
ಸಾವು (ಪ್ರಾತಿನಿಧಿಕ ಚಿತ್ರ)
ಆಳಂದ: ದೆವ್ವ ಹಿಡಿದಿದೆ ಎಂದು ಮಹಿಳೆಗೆ ಬಡಿಗೆಯಿಂದ ಹೊಡೆದ ಪರಿಣಾಮ ನೆರೆಯ ಮಹಾರಾಷ್ಟ್ರದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಆಳಂದ ಮೂಲದ ಮುಕ್ತಾಬಾಯಿ (26) ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದ್ದಾರೆ. ಆಳಂದ ಪಟ್ಟಣದ ಮುಕ್ತಾಬಾಯಿ ಅವರನ್ನು 6 ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬುವವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ಐದು ವರ್ಷದ ಮಗನಿದ್ದಾನೆ.
ಕೆಲವು ದಿನಗಳಿಂದ ಮುಕ್ತಾಬಾಯಿಗೆ ದೆವ್ವ ಹಿಡಿದಿದೆ ಎಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಬೇವಿನ ಕಟ್ಟಿಗೆಯಿಂದ ಹೊಡೆದರೆ ದೆವ್ವ ಬಿಡುತ್ತದೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದರು ಎಂದು ಮುಕ್ತಾಬಾಯಿ ತವರುಮನೆಯವರು ಆರೋಪಿಸಿದ್ದರು. ಆದರೆ, ಸಂಜೆವರೆಗೂ ಕೊಲೆ ದೂರು ನೀಡಲು ಮುಂದೆಬರದ ಕಾರಣ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಕ್ತಾಬಾಯಿ ಕೆಲವು ದಿನಗಳ ಹಿಂದೆ ಮನೆಯಲ್ಲಿ ಕುಸಿದು ಬಿದ್ದಾಗ ದೆವ್ವ ಹಿಡಿದಿದೆ ಎಂದುಕೊಂಡ ಸಂಬಂಧಿಕರು ಬೇವಿನ ಕಟ್ಟಿಗೆಗಳಿಂದ ಮನಬಂದಂತೆ ಹೊಡೆದಿದ್ದಾರೆ ಎನ್ನಲಾಗಿದೆ. ನಂತರ ಮಹಿಳೆಯನ್ನು ಡಿ.21ರಂದು ಗಾಣಗಾಪುರದ ಸಂಗಮ ನದಿಯಲ್ಲಿ ಸ್ನಾನ ಮಾಡಿಸಿ ದತ್ತಾತ್ರೇಯ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದಾರೆ. ಅಲ್ಲಿಂದ ಗುರುಮಠಕಲ್ ಕಡೆಗೆ ಮತ್ತೊಂದು ಪೂಜೆಗಾಗಿ ಕರೆದೊಯ್ಯುತ್ತಿದ್ದ ವೇಳೆ ಅಸ್ವಸ್ಥರಾಗಿದ್ದಾರೆ. ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಮಹಿಳೆ ಬದುಕುಳಿಯಲಿಲ್ಲ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.