
ಕಾರ್ಕಳ ತಾಲ್ಲೂಕಿನ ಮಿಯ್ಯಾರು ಕಂಬಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಖಾಸಗಿ ಬಸ್ ಹಾಗೂ ಕ್ರೂಸರ್ ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ
ಕಾರ್ಕಳ: ತಾಲ್ಲೂಕಿನ ಮಿಯ್ಯಾರು ಕಂಬಳ ಕ್ರಾಸ್ ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕ್ರೂಸರ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಕಲಬುರಗಿ ಕಡೆಯ ತೂಫಾನ್ ವಾಹನ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಧರ್ಮಸ್ಥಳದಿಂದ ಕಾರ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ತೂಫಾನ್ ವಾಹನದ ಚಾಲಕ ಮಣ್ಣಪ್ಪ, ಪ್ರಯಾಣಿಕರಾದ ಚೇತು, ರೋಹಿತ್ ಮೃತಪಟ್ಟವರು. ತೂಫಾನ್ ವಾಹನದಲ್ಲಿ ಒಟ್ಟು 13 ಮಂದಿ ಹಾಗೂ ಒಂದು ಮಗು ಪ್ರಯಾಣಿಸುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ಒಬ್ಬರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಕಾರ್ಕಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಉಳಿದ ಗಾಯಾಳುಗಳು ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಪ್ರದೇಶದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಖಾಸಗಿ ಬಸ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರ್ಕಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.