ಕಲಬುರಗಿ: ‘ಅಫಜಲಪುರ ತಾಲ್ಲೂಕಿನ ಘತ್ತರಗಾ ಭಾಗ್ಯವಂತಿ ದೇವಾಲಯದ ಐದು ಹುಂಡಿಗಳಲ್ಲಿ ಸಂಗ್ರಹ ಆಗಿರುವ ಭಕ್ತರ ಕಾಣಿಕೆ ಬುಧವಾರ ಎಣಿಕೆ ಮಾಡಲಾಗಿದ್ದು, ₹70,66,145 ನಗದು ಹಾಗೂ ಸುಮಾರು 200 ಗ್ರಾಂ ಚಿನ್ನಾಭರಣ ಮತ್ತು ಒಂದು ಕೆಜಿ ಬೆಳ್ಳಿ ಸಂಗ್ರಹಗೊಂಡಿದೆ’ ಎಂದು ದೇವಾಲಯ ಮುಖ್ಯಾಧಿಕಾರಿ ಪ್ರಕಾಶ ಕುದರಿ ತಿಳಿಸಿದ್ದಾರೆ.
ಎಣಿಕೆ ಕಾರ್ಯದ ವೇಳೆ ಒಂದು ಅಮೆರಿಕ ಡಾಲರ್ ಸಹ ಹುಂಡಿಯಲ್ಲಿ ಪತ್ತೆಯಾಗಿದೆ. 30 ಚೀಲಗಳಷ್ಟು ನಾಣ್ಯಗಳು ಸಂಗ್ರಹಗೊಂಡಿವೆ. ಈ ನಾಣ್ಯಗಳ ಎಣಿಕೆ ಕಾರ್ಯ ಸಂಕ್ರಾಂತಿ ಹಬ್ಬದ ಬಳಿಕ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ, ನಾಣ್ಯಗಳನ್ನು ಲಾಕರ್‌ನಲ್ಲಿ ಭದ್ರವಾಗಿ ಇರಿಸುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಕುದರಿ ಮಾಹಿತಿ ನೀಡಿದ್ದಾರೆ.
‘ಕಾಣಿಕೆಯಾಗಿ ಸಲ್ಲಿಸಿದ ₹200 ನೋಟಿನ ಮೇಲೆ ಮಹಿಳಾ ಭಕ್ತೆಯೊಬ್ಬರು ತಮ್ಮನ್ನು ಪೊಲೀಸ್ ಅಧಿಕಾರಿಯಾಗಿ ಮಾಡುವಂತೆ ದೇವಿಗೆ ಲಿಖಿತ ಹರಕೆ ಸಲಿಸಿದ್ದರೆ, ಕೆಲವರು ನೋಟುಗಳ ಮೇಲೆ ತಮಗೆ ಆದಷ್ಟು ಬೇಗ ಮದುವೆ, ಸರ್ಕಾರಿ ಉದ್ಯೋಗ ಕರುಣಿಸುವಂತೆ ಲಿಖಿತ ಹರಕೆ ಸಲ್ಲಿಸಿದ್ದಾರೆ’ ಎಂದು ಹೇಳಿದ್ದಾರೆ.
ಹುಂಡಿ ಎಣಿಕೆ ವೇಳೆ ಅಫಜಲಪುರ ಗ್ರೇಡ್-2 ತಹಶೀಲ್ದಾರ್ ಶರಣಬಸಪ್ಪ, ಎಸ್‌ಬಿಐ ಮ್ಯಾನೇಜರ್ ರಾಕೇಶ್ ಶರ್ಮಾ, ದೇವಾಲಯದ ಕಾರ್ಯದರ್ಶಿ ಮಂಜುನಾಥ ಎಚ್. ನಾವಿ ಹಾಗೂ ತಹಶೀಲ್ದಾರ್ ಕಚೇರಿ ಮುಜರಾಯಿ ವಿಭಾಗದ ಸಿಬ್ಬಂದಿ ಹಾಜರಿದ್ದರು.
ಗರ್ಭಗುಡಿ ಹುಂಡಿ ಎಣಿಕೆ ಶೀಘ್ರ
‘ಭಾಗ್ಯವಂತಿ ದೇವಾಲಯದ ಒಟ್ಟು 11 ಹುಂಡಿಗಳ ಪೈಕಿ ಡಿ.26ರಂದು ನಾಲ್ಕು ಹುಂಡಿಗಳ ಎಣಿಕೆ ಪೂರ್ಣಗೊಂಡಿದ್ದು ಬುಧವಾರ ಐದು ಹುಂಡಿಗಳಲ್ಲಿ ಸಂಗ್ರಹವಾಗಿರುವ ಕಾಣಿಕೆಯ ಎಣಿಕೆ ಮಾಡಲಾಗಿದೆ. ಇನ್ನು ಗರ್ಭಗುಡಿಯಲ್ಲಿರುವ ಎರಡು ಹುಂಡಿಗಳ ಎಣಿಕೆ ಬಾಕಿ ಉಳಿದಿದೆ. ಗರ್ಭಗುಡಿಯ ಹುಂಡಿಗಳಲ್ಲಿ ಸಾಮಾನ್ಯವಾಗಿ ಭಕ್ತರು ಚಿನ್ನಾಭರಣ ಕಾಣಿಕೆ ಹಾಕುವ ವಾಡಿಕೆಯಿದೆ. ಈ ಎರಡು ಹುಂಡಿಗಳ ಕಾಣಿಕೆ ಎಣಿಕೆಗೆ ಅನುಮತಿ ಕೋರಿ ಶೀಘ್ರ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು’ ಎಂದು ಪ್ರಕಾಶ ಕುದರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.