ADVERTISEMENT

ಸಾಧನೆಗೆ ಯೋಜನೆ ಬಹಳ ಮುಖ್ಯ

ಪ್ರಾಂಶುಪಾಲ ಸಿದ್ದಪ್ಪ ಭಗವತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 11:33 IST
Last Updated 26 ಜನವರಿ 2018, 11:33 IST

ಕಲಬುರ್ಗಿ: ‘ಯಶಸ್ಸು ಸಾಧಿಸಲು ಸುಂದರ ಕನಸು, ಅದಕ್ಕೆ ತಕ್ಕಂತಹ ಯೋಜನೆ, ಯೋಚನೆಗಳು ಬಹಳ ಮುಖ್ಯ. ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ’ ಎಂದು ಮದರ್ ತೆರೆಸಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಹೇಳಿದರು.

ಚಿಂಚೋಳಿಯ ಆದರ್ಶ ಪ್ರೌಢಶಾಲೆ, ವೀರೇಂದ್ರ ಪಾಟೀಲ ಪಬ್ಲಿಕ್ ಸ್ಕೂಲ್‌ ಹಾಗೂ ಹಾರಕೂಡ ಚನ್ನಬಸವೇಶ್ವರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ‘ವ್ಯಕ್ತಿತ್ವ ವಿಕಸನ ಹಾಗೂ ಇಂಗ್ಲಿಷ್ ಭಾಷೆಯ ಮಹತ್ವ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮಗೆ ಓದಿದ್ದು ನೆನಪಿರುವುದಿಲ್ಲ. ನಮ್ಮ ನೆನಪಿನ ಶಕ್ತಿ ಕಡಿಮೆ ಇದೆ. ಸ್ಮರಣ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು’ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ತಪ್ಪು ಕಲ್ಪನೆ. ನಿಮಗಿಷ್ಟವಾದ ಚಲನಚಿತ್ರಗೀತೆಗಳು ನೆನಪಿನಲ್ಲಿರುತ್ತವೆ. ಗೆಳೆಯರೊಡನೆ ಪ್ರವಾಸದಲ್ಲಿ ಕಳೆದ ಸಿಹಿ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಎಂದಾದರೆ, ನಿಮ್ಮ ಸ್ಮರಣ ಶಕ್ತಿ ಉತ್ತಮವಾಗಿದೆ ಎಂದರ್ಥ. ಇದನ್ನು ಹೆಚ್ಚಿಸಲು ಯಾವುದೇ ಔಷಧಿ ಇಲ್ಲ. ಇಷ್ಟ ಪಟ್ಟು ಮಾಡಿದ ಯಾವುದೇ ಕೆಲಸ ಖಂಡಿತವಾಗಿಯೂ ನೆನಪಿನಲ್ಲಿರುತ್ತದೆ. ಪೋಷಕರ ಒತ್ತಾಯಕ್ಕೆ ಅಥವಾ ಪರೀಕ್ಷೆಗಾಗಿ ಓದಿದರೆ ಅದು ಬಹು ಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಹೀಗಾಗಿ ನೀವು ಆಸಕ್ತಿ ವಹಿಸಿ ಇಷ್ಟ ಪಟ್ಟು ಓದಬೇಕು, ಅದನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನನಗೆ ಇಂಗ್ಲಿಷ್ ವ್ಯಾಕರಣ ಗೊತ್ತಿದೆ. ಆದರೆ ಮಾತನಾಡಲು ಬರುತ್ತಿಲ್ಲ, ಇದಕ್ಕೆ ಕಾರಣವೇನು’ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ‘ವ್ಯಾಕರಣ ಕಲಿತ ಮಾತ್ರಕ್ಕೆ ಮಾತನಾಡಲು ಬರುವುದಿಲ್ಲ. ಯಾವ ಭಾಷೆಯನ್ನು ನಾವು ಸದಾ ಕೇಳುತ್ತೇವೆಯೋ ಆ ಭಾಷೆಯನ್ನು ನಾವು ವ್ಯಾಕರಣ ಕಲಿಯದೆ ಸುಲಭವಾಗಿ ಹಾಗೂ ಸರಿಯಾಗಿ ಮಾತನಾಡಬಹುದು. ಯಾವತ್ತೂ ಭಾಷೆ ಮೊದಲು, ನಂತರ ವ್ಯಾಕರಣ’ ಎಂದು ತಿಳಿಸಿದರು.

‘ಇಂಗ್ಲಿಷ್ ಭಾಷಾ ಕೌಶಲಗಳನ್ನು ಹೇಗೆ ಉತ್ತಮಗೊಳಿಸಿಕೊಳ್ಳಬಹುದು’ ಎಂಬ ಪ್ರಶ್ನೆಗೆ, ‘ನಿಮಗೆ ಅರ್ಥವಾಗುವ ಕತೆ, ಇಂಗ್ಲಿಷ್ ದಿನಪತ್ರಿಕೆಗಳನ್ನು ಓದಬೇಕು. ಇಂಗ್ಲಿಷ್ ಸುದ್ದಿ ವಾಹಿನಿಗಳನ್ನು ವೀಕ್ಷಿಸಬೇಕು. ತಪ್ಪುಗಳ ಬಗ್ಗೆ ಹೆಚ್ಚು ಚಿಂತಿಸದೆ ಅವಕಾಶ ದೊರೆತಾಗ ಮಾತನಾಡಬೇಕು’ ಎಂದರು.

ಕಾಲೇಜಿನ ಆಡಳಿತಾಧಿಕಾರಿ ಪ್ರಕಾಶ್ ಕವಿಶೆಟ್ಟಿ, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

**

ಎನ್‌ಸಿಇಆರ್‌ಟಿ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲಭ್ಯವಿರುವ ಆಡಿಯೊಗಳನ್ನು ವಿದ್ಯಾರ್ಥಿಗಳು ತಪ್ಪದೇ ಆಲಿಸಬೇಕು. ಇದರಿಂದ ಭಾಷಾ ಕೌಶಲ ವೃದ್ಧಿಯಾಗುತ್ತದೆ.

–ಸಿದ್ದಪ್ಪ ಭಗವತಿ, ಪ್ರಾಂಶುಪಾಲ, ಮದರ್ ತೆರೆಸಾ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.