ಆಳಂದ: ತಾಲ್ಲೂಕಿನ 8 ಗ್ರಾಮದ ಕೆರೆಗಳಿಗೆ ಭೀಮಾ ನದಿಯಿಂದ ಹೆಚ್ಚುವರಿ ನೀರು ಭರ್ತಿ ಮಾಡುವ ಕಾಮಗಾರಿಯು ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿ ಶನಿವಾರ ಕರ್ನಾಟಕ ನೀರಾವರಿ ನಿಗಮದಿಂದ ಮಂಜೂರಾದ ₹34 ಕೋಟಿ ವೆಚ್ಚದಲ್ಲಿ ಕೈಗೊಂಡ ಅಫಜಲಪುರ ತಾಲ್ಲೂಕಿನ ಬೋರಿ ನದಿಯಿಂದ ಆಳಂದ ತಾಲ್ಲೂಕಿನ 8 ಗ್ರಾಮದ ಕೆರೆಗೆ ನೀರು ತುಂಬುವ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ಬಾರಿ ಶಾಸಕನಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೇಡಿಕೆ ಸಲ್ಲಿಸಿ ಒಟ್ಟು ₹350 ಕೋಟಿ ವೆಚ್ಚದಲ್ಲಿ ಭೀಮಾ ನದಿಯ ಹೆಚ್ಚುವರಿ ನೀರು ಆಳಂದದ ಅಮರ್ಜಾ ಅಣೆಕಟ್ಟೆ ಭರ್ತಿಗೆ ಅನುದಾನ ತರಲಾಯಿತು. ಬಹು ನಿರೀಕ್ಷಿತ ಈ ಯೋಜನೆಯಿಂದ ಆಳಂದ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ನಿರ್ಲಕ್ಷದಿಂದ ಈ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಈಗ ಸ್ಥಗಿತಗೊಂಡ ಕಾಮಗಾರಿಯು ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಕರೆದು ಉದ್ಘಾಟನೆ ಮಾಡಲಾಗುವುದು ಎಂದರು.
ಅಫಜಲಪುರ ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಭೀಮಾ ನದಿ ನೀರು ಭರ್ತಿ ಕಾಮಗಾರಿಗೆ ಆರಂಭದಲ್ಲಿ ನಾವೂ ವಿರೋಧಿಸಿದ್ದೇವೆ, ಆದರೆ ಬಿ.ಆರ್.ಪಾಟೀಲ ಅವರ ದೂರದೃಷ್ಟಿ ಹಾಗೂ ರೈತರ ಹಿತಕ್ಕಾಗಿ ಕೈಗೊಂಡ ಕೆರೆ ತುಂಬಿಸುವ ಕಾರ್ಯದಿಂದ ನಮ್ಮ ತಾಲ್ಲೂಕಿಗೂ ಅನುಕೂಲವಾಗಿದೆ ಎಂದರು.
ಚಲಗೇರಾದ ವೀರಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಗ್ರಾ.ಪಂ ಅಧ್ಯಕ್ಷ ಗಣೇಶ ವಡ್ಡಳ್ಳಿ, ಜಿ.ಪಂ ಮಾಜಿ ಸದಸ್ಯ ಗುರುಶಾಂತಪ್ಪ ಪಾಟೀಲ, ಶಿವಪುತ್ರಪ್ಪ ಪಾಟೀಲ, ಶಂಕರರಾವ ದೇಶಮುಖ, ಮೋಹನಗೌಡ ಪಾಟೀಲ, ನಿಗಮದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿನಾಯಕ ಸೂಗೂರು, ಅಧೀಕ್ಷಕ ಎಂಜಿನಿಯರ್ ಸೂರ್ಯಕಾಂತ ಮಾನೆ, ಎಇಇ ಸಂತೋಷ ಮಾಲೆ, ಮಲ್ಲಯ್ಯ ಸ್ವಾಮಿ, ಬಸವರಾಜ ಉಪ್ಪಿನ, ಮಲ್ಲಪ್ಪ ಹತ್ತರಕಿ, ವಿಶ್ವನಾಥ ಸರಸಂಬಿ, ರಾಹುಲ ಪಾಟೀಲ, ಬಿ.ಜಿ. ಪಾಟೀಲ, ಸಿದ್ದರಾಮ ಅರಳಿಮರ, ಮಲ್ಲಿನಾಥ ಶ್ರೀಗಣಿ, ವಿವೇಕಾನಂದ ಪಾಟೀಲ ಉಪಸ್ಥಿತರಿದ್ದರು.
ನಂತರ ನಿಂಬಾಳ ಗ್ರಾಮದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಮಂಜೂರಾದ ನೂತನ ಸರ್ಕಾರಿ ಪಿಯು ಕಾಲೇಜು ಶಾಸಕ ಬಿ.ಆರ್.ಪಾಟೀಲ ಉದ್ಘಾಟಿಸಿದರು. ನಿಂಬಾಳದಲ್ಲಿ ಪಿಯು ಕಾಲೇಜಿಗೆ ಅಗತ್ಯ ಸೌಲಭ್ಯಗಳು ಒದಗಿಸುವ ಭರವಸೆ ನೀಡಿದರು. ಗ್ರಾಮಸ್ಥರು ಬಿ.ಆರ್.ಪಾಟೀಲ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು.
ಶಾಸಕ ಬಿ.ಆರ್. ಪಾಟೀಲ ಅವರ ಹೋರಾಟದ ಫಲದಿಂದ ಆಳಂದ ಕ್ಷೇತ್ರದಲ್ಲಿ ನೀರಾವರಿ ಹೆಚ್ಚಲಿದೆ. ನೀರಿನ ಸಮಸ್ಯೆ ಬಗೆಹರಿದರೆ ಈ ಭಾಗದ ರೈತರೂ ಸ್ವಾವಲಂಬನೆಯಾಗಲು ಸಾಧ್ಯಎಂ.ವೈ. ಪಾಟೀಲ ಶಾಸಕ
ಆಳಂದ ತಾಲ್ಲೂಕಿಗೆ ₹60 ಕೋಟಿ ವೆಚ್ಚದ ಯೋಜನೆಯಡಿ 12 ಹೊಸ ಕೆರೆಗಳಿಗೂ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಇದರ ಸಮೀಕ್ಷೆಕಾರ್ಯ ಅಧಿಕಾರಿಗಳು ನಡೆಸಿದ್ದಾರೆ.ಬಿ.ಆರ್. ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.