ಆಳಂದ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ 7ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಅಪಾರ ಬೆಳೆಹಾನಿಯಾಗಿದೆ.
ಮಳೆಗೆ 2 ಜಾನುವಾರು ಮೃತಪಟ್ಟಿದ್ದರೆ, 3 ಆಕಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿವೆ. 2000ಕ್ಕೂ ಹೆಚ್ಚು ಕೋಳಿಗಳು ಅಮರ್ಜಾ ಹಳ್ಳದಲ್ಲಿ ಕೊಚ್ಚಿ ಹೋಗಿವೆ.
ಆಳಂದ ತಾಲ್ಲೂಕಿನ ನಿರಗುಡಿ-ಪಡಸಾವಳಿ, ಪಡಸಾವಳಿ-ಚಿಂಚೋಳ್ಳಿ(ಬಿ), ಖಾನಾಪುರ-ಜೀರಹಳ್ಳಿ, ನಿರಗುಡಿ-ಪಡಸಾವಳಿ, ಜೀರಹಳ್ಳಿ-ಶಕಾಪುರ, ಹೆಬಳ್ಳಿ-ಪಡಸಾವಳಿ, ಮಟಕಿ-ತಡೋಳಾ ಗ್ರಾಮಗಳ ಸಂಚಾರ ಸ್ಥಗಿತಗೊಂಡಿದೆ.
ಖಾನಾಪುರದಲ್ಲಿ ಮಳೆಯಿಂದ ಎರಡು ಜಾನುವಾರು ಮೃತಪಟ್ಟಿವೆ. 3 ಆಕಳು ಹಳ್ಳದಲ್ಲಿ ಕೊಚ್ಚಿಹೋಗಿವೆ. ಶಕಾಪುರದ ಜಮಬಾಯಿ ಕಾಳೆ ಅವರ ಮಾಂಸದ ಕೋಳಿ ಸಾಕಾಣಿಕೆ ಶೆಡ್‌ನಲ್ಲಿರುವ 2000 ಕೋಳಿಗಳು ಅಮರ್ಜಾ ಹಳ್ಳದಲ್ಲಿ ಕೊಚ್ಚಿಹೋಗಿವೆ. ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಯಲ್ಲಪ್ಪ ಇಂಗಳೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನೆರೆಯ ಮಹಾರಾಷ್ಟ್ರದ ಗಡಿಗ್ರಾಮಗಳಲ್ಲಿ ಅಧಿಕ ಮಳೆಗೆ ಚಿಂಚೋಳಿ(ಬಿ), ಚಿಂಚೋಳಿ(ಕೆ), ಪಡಸಾವಳಿ, ನಿರಗುಡಿ, ಮಟಕಿ, ಹೆಬಳ್ಳಿ, ಜೀರಹಳ್ಳಿ, ಖಾನಾಪುರ, ಶಕಾಫುರ, ಜಿಡಗಾ, ಜಮಗಾ, ಸರಸಂಬಾ, ಸಾವಳೇಶ್ವರ, ಭೀಮಪುರ, ಕಾಮನಹಳ್ಳಿ, ತೀರ್ಥ, ತಡೋಳಾ ಗ್ರಾಮಗಳ ವ್ಯಾಪ್ತಿಯ ಹೊಲಗದ್ದೆಗಳ ಬದು ಕೊಚ್ಚಿ ಹೋಗಿದ್ದು, ಕಬ್ಬು, ತೊಗರಿ ಮತ್ತಿತರ ಬೆಳೆಗಳು ಸಂಪೂರ್ಣ ಜಲಾವೃತ್ತವಾಗಿವೆ.
ಸಣ್ಣಸೇತುವೆ, ಬಾವಿ, ನಾಲಾ ಹಾಗೂ ಜೀರಹಳ್ಳಿ, ಖಾನಾಪುರ, ಪಡಸಾವಳಿ, ಚಿಂಚೋಳಿ ಮಾರ್ಗದ ಸಂಪರ್ಕ ಸೇತುವೆಗಳ ಮೇಲಿಂದ ನೀರು ಹರಿಯುತ್ತಿದೆ. ಕೆಲ ಸೇತುವೆಗಳ ಸಮೀಪದ ರಸ್ತೆಗಳಿಗೆ ಹಾನಿಯಾಗಿದೆ. ಕೆಲ ಗ್ರಾಮಗಳವಿದ್ಯಾರ್ಥಿಗಳು, ಶಿಕ್ಷಕರು ಶಾಲೆಗಳಿಗೆ ತೆರಳಲು ತೊಂದರೆ ಆಗಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಲಾಯಿತು.
ತಹಶೀಲ್ದಾರ್ ಭೇಟಿ, ಪರಿಶೀಲನೆ: ತಹಶೀಲ್ದಾರ್ ಅಣ್ಣಾರಾವ ಪಾಟೀಲ, ತಾ.ಪಂ ಇಒ ಮಾನಪ್ಪ ಕಟ್ಟಿಮನಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಕೃಷಿ ಅಧಿಕಾರಿಗಳ ತಂಡವು ಬೆಳಿಗ್ಗೆ ಪ್ರವಾಹದಿಂದ ಹಾನಿಗೊಂಡ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹಲವು ಗ್ರಾಮಗಳಿಗೆ ಭೇಟಿ ನೀಡಿ, ಹಾಳಾದ ಸಂಪರ್ಕ ರಸ್ತೆ, ಸೇತುವೆ ಹಾಗೂ ನೀರಲ್ಲಿ ನಿಂತ ಬೆಳೆಗಳ ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿ, ‘ರೈತರು, ಬೆಳೆ ಹಾನಿ, ಜಾನುವಾರು ಹಾನಿ ಮಾಹಿತಿ ನೀಡಬೇಕು. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸಹ ಸಮೀಕ್ಷೆ ಕೈಗೊಳ್ಳಲಿದ್ದಾರೆ. ರಾತ್ರಿ ವೇಳೆ ಮಳೆ ಮತ್ತು ಪ್ರವಾಹ ಉಂಟಾಗುತ್ತಿರುವುದರಿಂದ ಎಲ್ಲರೂ ಮುಂಜಾಗ್ರತೆ ವಹಿಸಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.