ADVERTISEMENT

ಕಲಬುರಗಿ: ಶುಲ್ಕ ಹೆಚ್ಚಳ ವಿರೋಧಿಸಿ ಎಐಡಿಎಸ್ಒ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 15:46 IST
Last Updated 4 ಡಿಸೆಂಬರ್ 2021, 15:46 IST
ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಸರ್ಕಾರಿ ಕೋಟಾದಡಿ ಎಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ದಿಢೀರ್ ₹10 ಸಾವಿರವರೆಗೆ ಏರಿಕೆ ಮಾಡಿರುವುದನ್ನು ವಾಪಸ್ ಪಡೆಯಲು ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ನೇತೃತ್ವದಲ್ಲಿ ಶನಿವಾರ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ತುಳಜಾರಾಮ ಎನ್.ಕೆ. ಮಾತನಾಡಿ, ‘ಈಗಾಗಲೇ ವಿದ್ಯಾರ್ಥಿಗಳು ಕೋವಿಡ್ ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್ ಸಮಯದಲ್ಲಿ ಅತ್ಯಂತ ಸಂಕಷ್ಟವನ್ನು ಎದುರಿಸಿದ್ದಾರೆ. ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿ ರೈತ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಈ ಹಾನಿಯು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿಸಿದೆ’ ಎಂದು ಹೇಳಿದರು.

‘ಹೆಚ್ಚುವರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವುದು, ಹೆಚ್ಚು ಬೋಧಕರನ್ನು ನೇಮಕಾತಿ ಮಾಡುವುದು ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕು. ಗ್ರಂಥಾಲಯ, ಪ್ರಯೋಗಾಲಯಗಳನ್ನು ನಿರ್ಮಿಸಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಜೊತೆಗೆ, ಕಾಲೇಜುಗಳಲ್ಲಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದು ಕೂಡಲೇ ನಿಲ್ಲಿಸಲು ಆದೇಶ ನೀಡಬೇಕು’ ಎಂದು ಒತ್ತಾಯಿಸಿದರು.

ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಹತ್ತು ಗಂಟೆ ಅವಧಿಯಷ್ಟು ಪಾಠ ಮಾಡಬೇಕು ಎಂಬ ನಿರ್ಧಾರವು ವಿದ್ಯಾರ್ಥಿ ಮತ್ತು ಉಪನ್ಯಾಸಕರನ್ನು ಮತ್ತಷ್ಟು ಒತ್ತಡಕ್ಕೆ ತಳ್ಳುತ್ತದೆ. ಶುಲ್ಕ ಏರಿಕೆಯನ್ನು ಮಾಡಿರುವುದು ವಿದ್ಯಾರ್ಥಿ ವಿರೋಧಿ ಮಾತ್ರವಲ್ಲ ಕಾನೂನು ಬಾಹಿರ ನಡೆಯಾಗುತ್ತದೆ ಎಂದು ತಿಳಿಸಿದರು.

ADVERTISEMENT

ಸಂಘಟನೆಯ ಸದಸ್ಯರಾದ ಶಿಲ್ಪಾ ಬಿ.ಕೆ, ಪ್ರೀತಿ ದೋಡ್ಡಮನಿ, ಭೀಮು ಆಂದೋಲಾ, ಪೂಜಾ, ಕಿರಣ್ ಜಿ ಮಾನೆ, ನಿವೇದಿತಾ ಸೇರಿದಂತೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.