ಕಲಬುರಗಿ: ವಿದ್ಯಾರ್ಥಿವೇತನ ಬಿಡುಗಡೆ ಹಾಗೂ ಹಾಸ್ಟೆಲ್‌ಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕನ್ಯಾ ಬಾಲಕಿಯರ ಪಿಯು ಕಾಲೇಜಿನಿಂದ ಆರಂಭವಾದ ಪ್ರತಿಭಟನಾ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿಭಟನಾ ಮೆರವಣಿಗೆಯು ಕನ್ಯಾ ಪಿಯು ಕಾಲೇಜಿನಿಂದ ಸಿದ್ದಿಪಾಶಾ ದರ್ಗಾ ಎದುರಿನಿಂದ ಲಾಹೋಟಿ ಪೆಟ್ರೋಲ್ ಪಂಪ್ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ ಪ್ರವೇಶಾತಿ ನೀಡಬೇಕು. ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ಕಿಟ್‌ಗಳು ಗುಣಮಟ್ಟದಿಂದ ಕೂಡಿರುವಂತೆ ಕಾಳಜಿ ವಹಿಸಬೇಕು. ಪ್ರತಿ ವಿದ್ಯಾರ್ಥಿಗೆ ಊಟಕ್ಕೆ ನೀಡುವ ಆಹಾರ ವೆಚ್ಚವನ್ನು ₹1,850ಕ್ಕೆ ಹೆಚ್ಚಿಸಿಬೇಕು. ರಾಜ್ಯದಲ್ಲಿರುವ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಬಾಕಿ ಉಳಿದಿರುವ ಹಿಂದಿನ ವರ್ಷದ ವಿದ್ಯಾರ್ಥಿ ವೇತನವನ್ನು ಕೂಡಲೇ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಎಬಿವಿಪಿ ರಾಜ್ಯ ಜಂಟಿ ಕಾರ್ಯದರ್ಶಿ ಹಣಮಂತ ಬಗಲಿ ಮಾತನಾಡಿ, ‘ಕಾಲೇಜು ಆರಂಭವಾಗಿ ಎರಡು ತಿಂಗಳಾಗಿದೆ. ಆದರೂ ಈತನಕ ಹಾಸ್ಟೆಲ್‌ಗಳಿಗೆ ಪ್ರವೇಶಾತಿ ಪೂರ್ಣಗೊಂಡಿಲ್ಲ. ಪದವಿ ವಿದ್ಯಾರ್ಥಿಗಳ ಕೆಲವು ವರ್ಷಗಳ ವಿದ್ಯಾರ್ಥಿವೇತನವೂ ಬಾಕಿ ಉಳಿದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಬಸ್‌ಗಳ ಕೊರತೆ ತೊಡಕಾಗಿದೆ. ಎಲ್ಲ ಸಮಸ್ಯೆಗಳ ಬಗೆಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ವಿಷಯದ ಬಗೆಗೆ ಯಾಕೆ ಮಾತನಾಡಲ್ಲ’ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ವಿಭಾಗೀಯ ಸಂಘಟನೆ ಕಾರ್ಯದರ್ಶಿ ಹೇಮಂತ, ನಗರ ಸಹ ಕಾರ್ಯದರ್ಶಿ ಸಂದೇಶ ಕೋಬಾಳ್ಕರ್, ದಿಲೀಪ್, ಅನಿಕೇತ್, ಸಾಗರ, ಮನೋಜ್, ಪ್ರಿಯಾ, ಜಗದೇವಿ, ಅವಿನಾಶ, ಶಿವು ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕನ್ಯಾ ಕಾಲೇಜಿನಿಂದ ಡಿಸಿ ಕಚೇರಿ ತನಕ ಮೆರವಣಿಗೆ | ಜಿಲ್ಲಾಧಿಕಾರಿ ವಿರುದ್ಧವೂ ಮೊಳಗಿದ ಘೋಷಣೆ |ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಪ್ರತಿಭಟನಕಾರರ ಪಟ್ಟು
ಪ್ರತಿಭಟನೆ ಬಳಿಕ ಮನವಿ ಸ್ವೀಕರಿಸಲು ಮೊದಲಿಗೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಬಂದರು. ಆದರೆ ‘ಜಿಲ್ಲಾಧಿಕಾರಿ ಅವರೇ ಮನವಿ ಸ್ವೀಕರಿಸಬೇಕು’ ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಈ ಸಂಬಂಧ ವಾಗ್ವಾದವೂ ನಡೆಯಿತು. ‘ವೇರ್ ಇಸ್ ಡಿಸಿ ಡಿಸಿ ಇಸ್ ಇನ್ ದಿ ಎಸಿ' ‘ಶಿಕ್ಷಣ ವಿರೋಧಿ ಜಿಲ್ಲಾಧಿಕಾರಿಗೆ ಧಿಕ್ಕಾರ’ ಎಂದು ಘೋಷಣೆಗಳನ್ನೂ ಕೂಗಲಾಯಿತು. ಸರ್ಕಾರ ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗತ್ತ ಅರ್ಧಗಂಟೆಗೂ ಹೆಚ್ಚು ಹೊತ್ತು ಪ್ರತಿಭಟನೆ ಮುಂದುವರಿಯಿತು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.