ಕಲಬುರಗಿ: ಮುಂಗಾರಿನ ಅಭಿಷೇಕಕ್ಕೆ ನೆಲ ಮೆದುಗೊಂಡಿದ್ದು, ‘ಹಸಿರು’ ಹಂಚುವ ಕಾರ್ಯ ಭರದಿಂದ ಸಾಗಿದೆ.
ಮಳೆಗಾಲ ಆರಂಭವಾದಾಗಿನಿಂದ ಇಲ್ಲಿಯವರೆಗೂ ತೋಟಗಾರಿಕೆ ಇಲಾಖೆಯ ನರ್ಸರಿ ಹಾಗೂ ಸಸ್ಯಕ್ಷೇತ್ರಗಳಲ್ಲಿ 55,650 ಸಸಿಗಳು ಮಾರಾಟವಾಗಿವೆ. ಸರ್ಕಾರ ಸಸಿಗಳಿಗೆ ಕನಿಷ್ಠ ಬೆಲೆ ನಿಗದಿಪಡಿಸಿರುವುದರಿಂದ ರೈತರು ಹಾಗೂ ಪರಿಸರಾಸಕ್ತರು ಇಲ್ಲಿಂದಲೇ ಸಸಿಗಳನ್ನು ತೆಗೆದುಕೊಂಡು ಹೋಗುತ್ತಾರೆ.
ತೋಟಗಾರಿಕೆ ಇಲಾಖೆ ಜಿಲ್ಲೆಯಲ್ಲಿ 16 ನರ್ಸರಿ ಹಾಗೂ ಸಸ್ಯ ಕ್ಷೇತ್ರಗಳನ್ನು ಹೊಂದಿದೆ. ಎರಡು ನರ್ಸರಿಗಳನ್ನು ಹೊರತುಪಡಿಸಿ ಉಳಿದವುಗಳು ಗ್ರಾಮೀಣ ಭಾಗದಲ್ಲಿವೆ.
ಇಲ್ಲಿ 4 ಲಕ್ಷ ಸಸಿಗಳನ್ನು ಪೋಷಿಸಲಾಗುತ್ತಿದೆ. ಮಾವು, ನಿಂಬೆ, ಸಪೋಟ, ತೆಂಗು, ಕರಿಬೇವು ಹಾಗೂ ಅಲಂಕಾರಿಕ ಸೇರಿ ಇತರ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ₹10–₹160ವರೆಗೂ ದರದಲ್ಲಿ ಸಸಿಗಳು ಸಿಗುತ್ತವೆ. ಇಲಾಖೆ ಪ್ರತಿ ವರ್ಷ 3.5 ಲಕ್ಷ ಸಸಿಗಳನ್ನು ಮಾರಾಟ ಮಾಡುತ್ತದೆ. ಸಸಿ ಮಾರಾಟ ಮಾಡುವುದರಿಂದ ವರ್ಷಕ್ಕೆ ₹24–₹25 ಲಕ್ಷ ಆದಾಯ ಬರುತ್ತದೆ.
ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಬಳಿಯ ನರ್ಸರಿ ಜಿಲ್ಲೆಯ ಅತಿದೊಡ್ಡ ನರ್ಸರಿಯಾಗಿದೆ. ಹಚ್ಚ ಹಸಿರಿನ ಪರಿಸರದ ಮಧ್ಯೆ 150 ಎಕರೆಯಲ್ಲಿ ಮೈಚಾಚಿಕೊಂಡಿದೆ. ಇಲ್ಲಿ 1 ಲಕ್ಷ ಸಸಿ ಪೋಷಿಸಲಾಗುತ್ತಿದೆ. ಇಲ್ಲಿ ತರಬೇತಿ ಕೇಂದ್ರವೂ ಇದೆ.
ಮಾಲಗತ್ತಿ, ಗುಡೂರು ಹಾಗೂ ಗೋಳಾದಲ್ಲಿಯೂ ವಿಸ್ತಾರವಾದ ನರ್ಸರಿ ಹಾಗೂ ಸಸ್ಯಕ್ಷೇತ್ರಗಳನ್ನು ಇಲಾಖೆ ಹೊಂದಿದೆ. ಈ ಕ್ಷೇತ್ರಗಳಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ತೆಗೆದುಕೊಂಡು ಹೋಗುತ್ತಾರೆ.
ನಗರದ ಐವಾನ್ ಇ ಶಾಹಿ ಪ್ರವಾಸಿ ಮಂದಿರದ ಆವರಣ, ಬಡೇಪುರ ಹಾಗೂ ಕೆಸರಟಗಿಯಲ್ಲಿ ಇಲಾಖೆಯ ಸಸ್ಯ ಕ್ಷೇತ್ರಗಳಿವೆ. ಇವುಗಳಲ್ಲಿ ಬಡೇಪುರ ಸಸ್ಯಕ್ಷೇತ್ರ ದೊಡ್ಡದು. ನಗರದ ರಾಜಾಪುರ ರಸ್ತೆ ಬಳಿ 5 ಎಕರೆಯಲ್ಲಿ ಇದು ಮೈಚಾಚಿಕೊಂಡಿದೆ. ಇಲ್ಲಿ ತೆರೆದ ಹಾಗೂ ಕೊಳವೆಬಾವಿ ಇದೆ. ಮೂವರು ಸಿಬ್ಬಂದಿ ಸಸಿ ಬೆಳೆಸಿ ಪೋಷಿಸುವ ಕೆಲಸ ಮಾಡುತ್ತಾರೆ.
ಐವಾನ್ ಇ ಶಾಹಿಯಲ್ಲಿ ಅಲಂಕಾರಿಕ ಸಸಿ ಮಾರಾಟ ಮಾಡಲಾಗುತ್ತದೆ. ಇವುಗಳ ಬೆಲೆ ₹20ರಿಂದ ₹160ರವರೆಗೆ ಇದೆ. ಒಟ್ಟು 15 ಸಾವಿರ ಸಸಿಗಳನ್ನು ಪೋಷಿಸಲಾಗುತ್ತಿದೆ. ಮೂವರು ಸಿಬ್ಬಂದಿ ಕೆಲಸ ಮಾಡುತ್ತಾರೆ. ಅಲಂಕಾರಿಕ ವಸ್ತುಗಳಿಗೆ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಇಲಾಖೆ ಸಿಬ್ಬಂದಿ.
ಕೆಸರಟಗಿಯಲ್ಲಿಯೂ ವಿಶಾಲವಾದ ಜಾಗದಲ್ಲಿ ಸಸಿ ಮಾರಾಟ ಮಾಡಲಾಗುತ್ತದೆ. ಸುತ್ತಮುತ್ತಲಿನ ರೈತರು ಸಸಿ ಖರೀದಿ ಮಾಡುತ್ತಾರೆ.
ಸರ್ಕಾರ ನಿಗದಿಪಡಿಸಿದ ಕನಿಷ್ಠ ದರದಲ್ಲಿ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ. ಎಲ್ಲರೂ ಸಸಿ ಖರೀದಿಸಿ ಅವುಗಳನ್ನು ಪೋಷಿಸಿ ಪರಿಸರಕ್ಕೆ ಕೊಡುಗೆ ನೀಡಬೇಕುಶಂಕರ ಪಟವಾರಿ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಕಲಬುರಗಿ
ಪ್ರತಿವರ್ಷ ಜೂನ್–ಜುಲೈ ತಿಂಗಳಲ್ಲಿ ಕಲಬುರಗಿ ನಗರದ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಸಸ್ಯ ಸಂತೆ ಮಾಡಲಾಗುತ್ತದೆ. ಈ ಸಂತೆಯಲ್ಲಿ ಎಲ್ಲ ಮಾದರಿಯ ಸಸಿಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ನಗರ ವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಸಿ ಖರೀದಿ ಮಾಡಿಕೊಂಡು ಹೋಗುತ್ತಾರೆ. 1.50 ಲಕ್ಷದವರೆಗೂ ಸಸಿಗಳು ಮಾರಾಟವಾಗುತ್ತವೆ. ₹20 ಲಕ್ಷದವರೆಗೂ ಅನುದಾನ ಬರುತ್ತದೆ. ಆದರೆ ಈ ವರ್ಷ ಕಾರಣಾಂತರಗಳಿಂದ ಸಸ್ಯ ಸಂತೆ ಮಾಡುತ್ತಿಲ್ಲ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.