ADVERTISEMENT

ಅತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ದೇವಸ್ಥಾನದ ಅರ್ಚಕನಿಂದ ನಡೆದ ಕೃತ್ಯಕ್ಕೆ ಎಐಎಂಎಸ್‌ಎಸ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 4:25 IST
Last Updated 9 ಜನವರಿ 2021, 4:25 IST
ಎಐಎಂಎಸ್‌ಎಸ್‌ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು
ಎಐಎಂಎಸ್‌ಎಸ್‌ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು   

ಕಲಬುರ್ಗಿ: ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಮಹಿಳೆಯ ಮೇಲೆ ಅರ್ಚಕ ಸೇರಿದಂತೆ ಹಲವರು ಸಾಮೂಹಿಕ ಅತ್ಯಾಚಾರ ಮಾಡಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

‘ಹಾಥರಸ್ ಘಟನೆಯ ನಂತರ ಮತ್ತೊಮ್ಮೆ ಜನತೆಯನ್ನು ಬೆಚ್ಚಿಬೀಳಿಸುವ ಪ್ರಕರಣ ಉತ್ತರಪ್ರದೇಶದಲ್ಲಿ ಜರುಗಿದೆ. 50 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ. ಧಾರ್ಮಿಕತೆಯ ಹೆಸರಿನಲ್ಲಿ ಮತ್ತು ಅದರ ಬಗ್ಗೆ ಹೆಮ್ಮೆ ಪಡುವ ಆಡಳಿತದಲ್ಲಿ ದೇವಾಲಯಗಳೇ ಅಪರಾಧಗಳ ತಾಣವಾಗುತ್ತಿರುವುದು, ಅರ್ಚಕರೇ ಅಪರಾಧಿಗಳಾಗುತ್ತಿರುವುದು ನಾಚಿಕೆಗೇಡಿನ ವಿಷಯ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತವನ್ನು ರಕ್ಷಿಸಲು ಹೊರಟು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದ ಹಾಗೂ ಸಾರ್ವಜನಿಕರ ಮುಖ್ಯವಾಗಿ ಮಹಿಳೆಯರ ರಕ್ಷಣೆಯ ಕುರಿತು ಪ್ರತಿಭಟನೆಯ ಧ್ವನಿಯನ್ನು ಕೂಗಲು ಅವಕಾಶ ನೀಡದೆ ಹೋರಾಟಗಳನ್ನು ಅಡಗಿಸುತ್ತಿರುವ ಸರ್ಕಾರಗಳ ನಡೆ ಅತ್ಯಂತ ಖಂಡನೀಯವಾಗಿದೆ’ ಎಂದು ಟೀಕಿಸಿದ್ದಾರೆ.

ಮೃತ ದೇಹದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹಿಳೆಯ ಖಾಸಗಿ ಭಾಗಗಳಿಗೆ ಗಾಯವಾಗಿದೆ ಹಾಗೂ ಒಂದು ಕಾಲು ಮುರಿದಿದೆ. ಮರ್ಮಾಂಗಕ್ಕೆ ಕಬ್ಬಿಣದ ಸರಳುಗಳನ್ನು ತುರುಕಲಾಗಿದೆ ಮತ್ತು ನೋವಿನಿಂದ ಮಹಿಳೆ ಮೃತಪಟ್ಟಿದ್ದಾರೆ. ಮಹಿಳೆಯ ಕುತ್ತಿಗೆಯೂ ಮುರಿದಿದೆ ಎಂದು ಉಲ್ಲೇಖಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಅತ್ಯಾಚಾರದ ಪ್ರಕರಣ ಎಂಬುದಾಗಿ ವೈದ್ಯಾಧಿಕಾರಿಗಳು ಧೃಡಪಡಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡು ಕೊನೆಯುಸಿರೆಳೆಯುವ ಸ್ಥಿತಿಯಲ್ಲಿದ್ದ ಆಕೆಯ ಬಗ್ಗೆ ಕುಟುಂಬಸ್ಥರು ದೂರು ದಾಖಲಿಸಿದ ನಂತರವೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿರಲಿಲ್ಲ. ಒಟ್ಟಾರೆ ಈ ಹಿಂದೆ ನಡೆದ ಘಟನೆಗಳಂತೆಯೇ ಆಡಳಿತ ಯಂತ್ರದ ನಿಷ್ಕ್ರಿಯತೆ, ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಅತ್ಯಾಚಾರ ಸಂತ್ರಸ್ತೆಯ ನೋವಿಗೆ ಕುಟುಂಬಸ್ಥರ ಆಗ್ರಹಕ್ಕೆ ಮನ್ನಣೆ ನೀಡದೆ, ನ್ಯಾಯ ವಿಳಂಬವಾಗುವ ರೀತಿಯಲ್ಲಿ ಅಪರಾಧಿಗಳಿಗೆ ಪರಾರಿಯಾಗಲು ಅವಕಾಶ ಮಾಡಿಕೊಡಲಾಗಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷೆ ಗುಂಡಮ್ಮ ಮಡಿವಾಳ, ಕಾರ್ಯದರ್ಶಿ ಗೌರಮ್ಮ ಸಿ.ಕೆ. ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.