ADVERTISEMENT

‘ಕೋಲಿ ನೌಕರರ ಭವನ ನಿರ್ಮಿಸಿ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 8:36 IST
Last Updated 29 ಜನವರಿ 2018, 8:36 IST

ಕಲಬುರ್ಗಿ: ‘ಜಿಲ್ಲೆಯಲ್ಲಿ ಕೋಲಿ ಸಮಾಜದ ವಸತಿ ನಿಲಯವನ್ನು ಆರಂಭಿಸಬೇಕು, ಸಮಾಜದ ನೌಕರರ ಭವನ ನಿರ್ಮಾಣ ಮಾಡಬೇಕು’ ಎಂದು ಕರ್ನಾಟಕ ಲೋಕಾಸೇವಾ ಆಯೋಗದ ಸದಸ್ಯೆ ಡಾ. ನಾಗಾಬಾಯಿ ಬಿ.ಬುಳ್ಳಾ ಒತ್ತಾಯಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಕೋಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಾವೇಶ ಹಾಗೂ ಸ್ನೇಹ ಸಂಗಮ ಪರಿಚಯ ಗ್ರಂಥ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲಾ ಕೋಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಮಾಜದವರನ್ನು ಒಂದುಗೂಡಿಸಿ ಸುಮಾರು 1,212 ಜನರನ್ನು ಸದಸ್ಯರ
ನ್ನಾಗಿ ಮಾಡಲಾಗಿದೆ. ಅವರೆಲ್ಲರ ಮಾಹಿತಿಯನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ಸಂತೋಷದ ವಿಷಯ’ ಎಂದರು.

ADVERTISEMENT

‘ಕೋಲಿ ಸಮಾಜದವರು ಸಂಘಟಿತರಾಗಬೇಕಾದರೆ ಇಂತಹ ಸಂಘ, ಸಂಸ್ಥೆಗಳ ಜೊತೆ ನಿರಂತರವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಅಲ್ಪಸೇವೆಯನ್ನು ಸಮಾಜಕ್ಕೆ ಸಲ್ಲಿಸಬೇಕು’ ಎಂದು ಹೇಳಿದರು.

ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಕಾರ್ಯಾಧ್ಯಕ್ಷ ಡಾ. ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿ, ‘ನಿಜಶರಣ ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯ ಅವರ ತತ್ವಾದರ್ಶಗಳನ್ನು ಪಾಲಿಸಬೇಕು’ ಎಂದು ಹೇಳಿದರು.

‘ಸಮಾಜದ ಪ್ರತಿಭಾವಂತ ಬಡಮಕ್ಕಳಿಗೆ ಸಮಾಜದ ಸಂಘ, ಸಂಸ್ಥೆಗಳು ಸಮಾಜದ ಮುಖಂಡರು ತಮ್ಮ ಕೈಲಾಗುವಷ್ಟು ಆರ್ಥಿಕ ಸಹಾಯ ಮಾಡಿ ಸಮಾಜವನ್ನು ಶಿಕ್ಷಣದ ಮೂಲಕ ಅಭಿವೃದ್ಧಿ ಪಡಿಸಬೇಕು’ ಎಂದು ಹೇಳಿದರು. ಕೋಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕೋಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಕಂಠ ಜಮಾದಾರ, ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಾಬುರಾವ ಜಮಾದಾರ, ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಗೌರವ ಅಧ್ಯಕ್ಷ ಡಾ.ಬಿ.ಪಿ.ಬುಳ್ಳಾ, ಆಳಂದ ಉಪ ವಿಭಾಗದ ಡಿವೈಎಸ್‌ಪಿ ಪಿ.ಕೆ.ಚೌಧರಿ, ಮುಖಂಡರಾದ ಶಾಂತಪ್ಪ ಹೇರೂರ, ಸುಭಾಷ ಎಸ್‌.ಆಲೂರ, ಸೂರ್ಯಕಾಂತ ಗುಡ್ಡಡಗಿ, ನಾಮದೇವ ಕಡಕೋಳ, ಡಾ. ಭೀಮರಾಯ ಅರಕೇರಿ, ಜಯಾನಂದ ಜಮಾದಾರ, ಈರಣ್ಣ ಡಾಂಗೆ, ಜಯಪ್ಪ ಚಾಪಲ್‌, ಚಂದ್ರಾಮ ಅಮೀನಗಡ, ದೇವೇಂದ್ರ ಆನೆಗುಂದಿ, ಅಮೃತ ಮಾಲಿಪಾಟೀಲ, ಸಂತೋಷ ಬೆಳಗುಂಪಿ, ಬಿಚ್ಚಪ್ಪ ಬೆಡಕಪಲ್ಲಿ ಇದ್ದರು.

* * 

ವಿಠ್ಠಲ ಹೇರೂರ ಅವರ ಹೋರಾಟದ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು. ಸಮಾಜದ ಅಭಿವೃದ್ಧಿಗೆ ದುಡಿಯಬೇಕು
ಡಾ. ಮಲ್ಲಿಕಾರ್ಜುನ ಮುಕ್ಕಾ ಕಾರ್ಯಾಧ್ಯಕ್ಷ, ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.