದ್ಯುತ್​ ಸಮಸ್ಯೆ ಇದ್ದು ಬಗೆಹರಿಸಿ ಎಂದು ಜನರು ಕೋರಿದರು. ಶಾಸಕ ಅಲ್ಲಮಪ್ರಭು ಅವರು ಜೆಸ್ಕಾಂ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.