ADVERTISEMENT

‘ನರೇಗಾ’ ಕುಂದುಕೊರತೆ ಪರಿಹರಿಸಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 6:44 IST
Last Updated 3 ಫೆಬ್ರುವರಿ 2018, 6:44 IST

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್‌) ಕಾರ್ಯಕರ್ತರು ‘ರೋಜಗಾರ್‌’ ದಿನದ ಅಂಗವಾಗಿ ನಗರದಲ್ಲಿ ಶುಕ್ರವಾರ ಊಟದ ತಟ್ಟೆಗಳನ್ನು ಬಾರಿಸುವ ‘ಗಂಗಾಳ್‌ ಗುದ್ದು’ ಎಂಬ ವಿನೂತನ ಜಾಥಾ ನಡೆಸಿದರು.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳ ಕುಂದುಕೊರತೆಗಳನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಸಲ್ಲಿಸಿದರು.

‘ವರ್ಷದ ಯಾವುದೇ ತಿಂಗಳಲ್ಲಿ ಕೂಲಿ ಕಾರ್ಮಿಕರು ಕೆಲಸದ ಬೇಡಿಕೆ ಇಟ್ಟಾಗ ಕೆಲಸ ಕೊಡಬೇಕು. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ರೈತರ ಹೊಲಗಳಲ್ಲಿ ಕೈಗೊಳ್ಳುವ ವೈಯಕ್ತಿಕ ಫಲಾನುಭವಿಗಳ ಭೂ ಅಭಿವೃದ್ಧಿ ಕಾಮಗಾರಿ ಬೇಡಿಕೆ ಸಲ್ಲಿಸಿದಾಗ ಗ್ರಾಮಸಭೆಯಲ್ಲಿ ಅನುಮೋದನೆ ಪಡೆದು ಕ್ರಿಯಾಯೋಜನೆಯಲ್ಲಿ ಸೇರಿಸಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ದಿನ ಉದ್ಯೋಗ ಚೀಟಿ ಪಡೆಯುವ ಆಂದೋಲನ ಹಮ್ಮಿಕೊಳ್ಳಬೇಕು. ಗ್ರಾಮ ಪಂಚಾಯಿತಿಗೆ ಕೂಲಿ ಕೇಳಲು ಹೋದಾಗ ಅಭಿವೃದ್ಧಿ ಅಧಿಕಾರಿ ಕಾರ್ಮಿಕರನ್ನು ಗದರಿಸುತ್ತಾರೆ. ಕಾರ್ಮಿಕರ ಕುಟುಂಬದ ಹೆಸರಿನಲ್ಲಿ ತೆರೆದಿರುವ ಬ್ಯಾಂಕ್‌ ಖಾತೆಗೆ 3–4 ತಿಂಗಳಾದರೂ ಹಣ ಪಾವತಿಸದೆ ಬೇವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಅಲ್ಲದೆ, ಗ್ರಾಮ ಪಂಚಾಯಿತಿ ಫೀಲ್ಡ್‌ ಅಸಿಸ್ಟೆಂಟ್‌ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಂತಹವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಹಾದೇವಪ್ಪ ಪಾಟೀಲ, ಸಂಘಟನೆ ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು.

ಜೈ ಕರವೇ ಪ್ರತಿಭಟನೆ: ‘ನೇಮ್ಮದಿ ಕೇಂದ್ರ (ನಾಡ ಕಚೇರಿ)ಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಪಡಿತರ ಚೀಟಿ ಕಡ್ಡಾಯ ಮಾಡಿರುವುದನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಸರ್ಕಾರದಿಂದ ಬಹಳಷ್ಟು ಜನರಿಗೆ ಪಡಿತರ ಚೀಟಿ ವಿತರಣೆಯಾಗಿಲ್ಲ. ಆಧಾರ್‌ ಪ್ರತಿ ಪಡೆದು ಪ್ರಮಾಣ ಪತ್ರಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಸಂಸ್ಥಾಪಕ ಅಧ್ಯಕ್ಷ ಸಚಿನ್‌ ಎಸ್‌.ಫರತಾಬಾದ್‌, ಅಣವೀರ ಪಾಟೀಲ, ಸುರೇಶ ಹೊನಗುಡಿ, ಸಂದೇಶ ಪವಾರ, ಸತೀಶ ಫರತಾಬಾದ್‌, ಅಂಬು ಮಸ್ಕಿ, ಶರಣು ಮಡಿವಾಳ, ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.