ADVERTISEMENT

ಕಲಬುರಗಿ| ಅಕ್ರಮ ಹಣ ವರ್ಗಾವಣೆ; ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 6:07 IST
Last Updated 5 ಫೆಬ್ರುವರಿ 2023, 6:07 IST
ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ಗಳೊಂದಿಗೆ ಸಬ್‌ ಅರ್ಬನ್‌ ಪೊಲೀಸ್‌ ಠಾಣೆ ಸಿಬ್ಬಂದಿ ಇದ್ದರು
ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ಗಳೊಂದಿಗೆ ಸಬ್‌ ಅರ್ಬನ್‌ ಪೊಲೀಸ್‌ ಠಾಣೆ ಸಿಬ್ಬಂದಿ ಇದ್ದರು   

ಕಲಬುರಗಿ: ಬ್ಯಾಂಕ್ ಗ್ರಾಹಕರ ವಿವಿಧ ಖಾತೆಗಳಿಂದ ಅಕ್ರಮವಾಗಿ ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡು ನಂಬಿಕೆ ದ್ರೋಹ ಎಸಗಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ 4ನೇ ಜೆಎಂಎಫ್‌ಸಿ ನ್ಯಾಯಾಲಯವು ಅಪರಾಧಿಗೆ 5 ವರ್ಷ ಶಿಕ್ಷೆ, ₹ 20 ಸಾವಿರ ದಂಡ ವಿಧಿಸಿದೆ.

ನಗರದ ಬ್ರಹ್ಮಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸೂಪರ್‌ ಮಾರ್ಕೆಟ್‌ನ ಓರಿಯಂಟಲ್ ಬ್ಯಾಂಕ್ ಆಫ್‌ ಕಾಮರ್ಸ್‌ ಶಾಖೆಯಲ್ಲಿ ಗುಮಾಸ್ತನಾಗಿದ್ದ ವಂಶಿಕೃಷ್ಣ ಶಿಕ್ಷೆಗೆ ಒಳಗಾದವರು.

ಬ್ಯಾಂಕ್‌ನ ಸಿಂಗಲ್ ವಿಂಡೊ ನಿರ್ವಾಹಕನಾಗಿದ್ದ ವಂಶಿ ಕೃಷ್ಣ 2014ರ ಫೆ.15ರಿಂದ 2015ರ ಫೆ.15ರ ನಡುವೆ ಹಲವು ಗ್ರಾಹಕರ ಖಾತೆಗಳಿಂದ ₹ 11,20,142 ಡ್ರಾ ಮಾಡಿಕೊಂಡು, ತನ್ನ ಸ್ವಂತಕ್ಕಾಗಿ ಬಳಸಿಕೊಂಡಿದ್ದ. ನಂಬಿಕೆ ದ್ರೋಹ ಹಾಗೂ ಅಪರಾಧ ಸಾಕ್ಷ್ಯ ನಾಶಕ್ಕೆ ಓಚರ್‌ಗಳನ್ನು ನಾಶ ಮಾಡಿದ್ದ ಕೃತ್ಯಗಳ ಸಂಬಂಧ ಪ್ರಕರಣ ದಾಖಲಾಗಿದ್ದವು.

ADVERTISEMENT

ದೂರಿನ ಆಧಾರದ ಮೇಲೆ ತನಿಖಾಧಿಕಾರಿಯಾಗಿದ್ದ ಎಸ್‌.ಎಸ್‌. ತೇಲಿ ಅವರು ತನಿಖೆ ನಡೆಸಿ, ಆರೋಪಿತನ ವಿರುದ್ಧ ನ್ಯಾಯಾಲಯದ ಮುಂದೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 4ನೇ ಜೆಎಂಎಫ್‌ಸಿ ನ್ಯಾಯಾಧೀಶ ದಸ್ತಗೀರ ಸಾಬ್ ಅಬ್ದುಲ್ ರಜಾಕ್ ಮುಲ್ಲಾ ಅವರು ಅಪರಾಧಿಗೆ ಐ‍ಪಿಸಿ 408, 409 ಕಲಂ ಅಡಿಯ 3 ವರ್ಷ ಶಿಕ್ಷೆ ಹಾಗೂ ₹ 10 ಸಾವಿರ ದಂಡ ಹಾಗೂ ಐಪಿಸಿ 201 ಕಲಾಂ ಅಡಿಯ ಅಪರಾಧಕ್ಕೆ 2 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ವೀಣಾ ರೆಡ್ಡಿ ವಾದ ಮಂಡಿಸಿದರು. ಪೊಲೀಸ್ ಕಾನ್‌ಸ್ಟೆಬಲ್ ಬಸವಂತರಾಯ ಮತ್ತು ಆಂಜನೇಯ ಅಪರಾಧಿಯನ್ನು ನ್ಯಾಯಾ ಲಯದ ಮುಂದೆ ಹಾಜರಿಪಡಿಸಿದರು.

ಪಾದಚಾರಿ ಸುಲಿಗೆ; ಒಬ್ಬ ಬಂಧನ

ಕಲಬುರಗಿ: ನಗರದ ರೇವಣಸಿದ್ದೇಶ್ವರ ಕಾಲೊನಿಯಲ್ಲಿ ವ್ಯಕ್ತಿಯೊಬ್ಬರಿಂದ ಸುಲಿಗೆ ಮಾಡಿದ್ದ ಒಬ್ಬ ಆರೋಪಿಯನ್ನು ಸಬ್‌ ಅರ್ಬನ್ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿ ಸೈಯದ್ ಅಲ್ತಾಫ್(19) ಬಂಧಿತ ಆರೋಪಿ. ಆತನಿಂದ ಮೂರು ಮೊಬೈಲ್‌ ಫೋನ್‌ ವಶಕ್ಕೆ ಪಡೆಯಲಾಗಿದ್ದು, ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರೇವಣಸಿದ್ದೇಶ್ವರ ಕಾಲೊನಿ ನಿವಾಸಿ ಶರಣಬಸಪ್ಪ ಉಪ್ಪಿನ ಜ.23ರ ರಾತ್ರಿ 9ರ ವೇಳೆಗೆ ನಡೆದುಕೊಂಡು ಹೋಗುತ್ತಿದ್ದರು. ಬೈಕ್‌ ಮೇಲೆ ಬಂದ ಸುಲಿಗೆಕೋರರು ಶರಣಬಸಪ್ಪ ಬಳಿ ಇದ್ದ ₹ 10 ಸಾವಿರ ಮೌಲ್ಯದ ಮೊಬೈಲ್, 5 ಗ್ರಾಂ. ಚಿನ್ನದ ಉಂಗರು ಸುಲಿಗೆ ಮಾಡಿ ಪಾರಾರಿ ಆಗಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು, ಆರೋಪಿಯನ್ನು ಹಾಗರಗಾ ಕ್ರಾಸ್ ಸಮೀಪ ಬಂಧಿಸಲಾಗಿದೆ ಎಂದಿದ್ದಾರೆ.

ಕಾರ್ಯಾಚರಣೆಯಲ್ಲಿ ಸಬ್ ಅರ್ಬನ್‌ ಪೊಲೀಸ್ ಠಾಣೆಯ ಪಿಐ ರಮೇಶ ಕಾಂಬಳೆ, ಹೆಡ್‌ಕಾನ್‌ಸ್ಟೆಬಲ್ ಸಿರಾಜ್ ಪಟೇಲ್, ಕಾನ್‌ಸ್ಟೆಬಲ್‌ಗಳಾದ ಮಲ್ಲಿಕಾರ್ಜುನ, ಪ್ರಕಾಶ, ನಾಗೇಂದ್ರ, ಅನಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.