ADVERTISEMENT

ಆಳಂದ: ಧಾರಾಕಾರ ಮಳೆ; ಕೆರೆ ಒಡೆದು ಮನೆಗಳಿಗೆ ನುಗ್ಗಿದ ನೀರು

ಮಾಡಿಯಾಳ, ಭೂಸನೂರು ಗ್ರಾಮಸ್ಥರ ಪರದಾಟ, ದವಸಧಾನ್ಯ, ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 20:14 IST
Last Updated 20 ಸೆಪ್ಟೆಂಬರ್ 2025, 20:14 IST
ಮಾಡಿಯಾಳ ಗ್ರಾಮದಲ್ಲಿ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದ್ದರಿಂದ ಕುಟುಂಬಸ್ಥರು ಪರದಾಡಿದರು
ಮಾಡಿಯಾಳ ಗ್ರಾಮದಲ್ಲಿ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದ್ದರಿಂದ ಕುಟುಂಬಸ್ಥರು ಪರದಾಡಿದರು   

ಆಳಂದ: ಧಾರಾಕಾರ ಮಳೆಗೆ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿನ ಒಪ್ಪತೇಶ್ವರ ಕೆರೆ ಒಡೆದು ಅಪಾರ ಪ್ರಮಾಣದ ನೀರು ಗ್ರಾಮಗಳಲ್ಲಿನ ಮನೆಗಳಿಗೆ ನುಗ್ಗಿ ಶುಕ್ರವಾರ ರಾತ್ರಿಯಿಡಿ ಗ್ರಾಮಸ್ಥರು ಪರದಾಡಿದರು.

ಕಳೆದ ವಾರದಿಂದಲೂ ಸುರಿಯುತ್ತಿರುವ ಸತತ ಮಳೆಗೆ ಗ್ರಾಮದ ಸಮೀಪದಲ್ಲಿರುವ ದುರಸ್ತಿ ಸ್ಥಿತಿಯಲ್ಲಿದ್ದ ಒಪ್ಪತೇಶ್ವರ ಕೆರೆಯು ಸಂಪೂರ್ಣ ಭರ್ತಿಯಾಗಿ, ಏಕಾಏಕಿ ರಾತ್ರಿ ಬಿರುಕು ಮೂಡಿ ಒಡೆದಿದೆ. ಹೀಗಾಗಿ ನೀರು ಗ್ರಾಮದಲ್ಲಿ ನುಗ್ಗಿ ಮುಖ್ಯರಸ್ತೆಗಳು, ದೇವಸ್ಥಾನದ ಆವರಣ ಮತ್ತಿತರ ಕಟ್ಟೆಗಳು ಜಲಾವೃತ್ತಗೊಂಡಿದ್ದಲ್ಲದೆ, ಗ್ರಾಮದ 50ಕ್ಕೂ ಹೆಚ್ಚು ಮನೆಗಳ ಒಳಗೆ ನೀರು ನುಗ್ಗಿದೆ.

ಮನೆಗಳಿಗೆ ಏಕಾಏಕಿ ನೀರು ನುಗ್ಗಿದರಿಂದ ನಿದ್ರೆಯಲ್ಲಿದ್ದ ಜನರು ಗಾಬರಿಗೊಂಡರು. ಇದರಿಂದಾಗಿ ನಿವಾಸಿಗಳು ದೇವಸ್ಥಾನ, ಶಾಲೆಗಳಲ್ಲಿ ಆಶ್ರಯ ಪಡೆದರು. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ದವಸಧಾನ್ಯ, ಬಟ್ಟೆ, ತೊಗರಿ, ಜೋಳ, ಗೋಧಿ ಬೆಳೆಯ ಚೀಲಗಳು ತೇವಗೊಂಡು ಹಾಳಾಗಿವೆ. ಮನೆಗೆ ನುಗ್ಗಿದ ನೀರನ್ನು ಹೊರ ತೆಗೆಯಲು ಕುಟುಂಬಸ್ಥರು ರಾತ್ರಿಯಿಡಿ ಹೈರಾಣಾದರು. ಮಕ್ಕಳು, ವೃದ್ಧರಿಗೆ ತೊಂದರೆಯಾಯಿತು.

ADVERTISEMENT

ತಹಶೀಲ್ದಾರ್‌ ಭೇಟಿ: ತಹಶೀಲ್ದಾರ್‌ ಅಣ್ಣಾರಾವ ಪಾಟೀಲ, ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಮಾಡಿಯಾಳ ಗ್ರಾಮಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಟುಂಬಸ್ಥರು ಅಧಿಕಾರಿಗಳ ಮುಂದೆ ತಮ್ಮ ಕಷ್ಟ ಹೇಳಿಕೊಂಡರು.

‘1972ರಲ್ಲಿ ನಿರ್ಮಾಣವಾದ ಸಣ್ಣ ನೀರಾವರಿ ಇಲಾಖೆಯ ಕೆರೆಯ ದುರಸ್ತಿ ಕಾರ್ಯ ಕೈಗೊಳ್ಳದ ಕಾರಣ ಅಧಿಕಾರಿಗಳ ನಿರ್ಲಕ್ಷದಿಂದ ಕೆರೆ ಒಡೆದಿದೆ. ಇದರಿಂದ ಗ್ರಾಮಸ್ಥರು ಸಂಕಷ್ಟವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ತುರ್ತು ಪರಿಹಾರ ನೀಡಬೇಕು, ದವಸಧಾನ್ಯ, ದಿನಸಿ ಸಾಮಗ್ರಿ ತಕ್ಷಣ ಪೂರೈಕೆ ಕೈಗೊಳ್ಳಲು’ ಎಂದು ಹೋರಾಟಗಾರ ಭೀಮಾಶಂಕರ ಮಾಡಿಯಾಳ ಒತ್ತಾಯಿಸಿದ್ದಾರೆ.

ಗ್ರಾಮದ ಕೆರೆ ಒಡೆದು ಗ್ರಾಮದ ಸುತ್ತಲಿನ ರೈತರ ಬಾಳೆ, ತೊಗರಿ , ಕಬ್ಬು ಹಾಗೂ ತರಕಾರಿ ಬೆಳೆ ಮತ್ತು ತೋಟಗಾರಿಕೆ ಬೆಳೆಗಳೂ ಸಹ ಹಾನಿಯಾಗಿದ್ದು, ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ರೈತರೂ ಒತ್ತಾಯಿಸಿದರು.

ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಕೆರೆ ಒಡೆದು ಗ್ರಾಮದ ಮುಖ್ಯಬೀದಿಗಳು ಜಲಾವೃತ್ತಗೊಂಡ ದೃಶ್ಯ
ಸತತ ಮಳೆಯಿಂದ ಭೂಸನೂರು ಗ್ರಾಮದಲ್ಲಿನ ಮನೆಗಳಿಗೆ ಹಾಗೂ ಮಾಡಿಯಾಳದ ಗ್ರಾಮದ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದೆ ಸಂತ್ರಸ್ಥ ಕುಟುಂಬಗಳಿಗೆ ಅಗತ್ಯ ವಸ್ತುಗಳ ಸರಬುರಾಜು ಕೈಗೊಳ್ಳಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ.
– ಅಣ್ಣಾರಾವ ಪಾಟೀಲ, ತಹಶೀಲ್ದಾರ್‌ 
ರಾತ್ರಿ ಏಕಾಏಕಿ ಕೆರೆ ಒಡೆದು ಮನೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ಕುಟುಂಸ್ಥರು ಎಲ್ಲರೂ ಆತಂಕದಲ್ಲಿ ಕಳೆದೇವು ಮನೆಯಲ್ಲಿ ಇದ್ದ ಧಾನ್ಯದ ಜತೆಗೆ ಇತರ ಸಾಮಗ್ರಿಗಳು ಸಂಪೂರ್ಣ ಹಾಳಾಗಿವೆ.
– ಸೈಫಾನಸಾಬ ಜಮಾದಾರ, ಗ್ರಾಮಸ್ಥ ಮಾಡಿಯಾಳ

ಭೂಸನೂರು ಗ್ರಾಮಸ್ಥರ ಸಂಕಟ

ಅಮರ್ಜಾ ಅಣೆಕಟ್ಟೆಯ ಕೆಳಭಾಗದ ಭೂಸನೂರು ಗ್ರಾಮದಲ್ಲಿನ 130ಕ್ಕೂ ಹೆಚ್ಚು ಮನೆಗಳಿಗೆ ಶುಕ್ರವಾರ ನೀರು ನುಗ್ಗಿದೆ. ಅಪಾರ ಪ್ರಮಾಣದಲ್ಲಿ ಹಳ್ಳಕೊಳ್ಳ ಭರ್ತಿಯಾಗಿ ನೀರು ಹರಿದು ಬರುತ್ತಿರುವದು ಅಮರ್ಜಾ ಅಣೆಕಟ್ಟೆಯ ಕಾಲುವೆಯಿಂದ ನೀರು ಹೊರ ಬೀಡುತ್ತಿರುವದು ಮತ್ತು ಸುತ್ತಲಿನ ಕಾನಲ್‌ಗಳು ತುಂಬಿ ಹರಿಯುತ್ತಿವೆ.

ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಭೂಸನೂರು ಗ್ರಾಮದ ಹಳೆ ಬಡಾವಣೆಗಳಲ್ಲಿನ ಹನುಮಾನ ಮಂದಿರ ಅಗಸಿ ವೀರಭದ್ರೇಶ್ವರ ಮಂದಿರ ಕೆಜಿಬಿ ಬ್ಯಾಂಕ್‌ ಸುತ್ತಲಿನ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ 2 ಗಂಟೆ ಸಮಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನೂರಾರೂ ಕುಟುಂಬಗಳು ರಾತ್ರಿಯಿಡಿ ಸಂಕಷ್ಟಕ್ಕಿಡಾದರು.

ಕುಟುಂಬಸ್ಥರು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸಾಮಾಗ್ರಿ ಬಟ್ಟೆವಸ್ತ್ರ ಹಾಗೂ ಮೇವು ಮತ್ತಿತರ ಸಾಮಾಗ್ರಿ ಹೊರ ತೆಗೆಯಲು ಪರದಾಡಿದರು. ಮಕ್ಕಳು ಮಹಿಳೆಯರು ರಾತ್ರಿಯಲ್ಲಿ ಮನೆ ಬಿಟ್ಟು ಸ್ಥಳಾಂತರಗೊಂಡು ದಿನ ಕಳೆದರು. ಹನುಮಾನ ಮಂದಿರದಲ್ಲಿ ಸುತ್ತಲಿನ ಕುಟುಂಬಸ್ಥರು ವಾಸ್ತವ್ಯ ಮಾಡಿದರು.

ಅಧಿಕಾರಿಗಳ ಭೇಟಿ: ತಹಶೀಲ್ದಾರ್‌ ಅಣ್ಣಾರಾವ ಪಾಟೀಲ ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಗ್ರಾಮಕ್ಕೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.