ADVERTISEMENT

ಅಫಜಲಪುರ | ಮೆಣಸಿನಕಾಯಿ ಸಸಿ ಅಭಾವ: ಪರದಾಟ

ಶಿವಾನಂದ ಹಸರಗುಂಡಗಿ
Published 8 ಆಗಸ್ಟ್ 2023, 5:39 IST
Last Updated 8 ಆಗಸ್ಟ್ 2023, 5:39 IST
ಅಫಜಲಪುರ ಪಟ್ಟಣದ ಕರಜಗಿ ರಸ್ತೆಬದಿ ಆಂಧ್ರ ಮೂಲದವರು ನರ್ಸರಿಯಲ್ಲಿ ಮೆಣಸಿನಕಾಯಿ ಸಸಿಗಳನ್ನು ಬೆಳೆದಿರುವುದು
ಅಫಜಲಪುರ ಪಟ್ಟಣದ ಕರಜಗಿ ರಸ್ತೆಬದಿ ಆಂಧ್ರ ಮೂಲದವರು ನರ್ಸರಿಯಲ್ಲಿ ಮೆಣಸಿನಕಾಯಿ ಸಸಿಗಳನ್ನು ಬೆಳೆದಿರುವುದು    

ಅಫಜಲಪುರ: ಕಳೆದ ಎರಡು ತಿಂಗಳು ತಾಲ್ಲೂಕಿನಲ್ಲಿ ಮಳೆ ಇಲ್ಲದ ಕಾರಣ ಮೆಣಸಿನ ಸಸಿಗಳಿಗೆ ಬೇಡಿಕೆ ಬರಲಿಲ್ಲ. ಆದರೆ ಜುಲೈ ತಿಂಗಳ ಕೊನೆಯ ವಾರದಲ್ಲಿ ಮಳೆಯಾಗಿದ್ದರಿಂದ ಮೆಣಸಿನ ಸಸಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಬೇಡಿಕೆಗೆ ತಕ್ಕಂತೆ ನರ್ಸರಿಗಳಲ್ಲಿ ಸಸಿಗಳು ದೊರೆಯುತ್ತಿಲ್ಲ.

ನರ್ಸರಿಗಳಲ್ಲಿ ಮಾಲೀಕರು ಮೆಣಸಿನ ಸಸಿಗಾಗಿ ಬೇಡಿಕೆಯಿಟ್ಟು ಮುಂಗಡವಾಗಿ ಹಣ ನೀಡಿದರೆ ತಯಾರಿ ಮಾಡಿ ಕೊಡುತ್ತಾರೆ. ಆದರೆ ಆಗಸ್ಟ್ ತಿಂಗಳು ಮೆಣಸಿನ ಸಸಿಗಳನ್ನು ನಾಟಿ ಮಾಡುವ ಸಮಯ. ಅದಕ್ಕಾಗಿ ರೈತರು ಮೆಣಸಿನ ಸಸಿಗಳಿಗಾಗಿ ಪರದಾಡುವಂತಾಗಿದೆ.

ಹಸಿಮೆಣಸಿನಕಾಯಿ ಬೆಳೆಯುವ ರೈತರು ಜೂನ್ ತಿಂಗಳಲ್ಲಿ ನಾಟಿ ಮಾಡಬೇಕು. ಆದರೆ ಆ ಸಮಯದಲ್ಲಿ ಮಳೆ ಬಂದಿಲ್ಲ. ಇನ್ನೊಂದೆಡೆ ಮಳೆ ಬರುವ ಭರವಸೆಯಲ್ಲಿ ನರ್ಸರಿ ಮಾಲೀಕರು ಜೂನ್ ತಿಂಗಳಲ್ಲಿ ಮೆಣಸಿನ ಸಸಿಗಳನ್ನು ತಯಾರು ಮಾಡಿದ್ದರು. ಆದರೆ ಮಳೆ ಬಾರದ ಕಾರಣ ಸಸಿಗಳು ಮಾರಾಟವಾಗದೇ ಹಾಳಾಗಿ ಹೋಗಿವೆ ಎಂದು ನರ್ಸರಿ ಮಾಲೀಕರು ಹೇಳುತ್ತಾರೆ.

ADVERTISEMENT

‘ರೈತರು ಹೈಬ್ರೀಡ್‌ ಮೆಣಸಿನ ಸಸಿಗಳನ್ನು ತಯಾರು ಮಾಡಲು ನಮಗೆ ಬೇಡಿಕೆ ನೀಡಿ ಹಣ ನೀಡಿದರೆ ಒಂದು ತಿಂಗಳ ನಂತರ ಅವರಿಗೆ ಸಸಿಗಳನ್ನು ನೀಡುತ್ತೇವೆ. ಸಸಿಗಳನ್ನು ತಯಾರಿಸಲು ಒಂದು ತಿಂಗಳು ಬೇಕು’ ಎಂದು ಅವರು ಹೇಳುತ್ತಾರೆ.

ಕಳೆದ ಐದು ವರ್ಷಗಳಿಂದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಏರುತ್ತಲೇ ಇದೆ. ಅದಕ್ಕಾಗಿ ಮೆಣಸಿನ ಸಸಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಮೆಣಸಿನಕಾಯಿ ಬೆಳೆಗೆ ರೈತರು ತಿಪ್ಪೆಗೊಬ್ಬರವನ್ನು ಹೆಚ್ಚು ಬಳಸಬೇಕು. ಇದರಿಂದ ರೋಗಬಾಧೆ   ಕಡಿಮೆಯಾಗುತ್ತದೆ. ಅಲ್ಲದೇ ಇಳುವರಿಯನ್ನೂ ಹೆಚ್ಚು ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಂದ್ರ ಹೊನ್ನಪ್ಪಗೋಳ ತಿಳಿಸಿದರು.

ಮೆಣಸಿನ ಕೃಷಿ ನರೇಗ ಯೋಜನೆಗೆ ಅಳವಡಿಸಿ: ಮೆಣಸಿನಕಾಯಿ ಕೃಷಿ ಮಾಡುವುದು ಅಷ್ಟು ಸುಲಭವಲ್ಲ ಮೆಣಸಿನ ಗಿಡಗಳಿಗೆ ರೋಗಗಳು ಬರುತ್ತವೆ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನ ರೈತರು ಮೆಣಸಿನಕಾಯಿ ಬೆಳೆ ಬೆಳೆಯಲು ಹೋಗಿ ಸಾಲ ಮಾಡಿಕೊಂಡಿದ್ದಾರೆ ಅದಕ್ಕಾಗಿ ಮೆಣಸಿನಕಾಯಿ ಕೃಷಿಯನ್ನು ನರೇಗಾ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಇದರಿಂದ ರೈತರು ಅನುಕೂಲವಾಗಲಿದೆ ಎಂದು ಮಾಜಿ ಕೃಷಿ ಒಕ್ಕಲುತನ ಮಾರಾಟ ಸಹಕಾರಿ ಸಂಘದ ನಿರ್ದೇಶಕ ಶಿವು ಪ್ಯಾಟಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ನಿರ್ದೇಶಕರಾದ ಅರ್ಜುನ ಸೋಮಜಾಳ ಹಾಗೂ ಮನೋಹರ್ ರಾಥೋಡ್ ಹೇಳುತ್ತಾರೆ.

ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ನಿರ್ದೇಶಕ ಅರ್ಜುನ್ ಸೋಮಜಾಳ.
ಸಾವಯವ ಕೃಷಿ ತಜ್ಞ ಲತೀಫ್ ಪಟೇಲ್ ಭೋಗನಹಳ್ಳಿ
ತೋಟಗಾರಿಕೆ ಇಲಾಖೆ ಮುಖಾಂತರ ರೈತರಿಗೆ ವಿವಿಧ ಸಸಿಗಳನ್ನು ಬೆಳೆಸಲು ಶೇ 70ರಷ್ಟು ಸಹಾಯಧನದಲ್ಲಿ ನರ್ಸರಿ ಘಟಕಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಬೇಕು
ಅರ್ಜುನ್ ಸೋಮಜಾಳ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ನಿರ್ದೇಶಕ
ಮೆಣಸಿನಕಾಯಿ ಕೃಷಿ ಲಾಭದಾಯಕವಾಗಿದೆ. ಆದರೆ ಅದನ್ನು ಬೆಳೆಯುವುದು ಕಷ್ಟಕರ. ಕೃಷಿ ವಿಜ್ಞಾನಿಗಳು ರೋಗರಹಿತ ಮೆಣಸಿನಕಾಯಿ ತಳಿಗಳನ್ನು ಸಂಶೋಧನೆ ಮಾಡಬೇಕು
ಲತೀಫ್ ಪಟೇಲ್ ಭೋಗನಹಳ್ಳಿ ಸಾವಯವ ಕೃಷಿ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.