ADVERTISEMENT

ಕಾಳಗಿ: 1412 ಮನೆಗಳಿಗೆ ನುಗ್ಗಿದ ನೀರು

ಕೋಡ್ಲಿ-ಮಹಾಗಾಂವ ಸಂಚಾರಕ್ಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 6:09 IST
Last Updated 15 ಅಕ್ಟೋಬರ್ 2020, 6:09 IST
ಕಾಳಗಿ ತಾಲ್ಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಪರಿಹಾರ ಕೇಂದ್ರ ತೆರೆಯಲಾಗಿದೆ
ಕಾಳಗಿ ತಾಲ್ಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಪರಿಹಾರ ಕೇಂದ್ರ ತೆರೆಯಲಾಗಿದೆ   

ಕಾಳಗಿ: ತಾಲ್ಲೂಕಿನಾದ್ಯಂತ ಎರಡುದಿನ ಬಿದ್ದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಾಗೆ ಬೆಣ್ಣೆತೊರಾ ಜಲಾಶಯದಿಂದ ಹೊರಬಿಟ್ಟ ನೀರಿಗೂ ನದಿಪಾತ್ರದ ಜನರು ಕಂಗಲಾಗಿದ್ದಾರೆ.

ಅಂದಹಾಗೆ ತಾಲ್ಲೂಕಿನ ಡೊಣ್ಣೂರ, ಹೆಬ್ಬಾಳ, ತೆಂಗಳಿ, ಕಲಗುರ್ತಿ, ಮಲಘಾಣ, ಕಣಸೂರ, ಕಂದಗೂಳ, ಹುಳಗೇರಾ, ಗೋಟೂರ, ನಿಪ್ಪಾಣಿ ಗ್ರಾಮದ ಒಟ್ಟು 1,412 ಮನೆಗಳ ಒಳಗೆ ನೀರು ನುಗ್ಗಿದೆ. ಹಾಗೆ 28 ಮನೆಗಳು ಉರುಳಿ ಬಿದ್ದಿವೆ. ಆರು ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆದು 1600 ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 103 ಕುರಿ, 135 ಕೋಳಿ, 200 ಹಂದಿ ಸಾವನ್ನಪ್ಪಿವೆ ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ತಿಳಿಸಿದ್ದಾರೆ.

ಕೋಡ್ಲಿ- ಮಹಾಗಾಂವ ಮುಖ್ಯರಸ್ತೆ ನಡುವಿನ ಸುಗೂರ ಕ್ರಾಸ್ ಬಳಿ ಡಾಂಬರ್ ರಸ್ತೆ ಮತ್ತು ಸೇತುವೆ ಕೊಚ್ಚಿಹೋಗಿದೆ. ಇದು ದುರಸ್ತಿಯಾಗುವರೆಗೂ ಕೋಡ್ಲಿ-ಮಹಾಗಾಂವ ನಡುವೆ ಯಾವೊಂದು ವಾಹನ ಸಂಚರಿಸಲು ಬರುವುದಿಲ್ಲ. ವಾಹನ ಸವಾರರು ಯಾವುದೇ ಕಾರಣಕ್ಕೂ ಈ ಮಾರ್ಗದಲ್ಲಿ ಬರಕೂಡದು ಎಂದು ರಟಕಲ್ ಪಿಎಸ್ಐ ಶಿವಶಂಕರ ಸುಬೇದಾರ ತಿಳಿಸಿದ್ದಾರೆ. ಸುಂಠಾಣ ಗ್ರಾಮದ ರಸ್ತೆ ನೀರಲ್ಲಿ ಮುಳುಗಡೆಯಾಗಿ ಜನರಿಗೆ ಓಡಾಡದಂತಾಗಿದೆ.

ADVERTISEMENT

ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ: ಕೋಡ್ಲಿ ಗ್ರಾಮದ ಶಶಿಕಾಂತ ಆಡಕಿ ಎಂಬುವರ 2ಎಕರೆ ಬಾಳೆ ತೋಟ ಮತ್ತು ರಮೇಶ ಆಡಕಿ ಎಂಬುವರ 7ಎಕರೆ ಕಬ್ಬಿನ ತೋಟ ಸಂಪೂರ್ಣ ಮಳೆಗೆ ಬಲಿಯಾಗಿ ರೈತರಿಗೆ ಅಪಾರ ನಷ್ಟವಾಗಿದೆ ಎನ್ನಲಾಗಿದೆ.

ಬೆಣ್ಣೆತೊರಾ ನೀರಿಗೆ ತತ್ತರಿಸಿದ ಕಣಸೂರ ಗ್ರಾಮದ ನೂರಕ್ಕೂ ಹೆಚ್ಚು ಕುಟುಂಬಸ್ಥರಿಗೆ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನಕ್ಕೆ ಸ್ಥಳಂತರಿಸಿ ಕಾಳಜಿ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.