ADVERTISEMENT

ಕೌಶಲಾಭಿವೃದ್ದಿ ವಿ.ವಿ. ಸ್ಥಾಪಿಸಲು ಒತ್ತಾಯ: ಸಚಿವ ಡಾ. ಶರಣಪ್ರಕಾಶ ಪಾಟೀಲಗೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 16:22 IST
Last Updated 6 ಫೆಬ್ರುವರಿ 2024, 16:22 IST
ಕಲ್ಯಾಣ ನಾಡು ವಿಕಾಸ ವೇದಿಕೆ ಕಾರ್ಯಕರ್ತರು ಕಲಬುರಗಿಯಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು
ಕಲ್ಯಾಣ ನಾಡು ವಿಕಾಸ ವೇದಿಕೆ ಕಾರ್ಯಕರ್ತರು ಕಲಬುರಗಿಯಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು   

ಕಲಬುರಗಿ: ನಗರದಲ್ಲಿ ಕೌಶಲಾಭಿವೃದ್ದಿ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಕಲ್ಯಾಣ ನಾಡು ವಿಕಾಸ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

‘ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಕಲಬುರಗಿ ವಿಭಾಗದ ಬಡತನ, ವಲಸೆ ಮತ್ತು ನಿರುದ್ಯೋಗ ಸಮಸ್ಯೆಗಳು ನಿವಾರಣೆಯಾಗಿಲ್ಲ. ರಾಜ್ಯದ ಇತರೆ ವಿಭಾಗಗಳಿಗೆ ಹೋಲಿಸಿದರೆ ಕಲಬುರಗಿ ವಿಭಾಗದ ತಲಾ ಆದಾಯ, ನಿರುದ್ಯೋಗ ಪ್ರಮಾಣ, ವಲಸೆಯ ಪ್ರಮಾಣ ಮತ್ತು ಜನರು ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣವು ಅಧಿಕವಾಗಿದೆ. ನಮ್ಮ ಭಾಗದ ಯುವಕರಿಗೆ ಕೌಶಲದ ಕೊರತೆಯಿಂದ ನಿರುದ್ಯೋಗ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಿದೆ. ಬಡತನ, ವಲಸೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ನಿಯಂತ್ರಿಸಲು ಕಲಬುರಗಿಯಲ್ಲಿ ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಕೌಶಲಾಭಿವೃದ್ದಿ ವಿ.ವಿ. ಸ್ಥಾಪಿಸುವ ಬಗ್ಗೆ ಘೋಷಣೆಯನ್ನು ಮಾಡಬೇಕು‘ ಎಂದು ಮನವಿಯಲ್ಲಿ ಒತ್ತಾಯಿಸಿದರು. 

‘ನಮ್ಮ ಭಾಗದ ಯುವ ಸಮುದಾಯದ ಉಜ್ವಲ ಭವಿಷ್ಯ ನಿರ್ಮಾಣ ಮತ್ತು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕೌಶಲಾಭಿವೃದ್ದಿ ವಿಶ್ವವಿದ್ಯಾಲಯ ಸಹಕಾರಿಯಾಗಲಿದೆ. ನಮ್ಮ ಭಾಗದ ಯುವಕರು ಕೌಶಲ ತರಬೇತಿ ಪಡೆದು ಉದ್ಯೋಗ ಪಡೆಯುವ ಜೊತೆಗೆ ಉದ್ಯಮಿಗಳೂ‘ ಎಂದು ತಿಳಿಸಿದರು.

ADVERTISEMENT

ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ಆಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಮೋಹನ ಸಾಗರ, ಸೂರ್ಯಪ್ರಕಾಶ ಚಾಳಿ, ಅರುಣ ಇನಾಂದಾರ, ರಾಣೇಶ ಸಾವಳಗಿ, ಮಡಿವಾಳಪ್ಪ ಕಟ್ಟಿಮನಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.