ವಾಡಿ: ರಾವೂರು ಗ್ರಾಮದಿಂದ ಮಾಲಗತ್ತಿವರೆಗಿನ ರಾಷ್ಟ್ರೀಯ ಹೆದ್ದಾರಿ 150ರ ಎರಡೂ ಬದಿಯಲ್ಲಿ ವಿಶಾಲವಾಗಿ ಚಾಚಿಕೊಂಡಿರುವ ಕಲ್ಲುಗಣಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ವಾಹನ ಸವಾರರಲ್ಲಿ ಪ್ರಾಣಭೀತಿ ಹುಟ್ಟಿಸಿವೆ.
100-120ರ ವೇಗದಲ್ಲಿ ಚಲಿಸುವ ವಾಹನಗಳು ಸ್ವಲ್ಪ ಯಾಮಾರಿದ್ರೂ ಸಾಕು ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಉಂಟಾಗುವ ಭೀತಿ ಒಂದೆಡೆಯಾದರೆ ಮತ್ತೊಂದೆಡೆ ರಸ್ತೆಗೆ ಹೊಂದಿಕೊಂಡಿರುವ ಕಂದಕಗಳಿಂದ ಹೆದ್ದಾರಿಯೇ ಕುಸಿಯುವ ಆತಂಕ ಉಂಟಾಗಿದೆ.
ನೂರಾರು ಕೋಟಿ ಹಣ ವ್ಯಯಿಸಿ ನಿರ್ಮಿಸಿದ ರಸ್ತೆಯನ್ನು ನುಂಗಿ ಹಾಕಲು ಕಂದಕಗಳು ಬಾಯ್ತೆರೆದು ನಿಂತಿವೆ. ಉತ್ತಮ ರಸ್ತೆ ಎಂದು ಇಲ್ಲಿ ಖುಷಿಯಿಂದ ವೇಗವಾಗಿ ವಾಹನ ಓಡಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ.
ರಾವೂರು ಮಾಲಗತ್ತಿ ನಡುವಿನ 4 ಕಿಮೀ ರಸ್ತೆಯ ಎರಡು ಬದಿಯಲ್ಲಿ ಭೂಮಿ ಬಗೆದು ಅಪಾರ ಪ್ರಮಾಣದ ಕಲ್ಲುಗಳನ್ನು ಹೆಕ್ಕಿ ಹೊರತೆಗೆದು ಸಾಗಿಸಲಾಗಿದೆ. ಆದರೆ ಕಂದಕಗಳು ಹಾಗೇ ಉಳಿದಿದ್ದು ಹೆದ್ದಾರಿಗೆ ಸವಾಲಾಗಿ ನಿಂತಿವೆ. ಕಲ್ಲುಗಣಿಯ ಆಳವಾದ ಕಂದಕಗಳನ್ನು ಇಣುಕಿ ನೋಡಿದರೆ ಎದೆ ಝಲ್ಲೆನ್ನುತ್ತದೆ. ಹೆದ್ದಾರಿಗೆ ಹೊಂದಿಕೊಂಡೇ ಇರುವ ಗಣಿಗಳು ಪ್ರಾಣಭೀತಿ ಸೃಷ್ಟಿಸಿವೆ. ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಳಿಕ ವಾಹನಗಳ ಅದರಲ್ಲೂ ಬೃಹತ್ ವಾಹನಗಳ ಓಡಾಟ ಹೆಚ್ಚಾಗಿದೆ. ಓವರ್ ಲೋಡ್ ಮರಳಿನ ಟಿಪ್ಪರ್‌ಗಳು ಸಾಗುತ್ತವೆ. ಜತೆಯಲ್ಲಿ ನಿತ್ಯ ಪ್ರಯಾಣಿಕರನ್ನು ತುಂಬಿಕೊಂಡು ನೂರಾರು ಬಸ್‌ಗಳು ಇಲ್ಲಿ ಸಂಚರಿಸುತ್ತವೆ. ಸ್ವಲ್ಪವೇ ಆಯ ತಪ್ಪಿದರೂ ಯಮಲೋಕಕ್ಕೆ ಸೇರುವುದು ಖಚಿತ ಎನ್ನುವಂತಿದೆ.
ಕೆಲವೆಡೆ ಹೆದ್ದಾರಿಗೆ ಹೊಂದಿಕೊಂಡೇ ಗಣಿಗಳ ರಸ್ತೆ ಆರಂಭವಾಗಿದ್ದು ರಸ್ತೆಯಿಂದ ವಾಹನಗಳನ್ನು ಸ್ವಲ್ಪ ಕೆಳಗಿಳಿಸಿದರೆ ಸಾಕು ನೇರವಾಗಿ ಕಂದಕಕ್ಕೆ ಬೀಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಈ ರಸ್ತೆ ಮೇಲೆಯೇ ಜನಪ್ರತಿನಿಧಿಗಳು ಅಧಿಕಾರಿಗಳು ಓಡಾಡುತ್ತಿದ್ದು ಯಾವುದೇ ರಕ್ಷಣಾ ಕ್ರಮಕ್ಕೆ ಮುಂದಾಗಿಲ್ಲ. ಇದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
‘ಹೆದ್ದಾರಿ ಪಕ್ಕದ ಕಂದಕಗಳಿಂದ ಹೆದ್ದಾರಿ ಸವಾರರ ಸುರಕ್ಷತೆಗೆ ಗಂಡಾಂತರ ಬಂದೊದಗಿದ್ದು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ರಸ್ತೆ ಹಾಗೂ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಕೂಡಲೇ ಕ್ರಮಕ್ಕೆ ಮುಂದಾಗಿ ಸಂಭಾವ್ಯ ಅನಾಹುತ ತಪ್ಪಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ: ಹೆದ್ದಾರಿ ನಿರ್ಮಾಣ ಸಮಯದಲ್ಲಿ ರಸ್ತೆ ಬದಿಯಲ್ಲಿ ಬೃಹತ್ ತಗ್ಗುಗಳು ಗುಂಡಿಗಳು ಹಾಗೂ ಸೇತುವೆಗಳು ಇದ್ದರೆ ಸುರಕ್ಷತೆ ದೃಷ್ಟಿಯಿಂದ ಕಬ್ಬಿಣದ ರಕ್ಷಣಾ ಗೋಡೆ ನಿರ್ಮಿಸಿಲ್ಲ. ಸವಾರರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಕದಲ್ಲಿ ಆಳವಾದ ಗಣಿಗಳು ಇರುವುದರಿಂದ ಸ್ವಲ್ಪ ಮೈ ಮರೆತರೂ ಅಪಾಯ ಖಚಿತವಾಗಿದ್ದು ಹೆದ್ದಾರಿ ಪ್ರಾಧಿಕಾರದವರು ರಕ್ಷಣಾ ಗೋಡೆ ಅಳವಡಿಸಿ ಸಾರ್ವಜನಿಕರ ಅಮೂಲ್ಯ ಜೀವ ಕಾಪಾಡಬೇಕು.
-ಪರಶುರಾಮ ತುನ್ನೂರು ರಾವೂರು ನಿವಾಸಿ
ಸುರಕ್ಷತೆ ದೃಷ್ಟಿಯಿಂದ ಕಲ್ಲುಗಣಿಗಳ ಪಕ್ಕ ಎರಡು ಕಡೆ ಸೇತುವೆ ನಿರ್ಮಾಣಕ್ಕಾಗಿ ₹ 1.2 ಕೋಟಿ ಅನುದಾನ ಮಂಜೂರಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು
-ಮಹ್ಮದ್ ಇಬ್ರಾಹಿಂ ಇಇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.