ಕಲಬುರಗಿ: ‘ಗ್ರಾಮೀಣ ಪ್ರದೇಶಗಳಲ್ಲಿ ಆರೈಕೆಯ ಗುಣಮಟ್ಟ ಹೆಚ್ಚಿಸಿ ಅತ್ಯಾಧುನಿಕ ತಾಂತ್ರಿಕ ಕೌಶಲದೊಂದಿಗೆ ರಾಜ್ಯದಲ್ಲಿ 43 ಕ್ರಿಟಿಕಲ್ ಕೇರ್ ಸೆಂಟರ್‌ಗಳು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಆರ್.ಗುಂಡೂರಾವ್ ಹೇಳಿದರು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಮಗ್ರ ಕ್ರಿಟಿಕಲ್ ಕೇರ್ ತರಬೇತಿ ಶಿಬಿರಕ್ಕೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ ಮತ್ತು ಇಂಡಿಯನ್ ರೆಸಸಿಟೇಶನ್ ಕೌನ್ಸಿಲ್ ಫೆಡರೇಷನ್ ಪಾಲುದಾರ ಸಂಸ್ಥೆಗಳ ಸಹಯೋಗದಲ್ಲಿ ಸಮಗ್ರ ತರಬೇತಿ ಶಿಬಿರ ಐದು ದಿನಗಳ ಕಾಲ ನಡೆಯುತ್ತಿದೆ’ ಎಂದು ಹೇಳಿದರು.
‘ವೈದ್ಯರು, ದಾದಿಯರು ತರಬೇತಿ ಪಡೆದು ವೆಂಟಿಲೇಟರ್ ನಿರ್ವಹಣೆ, ಸೆಪ್ಸಿಸ್ ಗುರುತಿಸುವಿಕೆ ಮತ್ತು ನಿರ್ವಹಣೆ, ಆಘಾತದಂತಹ ಸಂದರ್ಭದಲ್ಲಿ ಜೀವ ಉಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿದುಕೊಂಡು ತಾಂತ್ರಿಕ ಕೌಶಲ ವೃದ್ಧಿಸಿಕೊಂಡು ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸನ್ನದ್ಧರಾಗಬೇಕು’ ಎಂದು ಹೇಳಿದರು.
‘ಗ್ರಾಮೀಣ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ರೋಗಿಗಳ ಆರೋಗ್ಯ ಸುಧಾರಿಸುವುದು ಈ ತರಬೇತಿಯ ನಿರ್ಣಾಯಕ ಗುರಿಗಳಲ್ಲಿ ಒಂದಾಗಿದೆ. ಆರಂಭಿಕ ರೋಗ ನಿರ್ಣಯ ಮತ್ತು ಸೂಕ್ತವಾಗಿ ಮಧ್ಯಪ್ರವೇಶಿಸುವ ಕೌಶಲಗಳೊಂದಿಗೆ ವೈದ್ಯರನ್ನು ಸಜ್ಜುಗೊಳಿಸುವ ಮೂಲಕ ಮರಣ ಪ್ರಮಾಣ ಮತ್ತು ಅನಾರೋಗ್ಯವನ್ನು ಕಡಿಮೆ ಮಾಡಬಹುದು’ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಡಾ. ವಿವೇಕಾನಂದ ರೆಡ್ಡಿ, ಡಾ. ಸಿದ್ದು ಪಾಟೀಲ್, ಡಾ. ರಾಕೇಶ ಕಾಂಬಳೆ, ಡಿಪಿಎಂ ವೀರೇಶ ಜವಳಗೇರಿ, ಡಾ. ರುಕಿಯಾ ಅಸ್ನಾ ರಬಾಹ್, ಡಾ. ಸುಜೀತ್, ಮಂಜುನಾಥ ಕಂಬಾಳಿಮಠ ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.