ಅಪಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಡಿ.14 ರಿಂದ ಎರಡು ದಿನ ದತ್ತ ಮಹಾರಾಜರ ಜಯಂತಿ ನಡೆಯಲಿದ್ದು ದೇವಸ್ಥಾನ ಸಕಲ ವ್ಯವಸ್ಥೆ ಮಾಡಿದ್ದಾರೆ.
ಈಗಾಗಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣಗಳಿಂದ ಯಾತ್ರಿಕರು ಪಾದಯಾತ್ರೆ, ವಾಹನಗಳ ಮೂಲಕ ಬರುತ್ತಿದ್ದಾರೆ.
ದತ್ತಾತ್ರೇಯನನ್ನು ಬ್ರಹ್ಮ, ವಿಷ್ಣು ಮತ್ತು ಶಿವನ ರೂಪ ಎಂದು ಪರಿಗಣಿಸಲಾಗುತ್ತದೆ. ಡಿ.14 ದತ್ತನ ಜನ್ಮದಿನ ಎಂದು ಭಕ್ತರು ಆಚರಣೆ ಮಾಡುತ್ತಾರೆ. ಹಸು ಮತ್ತು ನಾಯಿಗಳನ್ನು ವಾಹವನ್ನಾಗಿ ಮಾಡಿಕೊಮಡ ದತ್ತಾತ್ರೇಯನನ್ನು ವಿಷ್ಣುವಿನ 6ನೇ ಅವತಾರ ಎಂದೂ ಪರಿಗಣಿಸಲಾಗಿದ್ದು ಈತನನ್ನು ಅಜನ್ಮ ಬ್ರಹ್ಮಚಾರಿ ಮತ್ತು ಸನ್ಯಾಸಿ ಎಂದು ಕರೆಯಲಾಗುತ್ತದೆ. ದತ್ತ ದೇಗುಲ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿದ್ದು, ಪವಿತ್ರ ಪೂಜಾ ಸ್ಥಳವಾಗಿದೆ.
21 ವರ್ಷಗಳ ಕಾಲ ಗಾಣಗಪುರದಲ್ಲಿ ನೆಲಸಿರುವ ನರಸಿಂಹ ಸರಸ್ವತಿ ಅವರ ರೂಪದಲ್ಲಿ ದತ್ತ ಮಹಾರಾಜರು ಪುನರ್ಜನ್ಮ ಪಡೆದಿದ್ದಾರೆ ಎಂಬುದು ಇಲ್ಲಿನ ಜನರ, ಭಕ್ತರ ನಂಬಿಕೆಯಾಗಿದೆ.
‘ದೇವಲ ಗಾಣಗಾಪುರದ ದತ್ತ ದೇವಸ್ಥಾನದಲ್ಲಿ ಡಿ. 14ರಂದು ಮಧ್ಯಾಹ್ನ 12 ಗಂಟೆಗೆ ದತ್ತ ಜಯಂತಿ ನಿಮಿತ್ತ ತೊಟ್ಟಿಲು ಉತ್ಸವ, 15ರಂದು ಮಧ್ಯಾಹ್ನ 5 ಗಂಟೆಗೆ ರಥೋತ್ಸವ ಜರುಗಲಿದೆ’ ಎಂದು ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ತಿಳಿಸಿದ್ದಾರೆ.
‘ಯಾತ್ರಿಕರು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗ ಹಾಗೂ ಮಹಾರಾಷ್ಟ್ರ ವಿವಿಧೆಡೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ವ್ಯವಸ್ಥೆ ಕೈಗೊಳ್ಳಲಾಗಿದೆ. ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪೌಜಿಯಾ ತರನುಮ್ ಅವರು ದೇವಲ ಗಾಣಗಾಪುರಕ್ಕೆ ಆಗಮಿಸಿ ಎಲ್ಲ ವ್ಯವಸ್ಥೆ ಪರಿಶೀಲಿಸಿದ್ದಾರೆ’ ಎಂದು ಅವರ ತಿಳಿಸಿದರು.
ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಪೂಜೆ ಸೇರಿ ವಿವಿಧ ಆಚರಣೆಗಳನ್ನು ಹೊರಗಡೆ ನಿಂತು ನೋಡಲು ಸ್ಕ್ರೀನ್ ವ್ಯವಸ್ಥೆ ಮಾಡಿ ನೇರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಪೋಲಿಸ್, ಆರೋಗ್ಯ ಇಲಾಖೆಯ ಸಹಕಾರ ಪಡೆದುಕೊಳ್ಳಲು ವಿನಂತಿಸಲಾಗಿದೆ. ಯಾತ್ರಿಕರು ಸರತಿಯಲ್ಲಿ ನಿಂತು ಮಹಾರಾಜರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.
ಸಂಗಮ ವರದಿ: ನರಸಿಂಹ ಸರಸ್ವತಿ ಮಹಾರಾಜರು ತಪಸ್ಸು ಮಾಡಿರುವ ಭೀಮಾ–ಅಮರ್ಜಾ ನದಿಗಳ ಸಂಗಮ ಸ್ಥಾನ ಪವಿತ್ರವಾದದ್ದು ದತ್ತಾತ್ರೇಯ ಮಹಾರಾಜರ ಜಯಂತಿ ನಿಮಿತ್ ಅಲ್ಲಿಯೂ ಯಾತ್ರಿಕರು ಸಂಗಮದಲ್ಲಿ ಸ್ನಾನ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ವ್ಯವಸ್ಥಾಪಕ ಡಿವಾಳಪ್ಪ ವಡಗೇರಿ ತಿಳಿಸಿದರು.
‘ಲಕ್ಷಾಂತರ ಭಕ್ತರು ಸೇರುವುದರಿಂದ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಜತೆ ಪ್ರತಿಯೊಬ್ಬರಿಗೂ ದತ್ತಾತ್ರೇಯ ಮಹಾರಾಜರ ದರ್ಶನ ಪಡೆಯುವುದು ಪ್ರಮುಖವಾಗಿರುತ್ತದೆ. ದೇವಸ್ಥಾನದ ಮುಂದಿನ ಭಾಗ ಬಹಳ ಚಿಕ್ಕದಾಗಿರುವುದರಿಂದ ಯಾತ್ರಿಕರಿಗೆ ದರ್ಶನ ಮಾಡಲು ತೊಂದರೆ ಆಗುತ್ತದೆ. ಅದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಅನುದಾನ ನೀಡಿ ಮಾಸ್ಟರ್ ಪ್ಲಾನ್ ಅಳವಡಿಕೆ ಮಾಡಬೇಕು’ ಎನ್ನುವುದು ದೇವಲ ಗಾಣಗಾಪುರ ಗ್ರಾಮಸ್ಥರ ಬೇಡಿಕೆ.
ಯಾತ್ರಿಕರು ಸಂಗಮದಲ್ಲಿ ಮತ್ತು ಭೀಮಾನದಿಯಲ್ಲಿ ಸ್ನಾನ ಮಾಡುವಾಗ ಎಚ್ಚರಿಕೆಯಿಂದ ಇರಬೇಕು, ನೀರಿನ ಮಧ್ಯದಲ್ಲಿ ಯಾರು ಹೋಗಬಾರದು ಆದಷ್ಟು ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ಸಮಿತಿ ತಿಳಿಸಿದೆ.
ದೇವಸ್ಥಾನ ಸಾಲಕಾರಿ ಪೂಜಾರಿ ಚೈತನ್ಯ ರಮೇಶ್ ಭಟ್ ಪೂಜಾರಿ, ಹೃಷಿಕೇಶ್ ಪೂಜಾರಿ, ಪ್ರಸಾದ್ ಪೂಜಾರಿ ಕಿರಣ್ ಪೂಜಾರಿ, ವಲ್ಲಭ ಪೂಜಾರಿ ದೇವಸ್ಥಾನ ಸಮಿತಿಯ ಸಿಬ್ಬಂದಿಗಳಾದ ದತ್ತು ಎಲ್ ನಿಂಬರಗಿ, ಸತೀಶ್ ರಜಪೂತ್, ಮಡಿವಾಳ, ರಮೇಶ್ ಪಟೇದ, ಧನರಾಜ್ ಕಮಲೇಶ್ ಮುಂತಾದ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.