
ಅಫಜಲಪುರ: ಕಳೆದ ಎರಡು ತಿಂಗಳಿಂದ ಬಳುಂಡಗಿ, ಅಳ್ಳಗಿ(ಬಿ) ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಬೇಸಿಗೆಯಲ್ಲಿಯೂ ನೀರು ಬಿಡಬಹುದು ಎನ್ನುವ ಆಶಾಭಾವದಿಂದ ತಾಲ್ಲೂಕಿನ ರೈತರು ಬೆಳೆ ನಾಟಿ ಮಾಡಲು ಆರಂಭಿಸಿದ್ದಾರೆ.
ಮಳೆಗಾಲದಲ್ಲಿ ಉತ್ತಮ ಮಳೆಯಾದ ಪರಿಣಾಮ ಹಳ್ಳ ಕೊಳ್ಳಗಳು, ಹಳೆಯ ಬಾವಿಗಳು, ಕೆರೆಗಳು ತುಂಬಿ ಅಂತರ್ಜಲ ಮಟ್ಟ ಕೊಂಚ ಹೆಚ್ಚಳವಾಗಿದ್ದು, ರೈತರು ಕಬ್ಬು, ಇತರೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಕಾಲುವೆಗಳಿಗೆ ಏಪ್ರಿಲ್‌ವರೆಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು.
ಭೀಮಾ ಬ್ಯಾರೇಜ್‌ನ ಬಳುಂಡಗಿ ಏತ ನೀರಾವರಿ ಕಾಲುವೆಯಿಂದ 32 ಹಾಗೂ ಅಳ್ಳಗಿ (ಬಿ) ಏತ ನೀರಾವರಿ ಕಾಲುವೆಯಿಂದ 11 ಗ್ರಾಮಗಳ ಜಮೀನುಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕಾಲುವೆಗಳಲ್ಲಿ ಕೆಲವೆಡೆ ಹೂಳು ತುಂಬಿದ್ದರಿಂದ ನೀರು ಮುಂದೆ ಹೋಗುತ್ತಿಲ್ಲ. ಭೀಮಾ ಏತ ನೀರಾವರಿ ಉಪ ವಿಭಾಗ ವಾರದಲ್ಲಿ ಹೂಳು ತೆಗೆಸಲು ಮುಂದಾಗಬೇಕು ಎಂದು ಮುಖಂಡ ಭೀಮನಗೌಡ ನಾರಸೇರ ಒತ್ತಾಯಿಸಿದ್ದಾರೆ.
ಕಾಲುವೆ ಕೊನೆಯ ಭಾಗದವರಗೆ ನೀರು ತಲುಪಿದರೆ ಈ ಭಾಗದ ತೆರೆದ ಬಾವಿ, ಕೊಳವೆಬಾವಿಗಳಿಗೆ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಕುಡಿಯುವ ನೀರು, ಕೃಷಿಗೆ ಅನುಕೂಲವಾಗುತ್ತದೆ. ವರ್ಷದಲ್ಲಿ ಎರಡು ಬೆಳೆಗಳನ್ನು ರೈತರು ಬೆಳೆದುಕೊಳ್ಳಬಹುದು ಎನ್ನುತ್ತಾರೆ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಚಾಂದಕೋಟೆ
ಭೀಮಾ ಏತ ನೀರಾವರಿ ಉಪವಿಭಾಗದ ಕಾಲುವೆಗಳ ನೀರು ನಿರ್ವಹಣೆ ಸಲಹಾ ಸಮಿತಿ ಪುನರ್ ರಚನೆ ಮಾಡಬೇಕು. ಇದರಿಂದ ಕಾಲುಗಳ ರೈತರಿಗೆ ಅನುಕೂಲವಾಗಲಿದೆ. ಪ್ರತಿ ವರ್ಷ ಮಳೆಗಾಲ ಮುಗಿದ ಮೇಲೆ ಸಮಿತಿ ಸಭೆ ಕರೆಯಬೇಕು. ಸಭೆಯಲ್ಲಿ ರೈತರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ನೀಡಬೇಕು ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ ಆಗ್ರಹಿಸಿದ್ದಾರೆ.
ಏತ ನೀರಾವರಿ ಕಾಲುವೆಗಳನ್ನು ನಂಬಿಕೊಂಡು ರೈತರು ಬೇಸಿಗೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಹೀಗಾಗಿ ಅವರಿಗೆ ಎಪ್ರಿಲ್ ತಿಂಗಳು ಪೂರ್ತಿ ಕಾಲುವೆಗಳಿಗೆ ನೀರು ಹರಿಸಬೇಕು. ಅತಿವೃಷ್ಟಿಯಿಂದ ಮುಂಗಾರು ಹಂಗಾಮಿನ ಬೆಳೆಗಳು ಹಾಳಾಗಿದೆ. ರೈತರಿಗೆ ಕಾಲವೆ ನೀರಿನಿಂದ ಅನುಕೂಲವಾಗುತ್ತದೆ. ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿದ್ದನೂರು ಗ್ರಾಮದ ರೈತ ಹೋರಾಟಗಾರ ಮೈಬೂಬ್ ನದಾಫ್ ಒತ್ತಾಯಿಸಿದ್ದಾರೆ.
ಏಪ್ರಿಲ್ ತಿಂಗಳವರೆಗೆ ಕಾಲುವೆಗಳಿಗೆ ನೀರು ಹರಿಸುವುದರಿಂದ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಈ ಕುರಿತು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕ್ರಮ ಕೈಗೊಳ್ಳಬೇಕು.ರಮೇಶ್ ಪೂಜಾರಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು
ಫೆಬ್ರುವರಿ ಅಂತ್ಯದವರೆಗೆ ಕಾಲುವೆಗೆ ನೀರು
ಹಿಂಗಾರಿ ಬೆಳೆಗೆ ಮಾತ್ರ ಕಾಲುವೆಗೆ ನೀರು ಹರಿಸಲು ಅನುಮತಿ ಇದೆ. ಫೆಬ್ರುವರಿ ತಿಂಗಳ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸಲಾಗುತ್ತದೆ. ನಾವು ಕುಡಿಯುವ ನೀರಿಗೂ ಆದ್ಯತೆ ನೀಡಬೇಕು. ರೈತರ ಬೇಡಿಕೆ ಬಂದರೆ ಪರಿಶೀಲಿಸಿ ಎಲ್ಲವನ್ನು ಗಣನೆ ತಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ನೀರಾವರಿ ನಿಗಮದ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. ಬಳುಂಡಗಿ ಏತ ನೀರಾವರಿ ಕಾಲುವೆಯಿಂದ 32 ಗ್ರಾಮಗಳ ಕಾಲುವೆಗಳಿಗೆ ನೀರು ಹರಿಯಬೇಕು. ಆದರೆ ಕಾಲವೆಗಳಲ್ಲಿ ಹೂಳು ತುಂಬಿದ್ದರಿಂದ ನಾಲ್ಕೈದು ಗ್ರಾಮಗಳಿಗೆ ನೀರು ಹರಿಯುತ್ತಿಲ್ಲ. ಹೂಳು ತೆಗೆಯಲು ಟೆಂಡರ್ ಕರೆದಿದ್ದು ವಾರದಲ್ಲಿ ಕೆಲಸ ಆರಂಭವಾಗುತ್ತದೆ. ರೈತರು ಸಹ ತಮ್ಮ ಜಮೀನಿಗೆ ನೀರು ಸಾಕು ಎನಿಸಿದಾಗ ಕಾಲುವೆಯ ಗೇಟು ಹಾಕಬೇಕು. ರೈತರು ಕಾಲುವೆಗಳ ಸುತ್ತಮುತ್ತ ಪಂಪ್‌ಸೆಟ್ ಹಚ್ಚಬಾರದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.