ADVERTISEMENT

ಗಡಿನಾಡಿನಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 6:12 IST
Last Updated 10 ಜನವರಿ 2018, 6:12 IST

ಚಿಂಚೋಳಿ: ‘ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿರುವ ಕಲಬುರ್ಗಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ.ಉಮೇಶ ಜಿ. ಜಾಧವ್‌ ತಿಳಿಸಿದರು. ಅವರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಮ್ಮೇಳನದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

‘ಗಡಿನಾಡಿನಲ್ಲಿ ಶೇ 25ರಷ್ಟು ಜನರಿಗೆ ಈಗಲೂ ಕನ್ನಡ ಬರುವುದಿಲ್ಲ. ಈ ನಿಟ್ಟಿನಲ್ಲಿ ಸಮ್ಮೇಳನಕ್ಕೆ ವಿಶೇಷ ಮಹತ್ವವಿದೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಲು ಸಮ್ಮೇಳನ ವೇದಿಕೆಯಾಗಲಿದೆ. ಹೀಗಾಗಿ, ಸಮ್ಮೇಳನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದರ ಜತೆಗೆ ದೂರದ ಕಡೆಗಳಿಂದ ಬರುವ ಪ್ರತಿನಿಧಿಗಳಿಗೆ ಹಾಗೂ ಸಾಹಿತಿಗಳಿಗೆ ನೆರವಾಗಬೇಕು. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು’ ಎಂದು ಕರೆ ನೀಡಿದರು.

ಕಸಾಪ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ಮಾತನಾಡಿ, ‘ಸಮ್ಮೇಳನದ ಯಶಸ್ಸಿಗಾಗಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಅಗತ್ಯವಾದ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ 4 ಬಾರಿ ಪೂರ್ವಸಿದ್ಧತಾ ಸಭೆ ನಡೆಸಲಾಗಿದೆ’ ಎಂದರು.

ADVERTISEMENT

‘ಜ. 20 ಹಾಗೂ 21ರಂದು ನಡೆಯುವ ಸಮ್ಮೇಳನದಿಂದ ಗಡಿಭಾಗ ದಲ್ಲಿ ಕನ್ನಡ ಅನುರಣಿಸುವಂತಾ ಗಲಿದೆ. ನಾಡು, ನುಡಿ ಬಗ್ಗೆ ಜನರಲ್ಲಿ ಅರಿವು ಮೂಡಲಿದೆ. ಜತೆಗೆ, ಸ್ಥಳೀಯ ಕಲಾವಿದರೊಳಗೊಂಡ ಕಲಾತಂಡ ಗಳು ನಮ್ಮ ಸಾಂಸ್ಕೃತಿಕ ಹಿರಿಮೆ ಸಾರು ವುದರಿಂದ ಈ ಭಾಗದ ಬಗ್ಗೆ ಅಭಿಮಾನ ಮೇಳೈಸಲಿದೆ’ ಎಂದು ಹೇಳಿದರು.

ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಇಒ ಶಿವಾಜಿ ಡೋಣಿ, ಪುರಸಭೆ ಮುಖ್ಯಾಧಿಕಾರಿ ಮನೋಜ ಕುಮಾರ ಗುರಿಕಾರ, ತಾ.ಪಂ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಪಾಟೀಲ, ಜಗನ್ನಾಥರೆಡ್ಡಿ ರಂಜೋಳ್‌, ಬಿ.ನಾಗರೆಡ್ಡಿ, ಜಯಪ್ಪ ಚಾಪಲ್‌ ಮಾತನಾಡಿದರು.

ಲೋಕೋಪಯೋಗಿ ಇಲಾಖೆಯ ಎಇಇ ವೀರಣ್ಣ ಕುಣಿಕೇರಿ, ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದ ಎಇಇ ಅಶೋಕ ತಳವಾಡೆ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧನರಾಜ ಬೊಮ್ಮಾ, ಬಿಸಿಎಂನ ಶರಣಬಸಪ್ಪ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಪ್ರಭುಲಿಂಗ್‌, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಚಪ್ಪ ಭದ್ರಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.