
ಅಫಜಲಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜಕುಮಾರ ಕುಂಬಾರ ಅವರು ಅದೇ ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತಂತೆ ಶನಿವಾರ ವಿದ್ಯಾರ್ಥಿನಿಯ ಪಾಲಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಈಚೆಗೆ ವರ್ಗವಾಗಿ ಬಂದಿರುವ ಅರ್ಥಶಾಸ್ತ್ರ ಉಪನ್ಯಾಸಕ ರಾಜಕುಮಾರ ಹೊಸ ವರ್ಷದ ದಿನದಂದು ವಿದ್ಯಾರ್ಥಿನಿಗೆ ಬೆಳಿಗ್ಗೆ ಕರೆ ಮಾಡಿ ಕಾಲೇಜಿಗೆ ಕರೆಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿದುಬಂದಿದೆ. ಉಪನ್ಯಾಸಕ ರಾಜಕುಮಾರ ಶುಕ್ರವಾರ ಕಾಲೇಜಿಗೆ ರಜೆ ಹಾಕಿ ಹೋಗಿದ್ದು ಅವರ ವಿರುದ್ಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಸಮಾಜದ ಮುಖಂಡರಾದ ಈರಣ್ಣ ಪಂಚಾಳ ಅವರ ನೇತೃತ್ವದಲ್ಲಿ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿ, ಉಪನ್ಯಾಸಕನನ್ನು ಬಂಧಿಸುವವರೆಗೆ ಕಾಲೇಜು ಆರಂಭಿಸಬಾರದು ಎಂದು ಒತ್ತಾಯಿಸಿದ್ದಾರೆ.
‘ನಮ್ಮ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ರಾಜಕುಮಾರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು ನಿಜವಾಗಿದ್ದು, ಹೊಸ ವರ್ಷದಂದು ಈ ಪ್ರಕರಣ ನಡೆದಿದೆ. ನಾನು ರಜೆ ಮೇಲಿದ್ದೆ. ಈ ಬಗ್ಗೆ ಪೊಲೀಸ್ ಠಾಣೆಗೆ ಬೇಕಾಗಿರುವ ಮಾಹಿತಿಯನ್ನು ನೀಡಿದ್ದೇವೆ. ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ’ ಎಂದು ಪ್ರಾಚಾರ್ಯ ಗುರುಲಿಂಗಯ್ಯ ಸಾಲಿಮಠ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಿಎಸ್ಐ ಸೋಮಲಿಂಗ ಒಡೆಯರ್, ‘ಉಪನ್ಯಾಸಕನ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ನಾವು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಡಿಕೊಂಡಿದ್ದೇವೆ. ಬಂಧನಕ್ಕಾಗಿ ಶೋಧ ಕಾರ್ಯ ನಡೆದಿದೆ’ ಎಂದರು.