ADVERTISEMENT

ಅಲಾಯನ್ಸ್ ಏರ್ ನಿಂದ ವಿಮಾನಯಾನ ಹಾಲಾಟ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 28 ಮೇ 2020, 11:18 IST
Last Updated 28 ಮೇ 2020, 11:18 IST

ಕಲಬುರ್ಗಿ: ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ತನ್ನ ವಿಮಾನ ಸಂಚಾರ ಸೇವೆ ನಿಲ್ಲಿಸಿದ ಅಲಾಯನ್ಸ್ ಏರ್ ವಿಮಾನ ಸಂಸ್ಥೆಯು ಲಾಕ್ ಡೌನ್ 4.0 ಸಡಿಲಿಕೆಯ ಕಾರಣ ಗುರುವಾರ ಬೆಂಗಳೂರು- ಕಲಬುರ್ಗಿ ಮಧ್ಯೆ ಸೇವೆ ಮತ್ತೆ ಆರಂಭಿಸಿದೆ.

ಗುರುವಾರ ಬೆಂಗಳೂರಿನಿಂದ 19 ಯಾತ್ರಿಕರನ್ನು ಹೊತ್ತುಕೊಂಡು ಹೊರಟ ವಿಮಾನ ಬೆಳಿಗ್ಗೆ 11.45 ಗಂಟೆಗೆ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಿತು. ಮರಳಿ ಮಧ್ಯಾಹ್ನ‌12.25 ಗಂಟೆಗೆ ಇಲ್ಲಿಂದ 19 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು.

ಈಗಾಗಲೇ (ಮೇ 25) ಸ್ಟಾರ್ ಏರ್ ಸಂಸ್ಥೆಯು ಸಹ ಬೆಂಗಳೂರು-ಕಲಬುರ್ಗಿ ನಡುವೆ ತನ್ನ ಸೇವೆ ಆರಂಭಿಸಿದೆ.

ADVERTISEMENT

ಭಾರತೀಯ ವಿಮಾನಯಾನ ಪ್ರಾಧಿಕಾರದ ಮಾರ್ಗಸೂಚಿಯಂತೆ ಕಲಬುರ್ಗಿ ವಿಮಾನ ನಿಲ್ದಾಣದಿಂದ ಹೋಗುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕನಿಂದ ಅರೋಗ್ಯದ ಬಗ್ಗೆ ಸ್ವಯಂ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ. ಆರೋಗ್ಯ ಸೇತು ಆ್ಯಪ್ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಪ್ರಯಾಣಿಕರ ಲಗೇಜ್‍ಗಳನ್ನು ಡಿಸ್ ಇನ್ಫೆಕ್ಟ್ ಮಾಡಿಯೆ ವಿಮಾನಕ್ಕೆ ಹತ್ತಿಸಲಾಗುತ್ತದೆ. ಇನ್ನು ಬೆಂಗಳೂರಿನಿಂದ ಬರುವ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಮಾಡಲಾಗುವುದಲ್ಲದೆ ಎಲ್ಲರ ವಿವರವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ಕಲಬುರ್ಗಿ ವಿಮಾನ ನಿಲ್ದಾಣದ ಎ.ಎ.ಐ. ನಿರ್ದೇಶಕ ಜ್ಞಾನೇಶ್ವರ ರಾವ್ ತಿಳಿಸಿದರು.

ಜೂನ್-1 ರಿಂದ ಅಲಯನ್ಸ್ ಏರ್ ವಿಮಾನ ಸಂಚಾರ ಸಮಯದಲ್ಲಿ ಬದಲಾವಣೆ: ಅಲಯನ್ಸ್ ಏರ್ ಸಂಸ್ಥೆಯ‌ ವಿಮಾನವು ಜೂನ್-1 ರಿಂದ ಸೋಮವಾರ ಮತ್ತು ಮಂಗಳವಾರ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 8.45 ಗಂಟೆಗೆ ಆಗಮಿಸಿ 9.25ಕ್ಕೆ ಬೆಂಗಳೂರಿನತ್ತ ಮರು ಪ್ರಯಾಣ ಬೆಳಸಲಿದೆ. ಬುಧವಾರದಿಂದ ಭಾನುವಾರ ವರೆಗೆ ಬೆಳಿಗ್ಗೆ 11.45 ಗಂಟೆಗೆ ಆಗಮಿಸಿ 12.25ಕ್ಕೆ ಬೆಂಗಳೂರಿಗೆ ಟೇಕ್ ಆಫ್ ಆಗಲಿದೆ ಎಂದು ಜ್ಞಾನೇಶ್ವರ ರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.