ಕಲಬುರಗಿ: ‘ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶಿರಪುರ ಮಾದರಿಯ ನಾಲಾ ಹೂಳೆತ್ತುವ ಮತ್ತು ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು, ಆಳಂದ ಶಾಸಕರು, ಗುತ್ತಿಗೆದಾರರು ಮತ್ತು ಎಂಜಿನಿಯರ್ ಸೇರಿಕೊಂಡು ₹ 20 ಕೋಟಿ ಲೂಟಿ ಮಾಡಿದ್ದಾರೆ. ಸರ್ಕಾರ ಕೂಡಲೇ ತನಿಖೆ ನಡೆಸಬೇಕು’ ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಸರಸಂಬಾ, ನಾಗಲೇಗಾಂವ, ಸಕ್ಕರಗಾ, ಅಂಬೇವಾಡ, ಕಿಣಿ ಅಬ್ಬಾಸ, ಚಿಂಚೋಳಿ (ಕೆ), ಚಿಂಚೋಳಿ (ಬಿ) ಮತ್ತು ಸಾವಳೇಶ್ವರ ಗ್ರಾಮಗಳಲ್ಲಿ ಈ ಹಿಂದೆ ನಾಲಾ ಹೂಳೆತ್ತುವ ಮತ್ತು ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿ ನಡೆಸಲಾಗಿತ್ತು. ಈಗ ಮತ್ತೆ ಅದೇ ಸ್ಥಳಗಳಲ್ಲಿ ನರೇಗಾ ಯೋಜನೆಯಡಿ ಪುನಃ ಕಾಮಗಾರಿ ನಡೆಸಲಾಗುತ್ತಿದೆ. ಕೂಲಿಕಾರರಿಂದ ಕೆಲಸ ಮಾಡಿಸುವ ಬದಲು ಯಂತ್ರಗಳನ್ನು ಬಳಸಲಾಗುತ್ತಿದೆ’ ಎಂದು ದೂರಿದರು.
‘ನರೇಗಾ ಕೂಲಿಕಾರರಿಗೆ ಮತ್ತು ಸರ್ಕಾರಕ್ಕೆ ಭಾರಿ ನಷ್ಟವಾಗುತ್ತಿದೆ. ಅಲ್ಲದೆ, ಸರಸಂಬಾ ಮತ್ತು ನಾಗಲೇಗಾಂವ ಗ್ರಾಮಗಳ ಹತ್ತಿರ ಕಳಪೆ ಕಾಮಗಾರಿ ನಡೆಸುವ ಜೊತೆಗೆ ಆಗಿರುವ ಕಾಮಗಾರಿಯ ಆಳ ಮತ್ತು ವಿಸ್ತೀರ್ಣ ಹೆಚ್ಚಿಸಿ ಸುಳ್ಳು ದಾಖಲೆ ಸೃಷ್ಟಿಸಿ ಸುಮಾರು ₹ 9.80 ಕೋಟಿ ಲೂಟಿ ಮಾಡುತ್ತಿರುವುದನ್ನು ಕೂಡಲೇ ತಡೆಹಿಡಿಯಬೇಕು. ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
‘ಆಳಂದ ಕ್ಷೇತ್ರದಲ್ಲಿ 200 ಕೆರೆ ನಿರ್ಮಾಣ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಬಿ.ಆರ್. ಪಾಟೀಲ ಅವರು, ಒಂದೇ ಒಂದು ಕೆರೆ ನಿರ್ಮಿಸಿಲ್ಲ. ಹಳೆಯ ಕಾಮಗಾರಿಗಳ ಸ್ಥಳದಲ್ಲಿಯೇ ಹೊಸ ಕಾಮಗಾರಿ ತಂದು ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆ. ನರೇಗಾದಲ್ಲಿ 456 ಬಾವಿಗಳನ್ನು ತಂದಿದ್ದು, ಯಂತ್ರಗಳನ್ನು ಬಳಸಿ ಕೆಲಸ ಮಾಡಿಸುತ್ತಿದ್ದಾರೆ. ಶಾಸಕರ ಸಹೋದರನ ಮಗನಿಂದಲೇ ಕಾಮಗಾರಿ ನಡೆಸಿ ಸರ್ಕಾರದ ಹಣ ಲೂಟಿ ಮಾಡಲಾಗುತ್ತಿದೆ. ಈ ಎಲ್ಲ ಅವ್ಯವಹಾರಗಳ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಆನಂದರಾವ ಕೋರಳ್ಳಿ, ಶಿವಪುತ್ರ ನಡಗೇರಿ, ಸಂತೋಷ ಹಾದಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.