ADVERTISEMENT

ಕಲಬುರಗಿ | ಲಾಕಪ್‌ ಡೆತ್ ಆರೋಪ: ಪೋಷಕರಿಂದ ಪ್ರತಿಭಟನೆ

ಪೊಲೀಸ್ ವಶದಲ್ಲಿದ್ದಾಗ ವಿಚಾರಣಾಧೀನ ಆರೋಪಿ ಸಾವು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 21:26 IST
Last Updated 24 ಫೆಬ್ರುವರಿ 2025, 21:26 IST
ಕಲಬುರಗಿಯಲ್ಲಿ ಸೋಮವಾರ ಡಿಸಿಪಿ ಕನಿಕಾ ಸಿಕ್ರಿವಾಲ್ ಅವರ ಮುಂದೆ ಮೃತ ಕೃಷ್ಣ ರಾಠೋಡ ತಾಯಿ ಅಳಲು ತೋಡಿಕೊಂಡರು
ಕಲಬುರಗಿಯಲ್ಲಿ ಸೋಮವಾರ ಡಿಸಿಪಿ ಕನಿಕಾ ಸಿಕ್ರಿವಾಲ್ ಅವರ ಮುಂದೆ ಮೃತ ಕೃಷ್ಣ ರಾಠೋಡ ತಾಯಿ ಅಳಲು ತೋಡಿಕೊಂಡರು   

ಕಲಬುರಗಿ: ‘ಮಹಿಳೆ ನಾಪತ್ತೆ ಪ್ರಕರಣ ವಿಚಾರಣೆ ನೆಪದಲ್ಲಿ ವಶಕ್ಕೆ ಪಡೆದಿದ್ದ ಕೃಷ್ಣ ವಿಠಲ ರಾಠೋಡ (26) ಪೊಲೀಸರ ದೌರ್ಜನ್ಯದಿಂದ ಮೃತಪಟ್ಟಿದ್ದಾನೆ’ ಎಂದು ಆರೋಪಿಸಿ ಆತನ ಪೋಷಕರು ಹಾಗೂ ಸಂಬಂಧಿಕರು ನಗರ ಪೊಲೀಸ್‌ ಆಯುಕ್ತರ ಕಚೇರಿ ಎದುರು ಸೋಮವಾರ ರಾತ್ರಿ ಪ್ರತಿಭಟಿಸಿದರು.

‘ಮಿಜಗುರಿ ಕ್ರಾಸ್‌ನಿಂದ ಮೈನಾಬಾಯಿ ಎಂಬ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ರೋಜಾ ಠಾಣೆಯ ಪೊಲೀಸರು ಹಡಗಿಲ್ ಹಾರುತಿ ಗ್ರಾಮದ ಕೃಷ್ಣ ರಾಠೋಡನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಪೊಲೀಸರ ವಶದಲ್ಲಿದ್ದಾಗ ಅನುಮಾನಾಸ್ಪದವಾಗಿ ಆತ ಮೃತಪಟ್ಟಿದ್ದಾನೆ. ಆತನ ಸಹೋದರ ಹಾಗೂ ತಾಯಿಯ ಸಮ್ಮುಖದಲ್ಲಿ ಪೊಲೀಸರು ಒತ್ತಾಯದಿಂದ ಶವವನ್ನು ಸುಟ್ಟು ಹಾಕಿಸಿದ್ದಾರೆ’ ಎಂದು ಬಂಜಾರ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

‘ಯುವಕನ ಸಾವಿಗೆ ನ್ಯಾಯ ಕೊಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿ ಬಂಜಾರ ಸಮುದಾಯದ ಮುಖಂಡರು, ಕುಟುಂಬಸ್ಥರು ಡಿಸಿಪಿ ಕನಿಕಾ ಸಿಕ್ರಿವಾಲ್ ಅವರಿಗೆ ಮನವಿ ಮಾಡಿದರು.

ADVERTISEMENT

ಲಾಕಪ್ ಡೆತ್‌: ‘ಯುವಕನನ್ನು ಠಾಣೆಗೆ ಕರೆದೊಯ್ದ ಪೊಲೀಸರು ತಲೆ, ಕಾಲಿಗೆ ಬಲವಾಗಿ ಹೊಡೆದಿದ್ದಾರೆ. ಪೊಲೀಸರ ಹೊಡೆತದಿಂದ ಸಾವನ್ನಪ್ಪಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಯುವಕನ ತಾಯಿ ಹಾಗೂ ತಮ್ಮನನ್ನು ಹೆದರಿಸಿದ್ದಾರೆ. ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳದಿದ್ದರೆ ಡಬಲ್ ಮರ್ಡರ್ ಕೇಸ್ ಹಾಕುವುದಾಗಿ ಬೆದರಿಸಿ, ತಮಗೆ ಬೇಕಾದಂತೆ ಮೃತನ ತಮ್ಮನಿಂದ ಹೇಳಿಕೆ ಪಡೆದುಕೊಂಡಿದ್ದಾರೆ’ ಎಂದು ಸಮುದಾಯದ ಮುಖಂಡ ರಾಮಚಂದ್ರ ಜಾಧವ ಆರೋಪಿಸಿದರು.

‘ಲಾಕಪ್‌ ಡೆತ್ ಮುಚ್ಚಿಹಾಕಲು ಬೆದರಿಕೆ ಜತೆಗೆ ತಾಯಿ ಮತ್ತು ತಮ್ಮನಿಗೆ ಹಣವನ್ನೂ ಕೊಟ್ಟಿದ್ದಾರೆ. ತರಾತುರಿಯಲ್ಲಿ ಶವವನ್ನು ನಗರದಲ್ಲೇ ಸುಟ್ಟು ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

‘ಪೊಲೀಸರು ಚಿತ್ರಹಿಂಸೆ ಕೊಟ್ಟಿದ್ದರಿಂದ ಯುವಕನ ಸಾವಾಗಿದೆ. ಇದರ ಹಿಂದೆ ಪೊಲೀಸ್ ಹಿರಿಯ ಅಧಿಕಾರಿಯ ಹಸ್ತಕ್ಷೇಪವಿದೆ. ನೊಂದ ಕುಟುಂಬಕ್ಕೆ ಪರಿಹಾರ ಕೊಡಬೇಕು’ ಎಂದು ಪ್ರೇಮಕುಮಾರ್ ರಾಠೋಡ ಮನವಿ ಮಾಡಿದರು.

ತಡರಾತ್ರಿ ಮನೆಯಿಂದ ಕರೆದೊಯ್ದರು: ‘ಭಾನುವಾರ ರಾತ್ರಿ 3ರ ಸುಮಾರಿಗೆ ಮನೆಗೆ ಬಂದ ಪೊಲೀಸರು ನನ್ನ ಹಾಗೂ ತಾಯಿಯನ್ನು ಗೋಪ್ಯವಾಗಿ ಪೊಲೀಸ್ ಠಾಣೆಗೆ ಕರೆತಂದರು. ನನಗೆ ಓದಲು ಬರೆಯಲು ಬಾರದು. ಬಿಳಿಯ ಹಾಳೆಯ ಮೇಲೆ ಸಹಿ ಪಡೆದ ಪೊಲೀಸರು ಅವರು ಹೇಳಿದಂತೆ ಕೇಳುವಂತೆ ಬೆದರಿಕೆ ಹಾಕಿದ್ದರು. ‘ನನ್ನ ಅಣ್ಣನಿಗೆ (ಕೃಷ್ಣ) ಎದೆ ನೋವು ಕಾಣಿಸಿಕೊಂಡಿತ್ತು. ಆಂಬುಲೆನ್ಸ್ ಸಿಗಲಿಲ್ಲ. ಪೊಲೀಸರ ಗಾಡಿಯಲ್ಲಿ ಆಸ್ಪತ್ರೆಗೆ ತರುವಾಗ ಸಾವನ್ನಪ್ಪಿದ್ದಾನೆ’ ಎಂದು ವೈದ್ಯರ ಮುಂದೆ ಹೇಳುವಂತೆ ಪೊಲೀಸರು ತಾಕೀತು ಮಾಡಿದ್ದರು. ಪೊಲೀಸರಿಗೆ ಹೆದರಿ ಅವರು ಹೇಳಿದಂತೆ ವೈದ್ಯರಿಗೂ ಹಾಗೂ ಮಧ್ಯಾಹ್ನ ಮಾಧ್ಯಮದವರಿಗೆ ಹೇಳಿದ್ದೇನೆ’ ಎಂದು ಮೃತನ ತಮ್ಮ ಭೀಮಾ ಪ್ರತಿಕ್ರಿಯಸಿದರು.

ಕುಟುಂಬಸ್ಥರ ಮನವಿ ಆಲಿಸಿದ ಡಿಸಿಪಿ ಕನಿಕಾ ಸಿಕ್ರಿವಾಲ್, ಈ ಸಂಬಂಧ ಲಿಖಿತ ರೂಪದಲ್ಲಿ ದೂರು ಕೊಟ್ಟರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

‘ಮಹಿಳೆ ನಾಪತ್ತೆ ಪ್ರಕರಣದಲ್ಲಿ ಸ್ಥಳ ಮಹಜರಿಗಾಗಿ ಭಾನುವಾರ ಬೆಳಿಗ್ಗೆ ಶರಣ ಸಿರಸಗಿ ಮಡ್ಡಿಗೆ ಕೃಷ್ಣನನ್ನು ಕರೆದೊಯ್ದಿದ್ದೆವು. ಆರೋಗ್ಯ ಸಮಸ್ಯೆಯಿಂದ ಕುಸಿದು ಬಿದ್ದ. ಚಿಕಿತ್ಸೆಗಾಗಿ ಜಿಮ್ಸ್‌ಗೆ ದಾಖಲಿಸಲಗಿತ್ತು. ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.