
ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ, ರೈತರ ಹಬ್ಬ ಹಾಗೂ ರಾಜ್ಯ ಮಟ್ಟದ ರೈತ ಸಮಾವೇಶದಲ್ಲಿ ಸಮಾರಂಭದಲ್ಲಿ ಪ್ರಗತಿಪರ ರೈತರಿಗೆ ಐಎಎಸ್ (ಇಂಡಿಯನ್ ಅಗ್ರಿಕಲ್ಚರ್ ಸರ್ವೀಸ್) ಗೌರವ ಪುರಸ್ಕಾರ ನೀಡಲಾಯಿತು
ಕಲಬುರಗಿ: ‘ರಾಜ್ಯ ಸರ್ಕಾರ ಕೃಷಿಯಲ್ಲಿ ಬಜೆಟ್ ಅನ್ನು ಪೂರ್ಣಪ್ರಮಾಣದಲ್ಲಿ ಖರ್ಚು ಮಾಡುತ್ತಿಲ್ಲ. ಕೃಷಿಕರ ರಕ್ಷಣೆ ಮಾಡುವುದರಲ್ಲಿ ವಿಫಲವಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ– ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ, ರೈತರ ಹಬ್ಬ ಹಾಗೂ ರಾಜ್ಯ ಮಟ್ಟದ ರೈತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರ ನೀಡಿದ್ದಕ್ಕಿಂತ ಎರಡು ಪಟ್ಟು ಬೆಳೆ ಪರಿಹಾರ ಕೊಟ್ಟಿದ್ದೇನೆ. ಒಂದು ವಾರದಲ್ಲಿ ಸುಮಾರು 14 ಲಕ್ಷ ರೈತರಿಗೆ ₹2,700 ಕೋಟಿ ಬೆಳೆ ಪರಿಹಾರ ಬಿಡುಗಡೆ ಮಾಡಿದ್ದೆ. ಈಗಿನ ಮುಖ್ಯಮಂತ್ರಿ ಅವರಿಗೆ ಕೃಷಿ ಅಂದರೆ ಬಹಳಷ್ಟು ಅಸಡ್ಡೆ ಇದೆ. ನೀರಾವರಿ, ರೈತರ ವಿಚಾರ, ಬೆಳೆ ಪರಿಹಾರದಲ್ಲಿ ತೀಕ್ಷಣವಾಗಿ ಕೆಲಸಗಳಾಗುತ್ತಿಲ್ಲ. ರಾಜ್ಯ ಸರ್ಕಾರದಿಂದ ‘ಕಿಸಾನ್ ಸಮ್ಮಾನ್’ ಯೋಜನೆಯಡಿ ರೈತರಿಗೆ ನೀಡುವ ₹4 ಸಾವಿರ ನಿಲ್ಲಿಸಲಾಗಿದೆ’ ಎಂದು ಟೀಕಿಸಿದರು.
‘ಬೆಳೆ ಪರಿಹಾರವನ್ನು ಸರ್ವೆ ಮಾಡಿದ ಮೇಲೆ ಆಯಾ ರೈತರ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಹೋಗಬೇಕು. ಹಣ ರಾಜ್ಯ ಸರ್ಕಾರಕ್ಕೆ ಬಂದು, ಅವರಷ್ಟು ಹಿಡಿದುಕೊಂಡು ಮತ್ತೆ 1–2 ತಿಂಗಳು ರೈತರು ಕಾಯುವುದು ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಕಾರ್ಮಿಕರು ಹಿಂಗಾರು ಮತ್ತು ಮುಂಗಾರಿನಲ್ಲಿ 60 ದಿನ ಹೊಲದಲ್ಲಿ ಕೆಲಸ ಮಾಡಿದರೆ ‘ಜಿ ರಾಮ್ ಜಿ’ ಯೋಜನೆಯಡಿ ಕೂಲಿ ಕೊಡುವಂತಹ ಬದಲಾವಣೆ ತರುವಂತೆ ಕೇಂದ್ರಕ್ಕೆ ಸಲಹೆ ಕೊಟ್ಟಿದ್ದೇನೆ’ ಎಂದು ತಿಳಿಸಿದರು.
‘ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಮೂರು ಪಂಚವಾರ್ಷಿಕ ಯೋಜನೆಗಳು ಬಂದವು. ಆದರೆ, ಈ 15 ವರ್ಷಗಳಲ್ಲಿ ಕೃಷಿ ಮತ್ತು ರೈತನ ವಿಚಾರಗಳು ಪ್ರಸ್ತಾಪವೇ ಆಗಿಲ್ಲ. ಕೃಷಿ ಇಲ್ಲದೇ ಈ ದೇಶ ಕಟ್ಟುವ ಪ್ರಯತ್ನ ನಡೆಯಿತು’ ಎಂದು ಆರೋಪಿಸಿದರು.
‘ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ 33 ಕೋಟಿ. ಎಲ್ಲರಿಗೂ ಆಹಾರ ಕೊಡಲು ಆಗಿರಲಿಲ್ಲ. ಈಗ 130 ಕೋಟಿ ಜನರಿದ್ದರೂ ಎಲ್ಲರಿಗೂ ಆಹಾರ ಸಿಗುತ್ತಿದೆ ಎಂದರೆ ಅದಕ್ಕೆ ರೈತ ಕಾರಣ. ಇಷ್ಟು ದೊಡ್ಡಮಟ್ಟದಲ್ಲಿ ಕೃಷಿ ಬೆಳೆದಿದೆ. ಆದರೆ, ರೈತ ಬೆಳೆದಿಲ್ಲ. ಇದಕ್ಕೆ ಇವತ್ತು ಬದಲಾಗುತ್ತಿರುವ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನುಗಳೇ, ಪಾಲಿಸಿಗಳೇ ಕಾರಣ’ ಎಂದು ಅಭಿಪ್ರಾಯಪಟ್ಟರು.
‘ಕೃಷಿ ವಲಯದಲ್ಲಿ ಶೇ 1ರಷ್ಟು ಅಭಿವೃದ್ಧಿಯಾದರೆ, ಉತ್ಪಾದನೆ ವಲಯದಲ್ಲಿ ಶೇ 4ರಷ್ಟು, ಸೇವಾ ವಲಯದಲ್ಲಿ ಶೇ 10ರಷ್ಟು ಹೆಚ್ಚಾಗುತ್ತದೆ. ರೈತನ ಬೆಳವಣಿಗಾಗಿ ರೈತ ಕೇಂದ್ರೀತ ಯೋಜನೆ, ಪಾಲಿಸಿಗಳು ಬೇಕಾಗಿವೆ’ ಎಂದು ಪ್ರತಿಪಾದಿಸಿದರು.
ಕೃಷಿ ಸಚಿವರಿಗೆ ಪತ್ರ: ‘ಕೈಗಾರಿಕೆ ಸೇರಿ ಬೇರೆ ವಲಯಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಬರುತ್ತದೆ. ಅತಿ ಕಡಿಮೆ ಬಂಡವಾಳದಲ್ಲಿ ದೇಶದ ಅತಿ ಹೆಚ್ಚು ಆರ್ಥಿಕ ಪ್ರಗತಿಗೆ ಕಾರಣವಾಗಿರುವ ಕೃಷಿ ವಲಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಬೇಕು. ಗ್ರಾಮೀಣ ಆರ್ಥಿಕ ವ್ಯವಸ್ಥೆ ಬದಲಾಗಲು ಬೆಳೆಗಳಿಗೆ ನಿಗದಿಯಂತೆ ರೈತರಿಗೆ ಸಾಲ ನೀಡಬೇಕು. ಬೆಳೆ ಸಾಲಕ್ಕೆ ಸಿಬಿಲ್ ಸ್ಕೋರ್ ಅನ್ವಯಿಸಬಾರದು ಎಂದು ಕೃಷಿ ಸಚಿವರಿಗೆ ಪತ್ರ ಬರೆದಿದ್ದೇನೆ’ ಎಂದು ಬೊಮ್ಮಾಯಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ‘ಅತಿವೃಷ್ಟಿ ಬೆಳೆ ಹಾನಿ ಪರಿಹಾರ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ, ನಕಲಿ ಬೀಜ, ರಸಗೊಬ್ಬರ, ಕೀಟನಾಶಕ ಮಾರಿದರೆ ಜೈಲು ಶಿಕ್ಷೆ ಸೇರಿದಂತೆ ರೈತರ 22 ಸಮಸ್ಯೆ, ಒತ್ತಾಯಗಳನ್ನು ಪಟ್ಟಿ ಮಾಡಲಾಗಿದೆ. ಇವುಗಳಿಗೆ ಸ್ಪಂದಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಗಳಿಗೆ ರೈತ ದಿನಾಚರಣೆಯ ಮೂಲಕ ಒತ್ತಾಯಿಸಲಾಗುತ್ತಿದೆ’ ಎಂದರು.
ತಮಿಳುನಾಡು ರೈತ ಮುಖಂಡರಾದ ಪಿ.ಆರ್.ಪಾಂಡ್ಯನ್, ರಾಮನ್ ಗೌಂಡರ್, ತೆಲಂಗಾಣ ರೈತ ಮುಖಂಡ ವೆಂಕಟೇಶ್ವರರಾವ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಹಸಿರು ಸೇನೆ ರಾಜ್ಯಾಧ್ಯಕ್ಷ ಕರಬಸಪ್ಪ ಗೌಡ, ಮಾಜಿ ಸಂಸದ ಡಾ.ಉಮೇಶ್ ಜಾಧವ್, ಎಂಎಲ್ಸಿಗಳಾದ ಶಶೀಲ್ ಜಿ.ನಮೋಶಿ, ಬಿ.ಜಿ.ಪಾಟೀಲ, ಶಾಸಕ ಶರಣು ಸಲಗರ ಉಪಸ್ಥಿತರಿದ್ದರು.
ರಮೇಶ್ ಹೂಗಾರ ನಿರೂಪಿಸಿದರು. ಜಗದೀಶ್ ಪಾಟೀಲ ಸ್ವಾಗತಿಸಿದರು. ಇದಕ್ಕೂ ಮೊದಲು ಎಸ್‌ವಿಪಿ ವೃತ್ತದಿಂದ ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು.
ಕಲಬುರಗಿ ಜಿಲ್ಲೆಯಲ್ಲಿ ಟನ್ ಕಬ್ಬಿಗೆ ₹3000 ನಿಗದಿ ಮಾಡಿದ್ದನ್ನು ಕಾರ್ಖಾನೆಯವರು ಒಪ್ಪಿಕೊಂಡರೂ ₹2500 ₹2600 ಕೊಡಲಾಗುತ್ತಿದೆ. ಸರ್ಕಾರಗಳು ಕಾರ್ಖಾನೆಗಳ ಮಾಲೀಕರನ್ನು ಹದ್ದುಬಸ್ತಿನಲ್ಲಿಡಬೇಕುಕುರುಬೂರ್ ಶಾಂತಕುಮಾರ್ ಅಧ್ಯಕ್ಷ ರಾಜ್ಯ ರೈತ ಸಂಘಟನೆಗಳ ಒಕ್ಕೂಟ
‘ರೈತ ಆತ್ಮಹತ್ಯೆ ಮಾಡಿಕೊಳ್ಳದ ದಿನವಿಲ್ಲ’
‘ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೆ ರೈತ ಆತ್ಮಹತ್ಯೆ ಮಾಡಿಕೊಳ್ಳದ ದಿನವಿಲ್ಲ. ರಾಜಕೀಯ ಪಕ್ಷಗಳು ಸೇವೆ ಮಾಡಲು ನಮಗೆ ಅವಕಾಶ ನೀಡಿ ಎಂದು ಜನರ ಮುಂದೆ ಬರುತ್ತವೆ. ಆದರೆ ಅಧಿಕಾರಕ್ಕೆ ಬಂದಾಗ ಶೋಷಣೆಗೆ ಮುಂದಾಗುತ್ತವೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ರಾಷ್ಟ್ರೀಯ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾ ಆರೋಪಿಸಿದರು. ‘2006ರಲ್ಲಿ ಸಲ್ಲಿಸಿದ ಡಾ.ಸ್ವಾಮಿನಾಥನ್ ವರದಿಯನ್ನು ಈ ಕಮಿಷನ್ ರಚಿಸಿದ ಸರ್ಕಾರವೇ 2014ರವರೆಗೆ ಅಧಿಕಾರದಲ್ಲಿದ್ದರೂ ಜಾರಿಗೊಳಿಸಲಿಲ್ಲ. ನಂತರ ಈ ವರದಿ ಜಾರಿಗೊಳಿಸುವುದಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ವಾಮಿನಾಥನ್ ವರದಿ ಜಾರಿಗೊಳಿಸಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ. ದೆಹಲಿಯಲ್ಲಿ 130 ದಿನ ಹೋರಾಟ ಮಾಡಿದಾಗ ಎಂಎಸ್‌ಪಿ ಗ್ಯಾರಂಟಿ ಕಾನೂನು ಜಾರಿಗಾಗಿ ಸಂಸದೀಯ ಸಮಿತಿ ರಚಿಸಲಾಗಿತ್ತು. ಅದು ನಮ್ಮ ಪರವಾಗಿ ವರದಿ ನೀಡಿದರೂ ಜಾರಿಗೊಳಿಸಿಲ್ಲ’ ಎಂದು ದೂರಿದರು.
ರೈತರಿಗೆ ಐಎಎಸ್ ಗೌರವ ಪುರಸ್ಕಾರ
ಸಮಾರಂಭದಲ್ಲಿ ಕಲಬುರಗಿಯ ಗುರುಪಾದಲಿಂಗ ಶಿವಯೋಗಿ ಕರಬಸಪ್ಪ ಉಜ್ಜ ಸೇರಿದಂತೆ ಧಾರವಾಡದ ಮಹೇಶ್ ಬೇಳಗಾಂವ್ಕರ್ ಚಿಕ್ಕಬಳ್ಳಾಪುರದ ಹರೀಶ ಎಲ್.ವಿ. ಚಾಮರಾಜನಗರದ ಉಡಿಗಾಲ ರೇವಣ್ಣ ಮೈಸೂರಿನ ಪಿ.ಸೋಮಶೇಖರ್ ಗದಗನ ಮಾಂತೇಶ್ ರಂಗಪ್ಪ ಬೆಳಗಾವಿಯ ರಮೇಶ್ ಎಂ.ಮೋಗದಂ ಶಿವಮೊಗ್ಗದ ಗೌಡ ಎಸ್.ಸಿ. ಅವರಿಗೆ ಪ್ರಗತಿಪರ ರೈತರಿಗೆ ಐಎಎಸ್(ಇಂಡಿಯನ್ ಅಗ್ರಿಕಲ್ಚರ್ ಸರ್ವೀಸ್) ಗೌರವ ಪುರಸ್ಕಾರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.