
ಅಫಜಲಪುರ: ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ತಹಶೀಲ್ದಾರ್ ಕಚೇರಿಯ ಒಳಗಡೆ ಹೋಗುವ ಗೇಟ್ ಮುಂದಿನ ಚರಂಡಿಯ ಸ್ಲ್ಯಾಬ್ ಕುಸಿದು ಬಿದ್ದಿದೆ. ಇದರಿಂದ ತಹಶೀಲ್ದಾರ್ ಕಚೇರಿಗೆ ಬರುವ ಸಾರ್ವಜನಿಕರು ಚರಂಡಿ ದಾಟಲು ಹರಸಾಹಸ ಮಾಡುವಂತಾಗಿದೆ.
ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ರಸ್ತೆ ವಿಸ್ತರಣೆ ಜೊತೆಗೆ ಕಳೆದ ಎರಡು ವರ್ಷಗಳಿಂದ ಎರಡೂ ಬದಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಈಚೆಗೆ ಕನ್ನಡ ರಾಜ್ಯೋತ್ಸವ ಆಚರಣೆಗೆ ತೊಂದರೆ ಆಗುತ್ತದೆ ಎಂದು ಚರಂಡಿ ಗುತ್ತಿಗೆದಾರರು ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸಿದ್ದಾರೆ. ಆದರೆ, ಮರುದಿನವೇ ಚರಂಡಿಯ ಅಲ್ಲಲ್ಲಿ ಸ್ವಲ್ಪ ಬಿರುಕು ಬಿಟ್ಟು ಹಾಳಾಗಿತ್ತು. ಕಳಪೆ ಕಾಮಗಾರಿ ಬಗ್ಗೆ ತಹಶೀಲ್ದಾರ್ ಆಕ್ಷೇಪ ಮಾಡಿದ್ದರಿಂದ ಚರಂಡಿ ಸ್ಲ್ಯಾಬ್ ಸಂಪೂರ್ಣವಾಗಿ ಕಿತ್ತಿ ಹಾಕಲಾಗಿದೆ.
ಈ ಕುರಿತು ತಹಶೀಲ್ದಾರ್ ಸಂಜುಕುಮಾರ್ ದಾಸರ ಅವರನ್ನು ವಿಚಾರಿಸಿದಾಗ, ‘ಕನ್ನಡ ರಾಜ್ಯೋತ್ಸವ ಪ್ರಯುಕ್ತ ಚರಂಡಿ ಗ್ರಾಮಗಾರಿ ಮಾಡಲು ಹೇಳಿದ್ದೆ. ಆದರೆ ಗುತ್ತಿಗೆದಾರರು ತರಾತುರಿಯಲ್ಲಿ ಚರಂಡಿ ನಿರ್ಮಾಣ ಮಾಡಿ ಸ್ಲ್ಯಾಬ್ ಹಾಕಿದ್ದಾರೆ. ಆದರೆ ಸರಿಯಾಗಿ ಕ್ಯೂರಿಂಗ್ ಆಗದ ಕಾರಣ ಅದು ಅಲ್ಲಲ್ಲಿ ಕುಸಿದು ಬಿದ್ದಿತ್ತು. ಅದಕ್ಕಾಗಿ ಸಂಪೂರ್ಣವಾಗಿ ಕಿತ್ತಿಹಾಕಿ ಮತ್ತೊಮ್ಮೆ ಸರಿಯಾಗಿ ಮಾಡಲು ಹೇಳಿದ್ದೇನೆ’ ಎಂದು ತಿಳಿಸಿದರು.
ರಸ್ತೆ ವಿಸ್ತರಣೆ ಕಾಮಗಾರಿ ಎರಡು ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಅಲ್ಲಲ್ಲಿ ಸಿಮೆಂಟ್ ಕಳಚಿ ಬೀಳುತ್ತಿದೆ. ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ರಸ್ತೆ ಡಾಂಬರೀಕರಣ ಮತ್ತು ಫುಟ್‌ಪಾತ್ ಕಾಮಗಾರಿ ಇನ್ನೂ ಮಾಡಬೇಕಾಗಿದೆ. ಕೆಲಸ ಅಪೂರ್ಣವಾಗಿದ್ದರೂ ರಸ್ತೆ ಡಿವೈಡರ್‌ಗೆ ಬಣ್ಣ ಬಳಿಯಲಾಗುತ್ತಿದೆ ಎಂದು ಪಟ್ಟಣದ ನಾಗರಿಕರು ದೂರುತ್ತಾರೆ.
ಚರಂಡಿ ನಿರ್ಮಾಣ ಮಾಡುತ್ತಿರುವ ಮಧ್ಯದಲ್ಲಿ ವ್ಯಾಪಾರಸ್ಥರ ಶೋರೂಮ್ ಬರುತ್ತಿದ್ದು ಅವರು ಜಾಗ ನಮ್ಮದು ಎಂದು ಕೋರ್ಟ್‌ಗೆ ಹೋಗಿದ್ದಾರೆ. ಹೀಗಾಗಿ ಚರಂಡಿ ಕಾಮಗಾರಿ ಪೂರ್ಣವಾಗುತ್ತಿಲ್ಲ. ಅಲ್ಲಲ್ಲಿ ಉಳಿದುಕೊಂಡಿದೆ. ಕೆಲವು ಕಡೆ ಚರಂಡಿ ಕಾಮಗಾರಿ ನೇರವಾಗಿ ಮಾಡಿಲ್ಲ. ರಾಜಕೀಯಕ್ಕೆ ಮಣಿದು ಕಾಮಗಾರಿ ಮಾಡುತ್ತಿರುವುದರಿಂದ ಚರಂಡಿ ಮತ್ತು ರಸ್ತೆ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಗುತ್ತಿದಾರರು ಎರಡು ತಿಂಗಳಿಗೊಮ್ಮೆ ಬರುತ್ತಾರೆ ಎಂಬ ಆರೋಪ ಹೋರಾಟಗಾರದ್ದು.
‘ಪುರಸಭೆ ಮುಖ್ಯಾಧಿಕಾರಿ ಮತ್ತು ಎಂಜಿನಿಯರ್ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟಿರುವುದು ವಿರಳ. ಹೀಗಾಗಿ ಗುತ್ತಿಗೆದಾರರಿಗೆ ಯಾರದೂ ಭಯವಿಲ್ಲದಂತಾಗಿದೆ. ಕಾಮಗಾರಿ ಎದುರಿನಲ್ಲಿಯೇ ಪುರಸಭೆ ಕಚೇರಿ ಇದ್ದು, ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂಬುದು ಸಾರ್ವಜನಿಕರ ಆರೋಪ.
ಕಾಮಗಾರಿ ನಡೆಯುತ್ತಿರುವ ರಸ್ತೆಬದಿ ಹೆಚ್ಚಾಗಿ ಸರ್ಕಾರಿ ಕಚೇರಿಗಳಿವೆ. ಚರಂಡಿ ಎತ್ತರಮಟ್ಟದಲ್ಲಿ ಇರುವುದರಿಂದ ಕಚೇರಿ ಆವರಣದ ನೀರು ಚರಂಡಿಗೆ ಸೇರುವುದಿಲ್ಲ. ಮಳೆ ಬಂದರೆ ನೀರು ನಿಲ್ಲುತ್ತದೆ. ಈ ಬಗ್ಗೆ ಸರಿಯಾದ ಕ್ರಿಯಾಯೋಜನೆ ಸಿದ್ಧಪಡಿಸಬೇಕಾಗಿತ್ತುಸುರೇಶ್ ಅವಟೆ, ತಾಲ್ಲೂಕು ವಕೀಲರ ಸಂಘದ ಸದಸ್ಯ
ಪಟ್ಟಣದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ರಸ್ತೆ ವಿಸ್ತರಣೆ ಮತ್ತು ಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಹೀಗಾಗಿ ಸರ್ಕಾರದ ಅನುದಾನ ಪೋಲಾಗುತ್ತಿದೆರಾಜು ಬಡದಾಳ ಮಲ್ಲಾಬಾದ್, ಜಿಲ್ಲಾ ಜೆಡಿಎಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.