ADVERTISEMENT

‘ಬಿಡುವು ಮಾಡಿಕೊಂಡು ಪಕ್ಷ ಸಂಘಟನೆಗೆ ಶ್ರಮಿಸಿ’

ಅಫಜಲಪುರ: ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ನಿತಿನ್‌ ಗುತ್ತೇದಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 14:46 IST
Last Updated 29 ಆಗಸ್ಟ್ 2024, 14:46 IST
ಅಫಜಲಪುರ ಶಾರದಾ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಅಫಜಲಪುರ ಶಾರದಾ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು   

ಅಫಜಲಪುರ: ‘ವಿಶ್ವವೇ ಮೆಚ್ಚುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಮತ್ತು ಬಿಜೆಪಿಗೆ  ಶಕ್ತಿ  ತುಂಬಲು ನಾವೆಲ್ಲರೂ ಜತೆಗೂಡಿ, ಶ್ರಮವಹಿಸಿ ಸದಸ್ಯತಾ ಅಭಿಯಾನ ಯಶಸ್ವಿಗೊಳಿಸಬೇಕು’ ಎಂದು ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ್ ಹೇಳಿದರು.

ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು.

‘ವೈಯಕ್ತಿಕ ಕೆಲಸದ ಮಧ್ಯೆಯೂ ಬಿಡುವು ಮಾಡಿಕೊಂಡು ಪಕ್ಷ ಸಂಘಟನೆಗೆ ಕೆಲಸ ಮಾಡಬೇಕು. ಕಳೆದ ಕಳೆದ ಬಾರಿ ಸುಮಾರು 35 ಸಾವಿರ ಸದಸ್ಯತ್ವ ಮಾಡಲಾಗಿದ್ದು ಈ ಬಾರಿ ನಾವು 80 ಸಾವಿರ ಗುರಿ ಮುಟ್ಟಬೇಕು. ಅದಕ್ಕಾಗಿ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಪೇಜ್ ಪ್ರಮುಖರು, ಬೂತ್ ಮಟ್ಟದ ಎಲ್ಲಾ ಅಧ್ಯಕ್ಷರು ಸದಸ್ಯರು ಸಕ್ರಿಯವಾಗಿ ಕೆಲಸ ಮಾಡಬೇಕು. ನಾನು ಸಹ ಗ್ರಾಮೀಣ ಭಾಗದಲ್ಲಿ ಬಂದು ಸದಸ್ಯತಾ ಅಭಿಯಾನದಲ್ಲಿ ಪಾಲ್ಗೊಂಡು ನಿಮ್ಮ ಜತೆಯಲ್ಲಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ADVERTISEMENT

ಮುಖಂಡ ಅರವಿಂದ ಮಾತನಾಡಿ, ‘ಸದಸ್ಯತಾ ಅಭಿಯಾನ ಎಂದರೆ ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವುದು. ನಮ್ಮಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಿ ಬರುವುದಿಲ್ಲ ಹೀಗಾಗಿ ನಾವು ಈ ಬಾರಿ ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್‌ ಮೂರರಲ್ಲೂ ಸೋತಿದ್ದೇವೆ. ಪಕ್ಷದ ಸಂಘಟನೆ, ಶಕ್ತಿ ತುಂಬಲು ನಾವೆಲ್ಲರೂ ಕೆಲಸ ಮಾಡಬೇಕು. ಮೋರ್ಚಾಗಳು, ಶಕ್ತಿ ಕೇಂದ್ರಗಳು ಸಕ್ರಿಯವಾಗಿ ಕೆಲಸ ಮಾಡಿದರೆ ಮಾತ್ರ ನಾವು ಗುರಿ ಮುಟ್ಟಲು ಸಾಧ್ಯವಾಗುತ್ತದೆ’ ಎಂದರು. 

ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿದ್ಯಾಧರ ಮಂಗಳೂರು ಮಾತನಾಡಿ, ‘ಪಕ್ಷ ಸಂಘಟನೆಗಾಗಿ ಮತ್ತು ಪಕ್ಷಕ್ಕೆ ಶಕ್ತಿ ತುಂಬಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು’ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ಘಟಕಗಳ ನೇಮಕವಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಪಕ್ಷದ ಮುಖಂಡರಾದ ಅಶೋಕ ಬಗಲಿ, ಬೀರಣ್ಣ ಕಲ್ಲೂರ, ನಾಗೇಶ ಕೊಳ್ಳಿ, ಶಂಕು ಮ್ಯಾಕೇರಿ, ಶಿವಪುತ್ರಪ್ಪ ಕರೂಟಿ, ಸೈಬಣ್ಣ ಪೂಜಾರಿ, ಸಿದ್ದನಗೌಡ ಪಾಟೀಲ, ಮಾಳಪ್ಪ ಪೂಜಾರಿ ಹೂವಿನಹಳ್ಳಿ, ಧಾನು ಪತಾಟೆ, ಶರಣು ಪದಕಿ, ಶೈಲೇಶ ಗುಣಾರಿ, ರಮೇಶ ನೀಲಗಾರ, ಮಲ್ಲಿಕಾರ್ಜುನ ಲಿಂಗದಳ್ಳಿ, ಸುನೀಲ ಶೆಟ್ಟಿ, ಶಾಬೂದಿನ್ ಅತ್ತಾರ್, ಪುರಸಭೆ ಸದಸ್ಯರು ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.