ADVERTISEMENT

ಫ್ರೂಟ್ಸ್‌ನಲ್ಲಿ 1.95 ಲಕ್ಷ ರೈತರ ನೋಂದಣಿ ಬಾಕಿ

ಹೆಸರು ನೋಂದಣಿಗೆ ಕೆಲವರ ನಿರಾಸಕ್ತಿ; ವಿವಿಧ ಇಲಾಖೆಯಲ್ಲಿ ಸೇರ್ಪಡೆ ಅವಕಾಶ

ಓಂಕಾರ ಬಿರಾದಾರ
Published 12 ಡಿಸೆಂಬರ್ 2023, 7:16 IST
Last Updated 12 ಡಿಸೆಂಬರ್ 2023, 7:16 IST
ಫ್ರೂಟ್ಸ್‌ ಐಡಿ ಲೊಗೊ
ಫ್ರೂಟ್ಸ್‌ ಐಡಿ ಲೊಗೊ   

ಕಲಬುರಗಿ: ಸರ್ಕಾರದಿಂದ ನೀಡುವ ಪರಿಹಾರ ಸೇರಿ ಕೃಷಿ ಇಲಾಖೆಯಿಂದ ನೀಡುವ ಸೌಲಭ್ಯ ಪಡೆಯಲು ನೆರವಾಗುವ ಕೃಷಿ ಇಲಾಖೆಯ ತಂತ್ರಾಂಶ ಫಾರ್ಮರ್‌ ರಿಜಿಸ್ಟ್ರೇಷನ್‌ ಅಂಡ್‌ ಯೂನಿಫೈಡ್‌ ಬೆನೆಫಿಶಿಯರಿ ಇನ್‌ಫಾರ್ಮೇಷನ್‌ ಸಿಸ್ಟಮ್‌ (ಫ್ರೂಟ್ಸ್‌)ನಲ್ಲಿ ಇನ್ನೂ ಜಿಲ್ಲೆಯ 1,95,386 ರೈತರ ಹೆಸರು ನೋಂದಾವಣೆಯಾಗಿಲ್ಲ.

ಡಿಸೆಂಬರ್‌ 5ರ ಅಂತ್ಯಕ್ಕೆ ಜಿಲ್ಲೆಯಲ್ಲಿರುವ 7,27,772 ರೈತರ ಪ್ಲಾಟ್‌ಗಳಲ್ಲಿ, 5,32,386 ಪ್ಲಾಟ್‌ಗಳು  ನೋಂದಣಿಯಾಗಿವೆ. ಆದರೆ, ಇನ್ನೂ ಶೇ 25ಕ್ಕೂ ಹೆಚ್ಚು ರೈತರ ನೋಂದಣಿ ಮಾಡುವುದು ಬಾಕಿ ಇದೆ.

ಜಿಲ್ಲೆಯ 11 ತಾಲ್ಲೂಕುಗಳನ್ನು ರಾಜ್ಯ ಸರ್ಕಾರವು ಬರಪೀಡಿತ ಎಂದು ಘೋಷಿಸಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ವಿತರಣೆಗೂ ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರದಿಂದ ತಾತ್ಕಾಲಿಕ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದು ಫ್ರೂಟ್ಸ್‌ ನೋಂದಣಿ ಸಂಖ್ಯೆ ಇರುವ ರೈತರಿಗೆ ಪರಿಹಾರದ ಹಣ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ನೋಂದಣಿಗೆ ಹಿಂದೇಟು: ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಎಫ್ ಅನ್ವಯ ಸರ್ಕಾರರಿಂದ ಪರಿಹಾರ ಪಡೆಯಲು 2 ಹೆಕ್ಟೇರ್‌ ಹಾಗೂ ಅದಕ್ಕಿಂತ ಕಡಿಮೆ ಜಮೀನು ಹೊಂದಿದ ರೈತರು ಅರ್ಹತೆ ಹೊಂದಿದ್ದಾರೆ. ಅರ್ಹತೆ ಇರುವ ಅನೇಕರು ರೈತರು ಐದು ಎಕರೆ ಜಮೀನು ಹೊಂದಿರುವ ಮಾಹಿತಿಯನ್ನು ಮಾತ್ರ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಅಧಿಕೃತ ಜಾಲತಾಣದಲ್ಲಿ ಎಲ್ಲ ದಾಖಲೆಗೆ ಆಧಾರ್‌ ಜೋಡಣೆ ಕಡ್ಡಾಯ ಮಾಡಿರುವುದರಿಂದ ಸರ್ಕಾರ ನೀಡುತ್ತಿರುವ ಸೌಲಭ್ಯಗಳಾದ ಬಿಪಿಎಲ್‌ ಕಾರ್ಡ್‌, ಆರೋಗ್ಯ ಸೇವೆಗಳು ಸೇರಿದಂತೆ ವಿವಿಧ ಸರ್ಕಾರದ ಯೋಜನೆಯ ಲಾಭ ಪಡೆಯಲು ಕತ್ತರಿ ಹಾಕಬಹುದು ಎಂಬ ಕಾರಣಕ್ಕೆ ಕೆಲ ರೈತರು ತಮ್ಮಲ್ಲಿನ ಹೊಲದ ಮಾಹಿತಿ ದಾಖಲಿಸುತ್ತಿಲ್ಲ ಎನ್ನಲಾಗುತ್ತಿದೆ.

ವಿವಿಧ ಇಲಾಖೆಯಲ್ಲಿ ಸೇರ್ಪಡೆ ಅವಕಾಶ: ತಮ್ಮ ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಪಶು ಸಂಗೋಪನಾ ಇಲಾಖೆ, ರೇಷ್ಮೆ ಇಲಾಖೆಯಲ್ಲೂ ಹೆಸರು ಸೇರ್ಪಡೆಗೆ ಅವಕಾಶವಿದೆ.

ಎಫ್‍ಐಡಿಯನ್ನು ಮಾಡಿಸಲು ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನುಗಳ ಪಹಣಿ ಪ್ರತಿಗಳು, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಮೊಬೈಲ್ ಸಂಖ್ಯೆ ಅವಶ್ಯವಿದೆ. ಪರಿಶಿಷ್ಟ ವರ್ಗದ ರೈತರಿಗೆ ತಮ್ಮ ಜಾತಿ ಪ್ರಮಾಣ ಪತ್ರದ ಪ್ರತಿ ಹಾಗೂ ಪಾಸ್‍ಪೋರ್ಟ್ ಅಳತೆಯ ಒಂದು ಭಾವಚಿತ್ರ ಕಡ್ಡಾಯಗೊಳಿಸಿದೆ.

ನೋಂದಣಿಯಿಂದ ಲಾಭ ಏನು?

ಹೆಸರು ನೋಂದಣಿಯಿಂದ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆಗಳಲ್ಲಿ ಸರ್ಕಾರ ಸಿಗುವ ಯೋಜನೆಯ ಲಾಭ ಪಡೆಯಬಹುದಾಗಿದೆ.

ಪಿಎಂ ಕಿಸಾನ್‌ ಕಾರ್ಡ್‌ ಅನ್ವಯ ಸಾಲ ಪಡೆಯಲು ಹಾಗೂ ನೆರವು ಪಡೆಯಲು ಫ್ರೂಟ್ಸ್ ಐಡಿ ಬಹಳ ಮುಖ್ಯವಾಗಿದೆ. ಕೃಷಿ ಇಲಾಖೆಯಿಂದ ಬರ ಪರಿಹಾರ, ಸಹಾಯಧನ ಹಣ ಬಿಡುಗಡೆ, ಕೃಷಿ ಉಪಕರಣ ಖರೀದಿ, ರಸಗೊಬ್ಬರ, ಬೀಜ ವಿತರಣೆ, ಕೀಟನಾಟಕ ಔಷಧಗಳ ವಿತರಣೆಯಲ್ಲಿ ಇದು ಕಡ್ಡಾಯವಾಗಿದೆ.

ಫ್ರೂಟ್ಸ್‌ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಹಿತಿ 

ಸಮದ್‌ ಪಟೇಲ್‌
ಫ್ರೂಟ್ಸ್‌ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿದ ರೈತರ ಖಾತೆಗಳಿಗೆ ಮಾತ್ರ ಸರ್ಕಾರದ ಪರಿಹಾರ ಹಣ ಜಮೆಯಾಗಲಿದೆ. ನೋಂದಣಿ ಮಾಡದವರು ಬೇಗ ನೋಂದಾಯಿಸಿಕೊಳ್ಳಬೇಕು
. ಸಮದ್‌ ಪಟೇಲ್‌ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.