ADVERTISEMENT

ಕಲಬುರ್ಗಿ: ದಾಖಲೆ ಇಲ್ಲದ ₹ 1.25 ಲಕ್ಷ ಹಣ ‍ಪತ್ತೆ

ಎಂಎಸ್‍ಐಎಲ್ ಕಚೇರಿ ಮೇಲೆ ಎಸಿಬಿ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 13:23 IST
Last Updated 5 ಸೆಪ್ಟೆಂಬರ್ 2020, 13:23 IST
ಕಲಬುರ್ಗಿಯ ಎಂಎಸ್‌ಐಎಲ್ ಶಾಖಾ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಅನಧಿಕೃತವಾಗಿ ಇರಿಸಿಕೊಂಡಿದ್ದ ಹಣವನ್ನು ವಶಕ್ಕೆ ಪಡೆಯಿತು
ಕಲಬುರ್ಗಿಯ ಎಂಎಸ್‌ಐಎಲ್ ಶಾಖಾ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಅನಧಿಕೃತವಾಗಿ ಇರಿಸಿಕೊಂಡಿದ್ದ ಹಣವನ್ನು ವಶಕ್ಕೆ ಪಡೆಯಿತು   

ಕಲಬುರ್ಗಿ: ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಸರ್ಕಾರದ ಅಂಗ ಸಂಸ್ಥೆ ಮೈಸೂರು ಸೇಲ್ಸ್ ಇಂಟರನ್ಯಾಷನಲ್ (ಎಂಎಸ್‍ಐಎಲ್) ಶಾಖಾ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರು ದಾಳಿ ನಡೆಸಿ ₹ 4.21 ಲಕ್ಷ ವಶಪಡಿಸಿಕೊಂಡಿದ್ದು, ಆ ಪೈಕಿ ₹ 1.25 ಲಕ್ಷಕ್ಕೆ ದಾಖಲೆ ಸಿಕ್ಕಿಲ್ಲ.

ಕಚೇರಿಯಲ್ಲಿ ದಾಖಲೆಗಳಿಲ್ಲದ ಹಣ ಮೇಲಿಂದ ಮೇಲೆ ಕಂಡು ಬರುತ್ತಿದೆ ಎಂಬ ಖಚಿತ ಮಾಹಿತಿಯಂತೆ ಶುಕ್ರವಾರ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ತಡರಾತ್ರಿಯವರೆಗೂ ಶೋಧ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದಾಗ ಶಾಖಾ ಮುಖ್ಯಸ್ಥ ಶಂಕ್ರಯ್ಯ ಸೇರಿದಂತೆ ಹಲವರ ಬಳಿಯಲ್ಲಿ ಹಣ ಪತ್ತೆಯಾಗಿದೆ ಎಂದು ಎಸಿಬಿ ಈಶಾನ್ಯ ವಲಯ ಎಸ್ಪಿ ಮಹೇಶ ಮೇಘಣ್ಣನವರ ತಿಳಿಸಿದ್ದಾರೆ.

ಒಟ್ಟು ಪತ್ತೆಯಾಗಿರುವ ಮೊತ್ತದಲ್ಲಿ ₹ 2.95 ಲಕ್ಷ ಹಣಕ್ಕೆ ಸೂಕ್ತ ದಾಖಲೆಗಳಿವೆ. ಆದರೆ, ಉಳಿದ ₹ 1.25 ಲಕ್ಷಕ್ಕೆ ಸೂಕ್ತ ದಾಖಲೆಗಳು ಲಭ್ಯವಾಗದ ಕಾರಣ ಒಟ್ಟು ₹ 4.21 ಲಕ್ಷ ಹಣವನ್ನು ಎಸಿಬಿಯವರು ವಶಪಡಿಸಿಕೊಂಡಿದ್ದಾರೆ.

ADVERTISEMENT

ಎಸಿಬಿ ಎಸ್ಪಿ ಮಹೇಶ ಮೇಘಣ್ಣನವರ ಮಾರ್ಗದರ್ಶದಲ್ಲಿ ಡಿವೈಎಸ್ಪಿ ಬಸೀರುದ್ದೀನ್ ಪಟೇಲ್, ಇನ್‍ಸ್ಪೆಕ್ಟರ್‌ಗಳಾದ ರಾಘವೇಂದ್ರ ಭಜಂತ್ರಿ, ಇಸ್ಮಾಯಿಲ್ ಷರೀಫ್, ಶರಣಬಸವಪ್ಪ ಕೋಡ್ಲಾ, ಸಿಬ್ಬಂದಿ ಮರೆಪ್ಪ, ಶರಣು, ಯಮನೂರಪ್ಪ, ಸಲೀಂ ಇತರರು ಕೂಡಿಕೊಂಡು ಶುಕ್ರವಾರ ತಡರಾತ್ರಿಯವರೆಗೂ ಮತ್ತು ಶನಿವಾರ ಬೆಳಗ್ಗೆ ಪರಿಶೀಲನೆ ನಡೆಸಿದರು.

ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆಯವರು ಮಾರಾಟಕ್ಕೆ ಬೇಕಾಗಿರುವ ಮದ್ಯ ಖರೀದಿಯ ಬೇಡಿಕೆ ಸಲ್ಲಿಸಲು ಮತ್ತು ಹಣ ಪಾವತಿಸಲು ಕಚೇರಿಗೆ ಬಂದಾಗ ಅವರಿಂದ ಹೆಚ್ಚಿನ ಹಣ ಪಡೆದುಕೊಳ್ಳಲಾಗುತ್ತಿತ್ತು ಎಂಬ ಮಾಹಿತಿಯಂತೆ ದಾಳಿ ನಡೆಸಿರುವ ಸಾಧ್ಯತೆಯಿದೆ.

ಎಂಎಸ್‍ಐಎಲ್ ಕಲಬುರ್ಗಿ ಶಾಖೆ ಮುಖ್ಯಸ್ಥ ಶಂಕ್ರಯ್ಯ ಬಳಿ ₹ 22,500, ಕಂಪ್ಯೂಟರ್ ಆಪರೇಟರ್ ಚಂದ್ರಕಾಂತ ಕಂಠಿ ಹತ್ತಿರ ₹ 11,500, ರಿಟೇಲ್ ಉಸ್ತುವಾರಿ ಶ್ರೀನಾಥ ಬಳಿ ₹ 5,260, ಡಾಟಾ ಎಂಟ್ರಿ ಆಪರೇಟರ್ ಮಿಲಿಂದ ಬಳಿಯಲ್ಲಿ ಚಿಟ್ ಫಂಡ್ ಹಣ ₹ 5 ಸಾವಿರ ಹಾಗೂ ನಿಗಮದ ಕಚೇರಿಯಲ್ಲಿರುವ ಅಲ್ಮೇರಾದಲ್ಲಿ ಅನಧಿಕೃತವಾಗಿ ಇರಿಸಿದ್ದ ₹ 86 ಸಾವಿರ ವಶಪಡಿಸಿಕೊಂಡಿದ್ದಾರೆ.

ಅಕೌಂಟೆಂಟ್ ವಿಠ್ಠಲ್‍ರಾವ ಹತ್ತಿರ ಕಚೇರಿಗೆ ಸಂಬಂಧಿಸಿದ ಹಣ ₹ 2,90,814 ಇತ್ತು. ಈ ಕುರಿತು ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರನ್ನೂ ಬಂಧಿಸಿಲ್ಲ, ಹಣದ ಬಗ್ಗೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸುವಂತೆ ನೋಟೀಸ್ ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.