ಆಳಂದ: ತಾಲ್ಲೂಕಿನ ಹೋಬಳಿ ಕೇಂದ್ರ, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಮಾದನ ಹಿಪ್ಪರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ಯಾ ಶಾಲೆಯ ಕೊಠಡಿಗಳು ಶಿಥಿಲಗೊಂಡಿದ್ದು ಪಾಲಕರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯಿತಿ ಕಚೇರಿಯ ಪಕ್ಕದಲ್ಲಿ ಇರುವ ಶಾಲೆಯ ದುಸ್ಥಿತಿ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ. 1ರಿಂದ 7ನೇ ತರಗತಿವರೆಗೂ ಇಲ್ಲಿ ಒಟ್ಟು 120 ವಿದ್ಯಾರ್ಥಿಗಳು ಇದ್ದಾರೆ. ಹೆಣ್ಣುಮಕ್ಕಳ ಪ್ರವೇಶದ ಕೊರತೆ ಹೆಚ್ಚಿದಂತೆ ಗಂಡುಮಕ್ಕಳ ಪ್ರವೇಶವನ್ನೂ ಆರಂಭಿಸಲಾಯಿತು. ಐದು ಜನ ಶಿಕ್ಷಕರಿದ್ದು ಒಬ್ಬ ಅಥಿತಿ ಶಿಕ್ಷಕರ ಸೇವೆ ಪಡೆಯಲಾಗಿದೆ.
ಹಳೆಯ ಶಾಲಾ ಕಟ್ಟಡ ಸಂಪೂರ್ಣವಾಗಿ ಹಾಳಾಗಿದ್ದು ಮಳೆಯಾದರೆ ಸೋರುವ ಹಂತ ತಲುಪಿದೆ. ಅಲ್ಲಲ್ಲಿ ಬಿರುಕು ಬಿಟ್ಟಿದೆ. ಶಾಲೆಗೆ ತಡೆಗೋಡೆ ಇಲ್ಲ. ಮಕ್ಕಳು ಊಟಕ್ಕೆ ಕುಳಿತರೆ ಹಂದಿಗಳ ಕಾಟ ತಪ್ಪಿದ್ದಲ್ಲ. ಮೈದಾನ ಇಲ್ಲದ್ದರಿಂದ ಮಕ್ಕಳು ಶಾಲೆ ಮುಂದೆ ಇಲ್ಲವೇ ಗ್ರಾಮ ಪಂಚಾಯಿತಿ ಕಚೇರಿ ಆವರಣಕ್ಕೆ ಆಟವಾಡಲು ಹೋಗಬೇಕು.
ಶಾಲೆ ಮುಂಭಾಗದಲ್ಲಿ ದನ ಕಟ್ಟುವುದು ಮಾಡುತ್ತಿದ್ದಾರೆ. ಸುತ್ತಮುತ್ತ ಕಸದ ತಿಪ್ಪೆಗಳಿವೆ. ಶಾಲೆಯ ಹೆಣ್ಣುಮಕ್ಕಳಿಗೆ, ಶಿಕ್ಷಕರಿಗೆ ಶೌಚಾಲಯ ವ್ಯವಸ್ಥೆ ಇಲ್ಲ.
ಮಾದನ ಹಿಪ್ಪರಗಿ ಗ್ರಾಮದಲ್ಲಿ ಒಂಬತ್ತಕ್ಕೂ ಹೆಚ್ಚು ಶಾಲೆಗಳಿವೆ. ಸರ್ಕಾರಿ ಶಾಲೆಯಲ್ಲಿನ ಅವ್ಯವಸ್ಥೆಯಿಂದ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಸ್ಥಳಾವಕಾಶದ ಕೊರತೆಯಿಂದ ಶಾಲೆಯಲ್ಲಿ ಶಿಕ್ಷಕರಿದ್ದರೂ ಯಾವುದೇ ಕಲಿಕಾ ಚಟುವಟಿಕೆಗಳು, ಕಾರ್ಯಕ್ರಮ ಆಯೋಜಿಸಲು ಕಷ್ಟವಾಗುತ್ತಿದೆ. ನಿತ್ಯ ಮುಂಜಾನೆ ಪ್ರಾರ್ಥನೆ ಮಾಡಲೂ ಜಾಗ ಸಾಲುವುದಿಲ್ಲ.
ಕಳೆದ ವರ್ಷ ಹೊಸದಾಗಿ 3 ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಜೂನ್ ತಿಂಗಳಿಂದ ಹಿರಿಯ ತರಗತಿಗಳನ್ನು ಆರಂಭಿಸಿದರೂ ಉಳಿದವರು ಶಿಥಿಲಗೊಂಡ ಕೋಣೆಗಳಲ್ಲಿ ಪಾಠ ಕೇಳಬೇಕು. ಮುಖ್ಯಶಿಕ್ಷಕ ನಾಗಪ್ಪ ಇಕ್ಕಳಿಕೆ ಅವರು ಶಾಲೆಯ ದುರಸ್ತಿಗೆ ಕಳೆದ 2 ವರ್ಷದಲ್ಲಿ 8 ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಮಾದನ ಹಿಪ್ಪರಗಿ ಸರ್ಕಾರಿ ಶಾಲೆ ಕೋಣೆಗಳು ಹಾಳಾಗಿವೆ. ಮಳೆ ಹೆಚ್ಚಾದರೆ ಪಾಲಕರಿಗೆ ಆತಂಕ ಶುರುವಾಗುತ್ತದೆ. ಅಪಾಯವಾದರೆ ಯಾರು ಹೊಣೆ?. ಹಳೆಯ ಕಟ್ಟಡ ನೆಲಸಮ ಮಾಡಿ ಹೊಸ ಕೊಠಡಿ ನಿರ್ಮಿಸಬೇಕುವಿಜಯಕುಮಾರ ಮುಶಾಪುರ ಪಾಲಕ
ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಸ್ಥಳಾವಕಾಶದ ಕೊರತೆ ಶಿಥಿಲಗೊಂಡ ಕೋಣೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ದುರಸ್ತಿ ಕೈಗೊಳ್ಳವ ಭರವಸೆ ನೀಡಿದ್ದಾರೆನಾಗಪ್ಪ ಇಕ್ಕಳಕಿ ಮುಖ್ಯಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.