ADVERTISEMENT

ಕಲಬುರಗಿ: 3 ವರ್ಷದಲ್ಲಿ 87 ಬಾಲಕಾರ್ಮಿಕರ ‍ಪತ್ತೆ

ಜಿಲ್ಲೆಯಲ್ಲಿ ಮುಂದುವರಿದ ಕಲಿಕಾ ವಯಸ್ಸಿನಲ್ಲೇ ಕೆಲಸಕ್ಕೆ ದೂಡುವ ಪ್ರವೃತ್ತಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 5:16 IST
Last Updated 20 ಡಿಸೆಂಬರ್ 2025, 5:16 IST
ಕಲಬುರಗಿ ಜಿಲ್ಲೆಯ ಹತ್ತಿ ಹೊಲದಲ್ಲಿ ದುಡಿಯುತ್ತಿದ್ದ ಬಾಲ ಕಾರ್ಮಿಕರನ್ನು ರಕ್ಷಿಸಲಾಯಿತು
ಕಲಬುರಗಿ ಜಿಲ್ಲೆಯ ಹತ್ತಿ ಹೊಲದಲ್ಲಿ ದುಡಿಯುತ್ತಿದ್ದ ಬಾಲ ಕಾರ್ಮಿಕರನ್ನು ರಕ್ಷಿಸಲಾಯಿತು   

ಕಲಬುರಗಿ: ಜಿಲ್ಲೆಯಲ್ಲಿ ಕಲಿಕಾ ವಯಸ್ಸಿನಲ್ಲೇ ಮಕ್ಕಳನ್ನು ಕೆಲಸಕ್ಕೆ ದೂಡುವ ಅಪಾಯಕಾರಿ ಪ್ರವೃತ್ತಿ ಮುಂದುವರಿದಿದೆ. ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಿಲ್ಲೆಯ ಐದು ಕಾರ್ಮಿಕ ವೃತ್ತಗಳ ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ 2,300ಕ್ಕೂ ಅಧಿಕ ಕಡೆ ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಕೆಲಸದಲ್ಲಿ ತೊಡಗಿದ್ದ ಒಟ್ಟು 87 ಬಾಲ/ಕಿಶೋರ ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದ್ದಾರೆ. ಈ ಸಂಬಂಧ ಒಟ್ಟು 57 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇನ್ನೂ 24 ಪ್ರಕರಣಗಳನ್ನು ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ.

2023ರ ಏಪ್ರಿಲ್‌ನಿಂದ 2024ರ ಮಾರ್ಚ್‌ ಅಂತ್ಯದ ತನಕ ಒಟ್ಟು 483 ಕಡೆ ದಾಳಿ ನಡೆಸಿದ್ದಾರೆ. 16 ಬಾಲ/ಕಿಶೋರ ಕಾರ್ಮಿಕರನ್ನು ರಕ್ಷಿಸಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ 16 ಪ್ರಕರಣಗಳು ದಾಖಲಾಗಿವೆ.

ADVERTISEMENT

2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ ಅಂತ್ಯದ ತನಕ ಅಧಿಕಾರಿಗಳು ಒಟ್ಟು 1,287 ಕಡೆ ದಾಳಿ ನಡೆಸಿದ್ದಾರೆ. 46 ಬಾಲ/ಕಿಶೋರ ಕಾರ್ಮಿಕರನ್ನು ರಕ್ಷಿಸಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ 41 ಪ್ರಕರಣಗಳು ದಾಖಲಾಗಿವೆ.

2025ರ ಏಪ್ರಿಲ್‌ನಿಂದ ನವೆಂಬರ್‌ ಅಂತ್ಯದ ತನಕ ಒಟ್ಟು 600ಕ್ಕೂ ಅಧಿಕ ದಾಳಿ ನಡೆಸಿರುವ ಅಧಿಕಾರಿಗಳು, 24 ಬಾಲ/ಕಿಶೋರ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವ ಕೆಲಸ ಪ್ರಗತಿಯಲ್ಲಿದೆ.

ಸರಣಿ ಜನ ಜಾಗೃತಿ:

ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ ವಿವಿಧೆಡೆ 11 ಬೀದಿ ನಾಟಕ, 27 ಗೋಡೆ ಬರಹ, ಆಟೊಗಳ ಮೂಲಕ ಪ್ರಚಾರ 17 ಕಡೆ, 29 ಕಾನೂನು ಅರಿವು ಕಾರ್ಯಕ್ರಮಗಳು ಸೇರಿದಂತೆ 200 ಜಾಗೃತಿ ಕಾರ್ಯಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಕಲಬುರಗಿಯಲ್ಲೇ ಹೆಚ್ಚು:

ಜಿಲ್ಲೆಯ ಪೈಕಿ ಕಲಬುರಗಿ ನಗರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬಾಲ /ಕಿಶೋರ ಕಾರ್ಮಿಕರ ಪತ್ತೆಯಾಗುತ್ತಿದ್ದಾರೆ. ಇದರೊಂದಿಗೆ ಸೇಡಂ, ಚಿತ್ತಾಪುರ ಪ್ರದೇಶದಲ್ಲೂ ಬಾಲಕಾರ್ಮಿಕರ ಬಳಕೆಯಾಗುತ್ತಿದೆ. ಹೋಟೆಲ್‌, ಗ್ಯಾರೇಜ್‌, ಢಾಬಾಗಳಲ್ಲದೇ ಇಟ್ಟಿಗೆ ಭಟ್ಟಿ, ಹತ್ತಿ ಬಿಡಿಸುವಂಥ ಕೃಷಿ ಚಟುವಟಿಕೆಗಳಲ್ಲೂ ಬಾಲಕಾರ್ಮಿಕರ ಬಳಕೆಯಾಗುತ್ತಿದೆ. 

‘ಬಡತನದ ಸೇರಿದಂತೆ ಹಲವು ಕಾರಣಗಳಿಗೆ ಪೋಷಕರೇ ತಮ್ಮ ಮಕ್ಕಳನ್ನು ಕೃಷಿ ಕೆಲಸ, ದುಡಿಮೆಗೆ ದೂಡುತ್ತಿರುವ ಸಂಗತಿ ದಾಳಿಯಲ್ಲಿ ಪತ್ತೆಯಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಕ್ಕಳ ದುಡಿತ ತಪ್ಪಿಸಿ ಬಾಲ್ಯ ಉಳಿಸಲು ಅವರಿಗೆ ವಿದ್ಯೆ ಒದಗಿಸಿ ನಾಗರಿಕರನ್ನಾಗಿ ರೂಪಿಸಲು ಪೋಷಕರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ
ಸಂತೋಷ ಕುಲಕರ್ಣಿ ಯೋಜನಾ ನಿರ್ದೇಶಕ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ

ಕಾಯ್ದೆ ಏನು ಹೇಳುತ್ತೆ?

14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಬಗೆಯ ಕೆಲಸಕ್ಕೆ ಬಳಸುವುದು ಹಾಗೂ 14 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ಕಿಶೋರಾವಸ್ಥೆ ಕಾರ್ಮಿಕರನ್ನು ಅಪಾಯಕಾರಿ ಉದ್ಯೋಗದಲ್ಲಿ ತೊಡಗಿಸುವುದಕ್ಕೆ ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ–1986ರಡಿ ನಿಷೇಧವಿದೆ. ‘ಬಾಲಕಾರ್ಮಿಕರನ್ನು ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹20 ಸಾವಿರದಿಂದ ₹50 ಸಾವಿರದ ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಪೋಷಕರಾಗಿದ್ದಲ್ಲಿ ಲಘು ಶಿಕ್ಷೆ ವಿಧಿಸಬಹುದಾಗಿದೆ. ಜೊತೆಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನೂ ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ಕಾರ್ಮಿಕ ಇಲಾಖೆ ಅಧಿಕಾರಿಗಳು.

ನಾಗರಿಕರು ಏನು ಮಾಡಬಹುದು?

ಸುತ್ತಲಿನ ಪ್ರದೇಶದಲ್ಲಿ ದುಡಿಮೆಯಲ್ಲಿ ತೊಡಗಿದ್ದ ಬಾಲ/ಕಿಶೋರ ಕಾರ್ಮಿಕರನ್ನು ಕಂಡರೆ ಸಾರ್ವಜನಿಕರು ಮಕ್ಕಳ ಸಹಾಯವಾಣಿ– 1098 ಕಾರ್ಮಿಕ ಸಹಾಯವಾಣಿ 155214ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಇಲ್ಲವೇ www.pencil.gov.inನಲ್ಲಿ ದೂರು ಸಲ್ಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.