ADVERTISEMENT

‘ವಚನ ಸಾಹಿತ್ಯ ವಿಶ್ವಕ್ಕೆ ಮಾರ್ಗದರ್ಶಿ’

‘ವಚನ ಸಂಕ್ರಾಂತಿ’ ಕಾರ್ಯಕ್ರಮದಲ್ಲಿ ಡಾ.ಸರ್ವಮಂಗಳಾ ಶಂಕರ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 8:57 IST
Last Updated 14 ಜನವರಿ 2018, 8:57 IST
ಕಲಬುರ್ಗಿಯಲ್ಲಿ ಶನಿವಾರ ನಡೆದ ವಚನ ಸಂಕ್ರಾಂತಿ ಕಾರ್ಯಕ್ರಮವನ್ನು ಡಾ.ಸರ್ವಮಂಗಳಾ ಶಂಕರ ಅವರು ವಚನ ಗಾಯನದ ಮೂಲಕ ಉದ್ಘಾಟಿಸಿದರು
ಕಲಬುರ್ಗಿಯಲ್ಲಿ ಶನಿವಾರ ನಡೆದ ವಚನ ಸಂಕ್ರಾಂತಿ ಕಾರ್ಯಕ್ರಮವನ್ನು ಡಾ.ಸರ್ವಮಂಗಳಾ ಶಂಕರ ಅವರು ವಚನ ಗಾಯನದ ಮೂಲಕ ಉದ್ಘಾಟಿಸಿದರು   

ಕಲಬುರ್ಗಿ: ‘ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ. ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಎಲ್ಲವನ್ನೂ ಮೀರಿಸುವ ಮಾನವೀಯ ಸಾಹಿತ್ಯವಾಗಿ ಅದು ರೂಪುಗೊಂಡಿದೆ’ ಎಂದು ಮೈಸೂರಿನ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸರ್ವಮಂಗಳಾ ಶಂಕರ ಸಲಹೆ ನೀಡಿದರು.

ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿ ಆಶ್ರಯದಲ್ಲಿ ಶನಿವಾರ ನಡೆದ ‘ವಚನ ಸಂಕ್ರಾಂತಿ’ ಕಾರ್ಯಕ್ರಮ ಹಾಗೂ ವಚನ ಸಂಗೀತ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವ ತತ್ವ, ವಚನ ಸಾಹಿತ್ಯವನ್ನು ಜಗತ್ತು ಆವರಿಸಿಕೊಳ್ಳುವಂತೆ ಮಾಡಬೇಕು. ಈ ಭಾಗದ ಪ್ರತಿಭೆಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು’ ಎಂದರು.

ADVERTISEMENT

ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ‘ವಚನ ಸಾಹಿತ್ಯದ ಸಾರವನ್ನು ಎಲ್ಲರೂ ಅರಿಯಬೇಕು. ಇವು ಎಲ್ಲರಿಗೂ ಸರಳವಾಗಿ ಅರ್ಥವಾಗುತ್ತವೆ. ಅವುಗಳನ್ನು ಅರಿತರೆ ಜೀವನ ಪಾವನವಾಗುತ್ತದೆ’ ಎಂದರು.

‘ವಚನ ಸಾಹಿತ್ಯ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ಅವುಗಳನ್ನು ಜೀವನದ ಅಂತ್ಯದ ವರೆಗೂ ಅನುಸರಿಸಬೇಕು. ಆಗ ಜೀವನ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

‘ಪುಸ್ತಕದಲ್ಲಿರುವ ವಚನ ಸಾಹಿತ್ಯವನ್ನು ಮಸ್ತಕದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯ ವಚನ ಸಂಗೀತ ಶಾಲೆಗಳಿಂದ ಮಾತ್ರ ಸಾಧ್ಯವಾಗಲಿದೆ’ ಎಂದು ಮಾಜಿ ಸಚಿವೆ ಡಾ.ಲೀಲಾದೇವಿ ಆರ್‌.ಪ್ರಸಾದ್‌ ಹೇಳಿದರು.


ಕಲಾವಿದ ಪಂಡಿತ್ ಸಾತಲಿಂಗಪ್ಪ ದೇಸಾಯಿ ಕಲ್ಲೂರ  ಅವರನ್ನು ಸನ್ಮಾನಿಸಲಾಯಿತು.

ಕಲಬುರ್ಗಿ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸರಾವ್‌ ಐ.ಬಿ., ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕಿ ಅಂಜನಾ ಸಿ.ಯಾತನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮುಖ್ಯ ಅತಿಥಿಯಾಗಿದ್ದರು.  ಕಲಬುರ್ಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ,  ಡಾ.ವೀರಣ್ಣ ದಂಡೆ, ಎಸ್‌.ಐ ಭಾವಿಕಟ್ಟಿ ಇದ್ದರು.

ಡಿ.ಕುಮಾರ್‌ದಾಸ್‌, ಶಂಕರಪ್ಪ ಹೂಗಾರ, ಅಶ್ವಿನಿ ರಾಜಕುಮಾರ ಹಿರೇಮಠ, ವಿಜಯಲಕ್ಷ್ಮಿ ಕೆಂಗನಾಳ, ರೇವಯ್ಯ ವಸ್ತ್ರದಮಠ, ಜಡೇಶ ಹೂಗಾರ, ಎಂ.ವೈ. ಸುರಪುರ, ಸುಧಾರಾಣಿ, ರಾಜಕುಮಾರ ಹಿರೇಮಠ ತಂಡದಿಂದ ವಚನ ಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.