
ಆಳಂದ: ‘ಪಟ್ಟಣದ ಅಭಿವೃದ್ಧಿ ಹಿತದೃಷ್ಟಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿನ ಶೇ.90ರಷ್ಟು ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮಾಲೀಕರು ತೆರವುಗೊಳಿಸಿ ಅಭಿವೃದ್ದಿ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ’ ಎಂದು ರಾಜ್ಯ ಯೋಜನಾ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ ಹೇಳಿದರು.
ಪಟ್ಟಣದ ಹಳೆಯ ತಹಶೀಲ್ದಾರ್ ಕಚೇರಿಯಿಂದ ದರ್ಗಾ ಚೌಕ್ ವರೆಗಿನ ಮುಖ್ಯರಸ್ತೆ ತೆರವು ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು.
‘ಪಟ್ಟಣದಲ್ಲಿ ವಾಹನದಟ್ಟಣೆ ಸಮಸ್ಯೆಯಿಂದ ಹಳೆಯ ಮುಖ್ಯರಸ್ತೆಯ ವ್ಯಾಪಾರ ವಹಿವಾಟು ಕುಂಠಿತವಾಗಿತ್ತು, ಈಗ ಹೊಸ ರಸ್ತೆ ನಿರ್ಮಾಣದಿಂದ ವ್ಯಾಪಾರ ಉತ್ತಮಗೊಳ್ಳುವ ಜತೆಗೆ ಪಟ್ಟಣದ ಸೌಂದರ್ಯವು ಹೆಚ್ಚಲಿದೆ. ಹೀಗಾಗಿ ಬಹುದಿನದಿಂದ ನನೆಗುದಿಗೆ ಬಿದ್ದಿರುವ ಮುಖ್ಯರಸ್ತೆ ತೆರವು ಕಾರ್ಯವನ್ನು ಪುರಸಭೆ ಒಪ್ಪಿಗೆ ಹಾಗೂ ಸಾರ್ವಜನಿಕರ ಒಮ್ಮತದ ಮೇಲೆ ಕೈಗೊಳ್ಳಲಾಗುತ್ತಿದ್ದೇವೆ’ ಎಂದರು.
‘ತೆರವು ಕಾರ್ಯದ ಜತೆಗೆ ಮುಖ್ಯರಸ್ತೆಗೆ ಅಗತ್ಯವಾದ ಚರಂಡಿ ನಿರ್ಮಾಣ, ಬೀದಿದೀಪ ಮತ್ತು ಸಿಸಿ ರಸ್ತೆ ನಿರ್ಮಾಣವು ತ್ವರಿತವಾಗಿ ಕೈಗೊಳ್ಳಲಾಗುವುದು. ಅಂಗಡಿ ಮುಂಗಟ್ಟುಗಳ ಮಾಲೀಕರು ಪುನರ್ ನಿರ್ಮಾಣ ಕಾರ್ಯಕ್ಕೆ ಅಗತ್ಯ ಸ್ಪಂದನೆಯು ಪುರಸಭೆ ಅಧಿಕಾರಿಗಳು ನೀಡಲು ಸೂಚಿಸಲಾಗಿದೆ’ ಎಂದರು.
ಮುಖಂಡರಾದ ಶಿವಪುತ್ರಪ್ಪ ಪಾಟೀಲ, ಚಂದ್ರಕಾಂತ ಹತ್ತರಕಿ, ಮಲ್ಲಪ್ಪ ಹತ್ತರಕಿ, ಈಕ್ರಂ ಅನ್ಸಾರಿ, ಸತೀಶ ಕಟಂಬಲೆ, ಲಕ್ಷ್ಮಣ ಝಳಕಿ, ಸತೀಶ ಡಗೆ, ಶರಣು ತಡಕಲೆ, ಪಂಡಿತ ಶೇರಿಕಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.