ADVERTISEMENT

ಕೆಪಿಆರ್‌ನಿಂದ ಪ್ರತಿ ಟನ್‌ಗೆ ₹3,160 ದರ: ಭೀಮರಾಯ ಕಲ್ಲೂರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 7:05 IST
Last Updated 11 ನವೆಂಬರ್ 2025, 7:05 IST
<div class="paragraphs"><p>ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಹೋರಾಟದಲ್ಲಿ ಕಬ್ಬು ಬೆಳೆಗಾರರು ಶಾಸಕ ಎಂ.ವೈ.ಪಾಟೀಲ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅವರಿಗೆ ಮನವಿ ಸಲ್ಲಿಸಿದರು</p></div>

ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಹೋರಾಟದಲ್ಲಿ ಕಬ್ಬು ಬೆಳೆಗಾರರು ಶಾಸಕ ಎಂ.ವೈ.ಪಾಟೀಲ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅವರಿಗೆ ಮನವಿ ಸಲ್ಲಿಸಿದರು

   

ಅಫಜಲಪುರ: ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಳೆದ 6 ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಸೋಮವಾರ ಅಂತ್ಯಗೊಂಡಿತು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಕಲ್ಲೂರ, ‘ಸರ್ಕಾರದ ಪ್ರೋತ್ಸಾಹಧನವೂ ಸೇರಿದಂತೆ ಕೆಪಿಆರ್‌ ಸಕ್ಕರೆ ಕಾರ್ಖಾನೆ ಕಟಾವು ಮತ್ತು ಸಾಗಾಣಿಕೆ ಹೊರತುಪಡಿಸಿ ಪ್ರತಿ ಟನ್‌ ಕಬ್ಬಿಗೆ ₹3,160 ನೀಡಲು ಒಪ್ಪಿದೆ’ ಎಂದು ಘೋಷಿಸಿದರು. ಇದನ್ನು ಸ್ವಾಗತಿಸಿದ ಕಬ್ಬು ಬೆಳೆಗಾರರು ಹೋರಾಟ ಕೈಬಿಟ್ಟರು. ಬಳಿಕ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ನಡೆಸಿದರು.

ADVERTISEMENT

‘ಉಳಿದ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶ ಪಾಲಿಸದಿದ್ದರೆ ಇಲಾಖೆಯಿಂದ ಎನ್‌ಒಸಿ ನೀಡುವುದಿಲ್ಲ. ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಮತ್ತು ಇತರೆ ವಿಷಯದಲ್ಲಿ ಕಾರ್ಖಾನೆಗಳು ಮೋಸ ಮಾಡಿದರೆ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ತಾಲ್ಲೂಕಿನ ಹವಳಗಾದ ರೇಣುಕಾ ಸಕ್ಕರೆ ಕಾರ್ಖಾನೆಯೂ ಸರ್ಕಾರ ನಿಗದಿಗೊಳಿಸಿದ ದರ ಒಪ್ಪಬೇಕು. ಅವರಿಗೆ ಒಂದು ವಾರ ಸಮಯಾವಕಾಶ ನೀಡಲಾಗಿದೆ. ಅವರು ಒಪ್ಪದಿದ್ದರೆ ಕಾರ್ಖಾನೆ ಆರಂಭಿಸಲು ಅವಕಾಶವೇ ಇರಲ್ಲ’ ಎಂದು ಭೀಮರಾಯ ಕಲ್ಲೂರು ಸ್ಪಷ್ಟಪಡಿಸಿದರು.

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ನಮ್ಮ ಸರ್ಕಾರ ರೈತರ ಪರವಾಗಿದ್ದು, ಕಬ್ಬು ಬೆಳೆಗಾರರ ಹಿತ ಕಾಪಾಡಿದೆ. ಸರ್ಕಾರ ನಿಗದಿ ಮಾಡಿದ ದರ ನೀಡಲು ಸದ್ಯ ರೇಣುಕಾ ಸಕ್ಕರೆ ಕಾರ್ಖಾನೆ ಒಪ್ಪಿಲ್ಲ. ಅವರೊಂದಿಗೆ ಚರ್ಚಿಸಿ ಒಪ್ಪಿಸಲಾಗುವುದು. ಅಲ್ಲಿವರೆಗೆ ಕಬ್ಬು ಬೆಳೆಗಾರರು ತಾಳ್ಮೆಯಿಂದಿರಬೇಕು’ ಎಂದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ‘ರೇಣುಕಾ ಸಕ್ಕರೆ ಕಾರ್ಖಾನೆಯವರು ರೈತರಿಗೆ ನಿರಂತರವಾಗಿ ಮೋಸ ಮಾಡುತ್ತಲೇ ಬರುತ್ತಿದ್ದಾರೆ. ಸರ್ಕಾರ ನಿಗದಿ ಮಾಡಿದ ದರಕ್ಕೆ ರೈತರ ಕಬ್ಬು ಖರೀದಿಸಬೇಕು. ಇಲ್ಲದಿದ್ದರೆ, ರೈತರು ಅವರ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಬಾರದು’ ಎಂದರು.

ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ್ ಮಾತನಾಡಿ, ‘ರೇಣುಕಾ ಸಕ್ಕರೆ ಕಾರ್ಖಾನೆಯವರಿಗೆ ಸರ್ಕಾರ ನಿಗದಿ ಮಾಡಿದ ದರ ನೀಡಲು ವಾರದ ಕಾಲಾವಕಾಶ ನೀಡಲಾಗಿದೆ. ಒಪ್ಪದಿದ್ದರೆ ಸಕ್ಕರೆ ಕಾರ್ಖಾನೆ ಮುಂದೆ ನಿರಂತರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ‘ಕಬ್ಬು ಬೆಳೆಗಾರರ ಸಂಘಟಿತ ಹೋರಾಟದ ಫಲವಾಗಿ ಕಬ್ಬಿಗೆ ಉತ್ತಮ ದರ ನಿಗದಿಯಾಗಿದೆ’ ಎಂದರು.

ಸತ್ಯಾಗ್ರಹದಲ್ಲಿ ಹಿರಿಯ ಮುಖಂಡ ಮಕ್ಬುಲ್ ಪಟೇಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ, ಶಿವಪುತ್ರಪ್ಪ ಸಂಗೋಳಗಿ, ಅಪ್ಪಶಾ ಶ್ರೀಗಿರಿ, ಚಿದಾನಂದ ಮಠ, ಶರಣು ವಾಳಿ, ಶರಣು ನೂಲಾ, ಬಸವರಾಜ ಪಾಟೀಲ ಅಳ್ಳಗಿ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಹಾಂತೇಶ ಜಮಾದಾರ, ರಮೇಶ ಪಾಟೀಲ ಹವಳಗಾ, ಲತೀಫ್‌ ಪಟೇಲ್‌, ಶಿವಾನಂದ ಗುಡೂರ, ಗುರು ಚಾಂದಕೋಟೆ ಮತ್ತಿತರರು ಇದ್ದರು.

ಹೋರಾಟಕ್ಕೆ ಸೋಮವಾರವೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನೆಯಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು.

‘ಎಲ್ಲರೂ ಕೆಪಿಆರ್‌ ಅನುಸರಿಸಲಿ’

ಕಲಬುರಗಿ: ‘ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶ ಪಾಲಿಸಬೇಕು. ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ ಕೆಪಿಆರ್ ಕಾರ್ಖಾನೆ ಪ್ರತಿ ಟನ್‌ಗೆ ₹3165 ದರ ನೀಡಲು ಒಪ್ಪಿದೆ. ಜಿಲ್ಲೆಯ ಇನ್ನುಳಿದ ಸಕ್ಕರೆ ಕಾರ್ಖಾನೆಗಳು ಕನಿಷ್ಠ ಅಷ್ಟಾದರೂ ದರ ನೀಡಲೇಬೇಕು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಅಫಜಲಪುರದ ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ನಡೆದ ಕಬ್ಬು ಬೆಳೆಗಾರರ ಹೋರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.