ಕಲಬುರಗಿ: ಜಿಲ್ಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ತೀವ್ರ ಕೊರತೆಯಿಂದ ಕ್ರೀಡಾ ಚಟುವಟಿಕೆಗಳು ತೆವಳುತ್ತ ಸಾಗಿವೆ. ಬಾಲ್ಯದಿಂದಲೇ ಮಕ್ಕಳಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸಬೇಕೆಂಬ ಆಶಯಕ್ಕೆ ಈ ಕೊರತೆ ತೊಡಕಾಗಿದೆ.
ಜಿಲ್ಲೆಯಲ್ಲಿ 1,731 ಸರ್ಕಾರಿ ಪ್ರಾಥಮಿಕ ಶಾಲೆಗಳು (ಕಿರಿಯ ಹಾಗೂ ಹಿರಿಯ ಸೇರಿ) ಹಾಗೂ 298 ಪ್ರೌಢಶಾಲೆಗಳು ಇವೆ. ಒಟ್ಟು ಮಂಜೂರು ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು 650. ಆದರೆ, ಇವುಗಳ ಪೈಕಿ 328 ಹುದ್ದೆಗಳಲ್ಲಿ ಮಾತ್ರ ಈ ವಿಭಾಗದ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 322 ಸ್ಥಾನಗಳು ಖಾಲಿ ಇವೆ. ಹಲವು ಕಡೆ ಬೇರೆ ವಿಷಯದ ಶಿಕ್ಷಕರೇ ದೈಹಿಕ ಶಿಕ್ಷಣವನ್ನೂ ಬೋಧಿಸುತ್ತಿದ್ದು, ಗುಣಮಟ್ಟ ಹೇಳಿಕೊಳ್ಳುವಂತಿಲ್ಲ. ಅಲ್ಲದೆ ಆ ಶಿಕ್ಷಕರಿಗೆ ಇದು ಹೆಚ್ಚಿನ ಹೊರೆಯಾಗಿಯೂ ಕಾಡುತ್ತಿದೆ.
ಕ್ರೀಡೆಯಲ್ಲಿ ಸಾಧನೆಯ ಕನಸು ಹೊತ್ತ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಇದರಿಂದ ಪರಿತಪಿಸುವಂತಾಗಿದೆ. ಮೊದಲೇ ಕ್ರೀಡಾಂಗಣ, ಕ್ರೀಡಾ ಪರಿಕರದಂತಹ ಮೌಲಸೌಕರ್ಯಗಳ ಕೊರತೆಗಳಿಂದ ಬಳಲುತ್ತಿರುವ ಶಾಲಾ ಮಕ್ಕಳನ್ನು ಶಿಕ್ಷಕರ ಕೊರತೆ ಮತ್ತಷ್ಟು ಕಳವಳಕ್ಕೆ ದೂಡಿದೆ.
2007ರಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ನಡೆದಿಲ್ಲ. ಅತಿಥಿ ಶಿಕ್ಷಕರನ್ನಾಗಿ ತೆಗೆದುಕೊಳ್ಳಲು ಅವಕಾಶ ಇಲ್ಲ. ಇದರಿಂದ ಅರ್ಹತೆ ಹೊಂದಿರುವ ಅನೇಕ ನಿರುದ್ಯೋಗಿ ಯುವಕರು ಭ್ರಮನಿರಸನಗೊಂಡಿದ್ದಾರೆ.
‘ಸರ್ಕಾರ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಮೈದಾನಗಳ ಕೊರತೆಯೂ ಸಾಕಷ್ಟಿದೆ. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಅರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗವೂ ಸಿಕ್ಕಂತಾಗುತ್ತದೆ’ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (ಎಐಡಿಎಸ್‌ಒ) ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ. ಒತ್ತಾಯಿಸುತ್ತಾರೆ.
‘2007ರಲ್ಲಿ ಅಂದಿನ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು ಬೆಂಗಳೂರು ವಿವಿ ಪ್ರಾಧ್ಯಾಪಕರಾಗಿದ್ದ ಎಲ್.ಆರ್. ವೈದ್ಯನಾಥನ್ ನೇತೃತ್ವದಲ್ಲಿ ದೈಹಿಕ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿ ಸಮಿತಿಯೊಂದನ್ನು ರಚಿಸಿದ್ದರು. ಅದು ವರದಿಯನ್ನೂ ಸಲ್ಲಿಸಿತ್ತು. ವರದಿಯಲ್ಲಿ ಪ್ರಮುಖವಾಗಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಬೇಕು. ಮುಖ್ಯಶಿಕ್ಷಕ ಹುದ್ದೆಗೂ ಮುಂಬಡ್ತಿ ನೀಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಾಗಿತ್ತು. ಆದರೆ, ವರದಿಯ ಪ್ರಮುಖ ಅಂಶಗಳು ಅನುಷ್ಠಾನವಾಗಿಲ್ಲ’ ಎಂದು ದೈಹಿಕ ಶಿಕ್ಷಣ ಶಿಕ್ಷಕ ದಶರಥ ಬೇಸರ ವ್ಯಕ್ತಪಡಿಸಿದರು.
‘ಕನಿಷ್ಠ 50 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರಿರುವುದು ಕಡ್ಡಾಯ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಹೆಚ್ಚುವರಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಬೇಕು ಎಂಬುದನ್ನೂ ಈ ಸಮಿತಿ ಸೂಚಿಸಿತ್ತು. ಆದರೆ, ಇದಾವುದೂ ಅನುಷ್ಠಾನವಾಗಿಲ್ಲ’ ಎಂದು ಶಿಕ್ಷಕರೊಬ್ಬರು ದೂರುತ್ತಾರೆ.
‘ದೈಹಿಕ, ಮಾನಸಿಕವಾಗಿ ಶಾಲಾ ಮಕ್ಕಳು ಸದೃಢರಾಗುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಪ್ರಮುಖವಾದದ್ದು. ಸರ್ಕಾರ ಒತ್ತುಕೊಟ್ಟು ಶಿಕ್ಷಕರನ್ನು ನೇಮಿಸಿಕೊಳ್ಳಬೇಕು’ ಎಂದು ಶಹಾಬಾದ್‌ನ ತಿಮ್ಮಯ್ಯ ಬಿ. ಮಾನೆ ಆಗ್ರಹಿಸುತ್ತಾರೆ.
(ಪೂರಕ ಮಾಹಿತಿ: ಜಗನ್ನಾಥ ಡಿ. ಶೇರಿಕಾರ, ಸಿದ್ದರಾಜ ಎಸ್. ಮಲ್ಕಂಡಿ, ನಿಂಗಣ್ಣ ಜಂಬಗಿ)
ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಸದ್ಯಕ್ಕೆ ಹುದ್ದೆ ಖಾಲಿಯಿರುವ ಶಾಲೆಗಳ ಕ್ಯಾಂಪಸ್‌ನಲ್ಲಿರುವ ಇನ್ನೊಬ್ಬ ಶಿಕ್ಷಕ ಅಥವಾ ಬೇರೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆಸೂರ್ಯಕಾಂತ ಮದಾನೆ, ಡಿಡಿಪಿಐ, ಕಲಬುರಗಿ
ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಿಕೊಳ್ಳಬೇಕು. ವೃಂದ ಮತ್ತು ನೇಮಕಾತಿಗಳಲ್ಲಿ ಬದಲಾವಣೆ ಆಗಬೇಕು. ನಮಗೂ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ಅವಕಾಶ ನೀಡಬೇಕುರಾಜು ದೊಡ್ಡಮನಿ,ಜಿಲ್ಲಾ ಅಧ್ಯಕ್ಷ, ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘ
ನನ್ನ ಮಗಳು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು, ಮಕ್ಕಳ ಮಾನಸಿಕ ಬೆಳವಣಿಗೆ ಜೊತೆ ದೈಹಿಕ ಶಿಕ್ಷಣ ಸಹ ಅವಶ್ಯಕತೆ ಇದೆ. ಆದ್ದರಿಂದ ಕೂಡಲೇ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಸರ್ಕಾರ ಆದ್ಯತೆ ನೀಡಬೇಕುಮಲ್ಲಣ್ಣ ಗಂಜಿ, ಲಾಡ್ಲಾಪುರ ನಿವಾಸಿ
ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಮಕ್ಕಳ ದೈಹಿಕ ಚಟುವಟಿಕೆ, ಆಟೋಟ ಕ್ಷೀಣಿಸಿದ್ದು ಮೊಬೈಲ್ ಸೆಳೆತ ಹೆಚ್ಚಾಗಿದೆಪ್ರೇಮನಾಥ ಬಿರಾದಾರ-ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಇರಗಪಳ್ಳಿ ತಾ. ಚಿಂಚೋಳಿ
ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ನಡೆಯುತ್ತಿಲ್ಲ. ಅತಿಥಿ ಶಿಕ್ಷಕ ಹುದ್ದೆಗೂ ಅವಕಾಶವಿಲ್ಲ. ಇದು ನಿರುದ್ಯೋಗ ಹೆಚ್ಚಳಕ್ಕೂ ಕಾರಣವಾಗುತ್ತಿದೆಸಂತೋಷ ಸೀಳಿನ್, ಬಿಪಿಇಡಿ ಪದವೀಧರ, ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.