ADVERTISEMENT

ಕೈತಪ್ಪಿದ ಏಮ್ಸ್: ಸಿ.ಎಂ. ಭೇಟಿಗೆ ಸಿದ್ಧತೆ

ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿಯಿಂದ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 3:17 IST
Last Updated 13 ಫೆಬ್ರುವರಿ 2021, 3:17 IST
ಕಲಬುರ್ಗಿಯಲ್ಲಿ ಶುಕ್ರವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಲಕ್ಷ್ಮಣ ದಸ್ತಿ ಮಾತನಾಡಿದರು
ಕಲಬುರ್ಗಿಯಲ್ಲಿ ಶುಕ್ರವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಲಕ್ಷ್ಮಣ ದಸ್ತಿ ಮಾತನಾಡಿದರು   

ಕಲಬುರ್ಗಿ: ನಗರದಲ್ಲಿ ಆರಂಭವಾಗಬೇಕಿದ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯ ಹುಬ್ಬಳ್ಳಿಗೆ ಹೋಗಿದ್ದರಿಂದ ಆದ ಅನ್ಯಾಯವನ್ನು ಸರಿಪಡಿಸುವಂತೆ ಕೋರಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ನಗರದಲ್ಲಿ ಶುಕ್ರವಾರ ನಡೆದ ಸರ್ವಪಕ್ಷ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ ಮುಖಂಡರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಎಲ್ಲರೂ ಪಕ್ಷಭೇದ ಮರೆತು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಜನಪ್ರತಿನಿಧಿಗಳು ಹೆಚ್ಚು ಜವಾಬ್ದಾರಿ ಹೊರಬೇಕು’ ಎಂದು ಆಗ್ರಹಿಸಿದರು.

ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ‘ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಬಗ್ಗೆ ಎಲ್ಲಾ ಪಕ್ಷಗಳು ಬದ್ಧತೆಯನ್ನು ಪ್ರದರ್ಶಿಸಿ ಪಕ್ಷಾತೀತವಾಗಿ ಕಲಬುರ್ಗಿ ಜಿಲ್ಲೆ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿ ಪಕ್ಷದ ಜಿಲ್ಲೆಯ ಅಧ್ಯಕ್ಷರು ಸೇರಿದಂತೆ ಮುಖಂಡರು ಮತ್ತು ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಲ್ಲಿ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಆದಷ್ಟು ಶೀಘ್ರ ನಿಯೋಗಕ್ಕೆ ದಿನಾಂಕ ನಿಗದಿ ಮಾಡಿ ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗಬೇಕು’ ಎಂದು ವಿನಂತಿಸಿದರು.

ADVERTISEMENT

ನಿಯೋಗ ಭೇಟಿಯ ನಂತರವೂ ಫಲ ನೀಡದಿದ್ದರೆ ಗುಲಬರ್ಗಾ ಬಂದ್, ಕಲ್ಯಾಣ ಕರ್ನಾಟಕ ಬಂದ್ ಸೇರಿದಂತೆ ಹಂತ ಹಂತದ ಹೋರಾಟವನ್ನು ಸರ್ವ ಪಕ್ಷಗಳು ಸೇರಿಕೊಂಡು ಸಂಘಟಿತ ಇಚ್ಛಾಶಕ್ತಿಯನ್ನು ಪ್ರದರ್ಶಿಸಲು ಮನವಿ ಮಾಡಿದರು.

ಸಿಪಿಐ ಭೀಮಾಶಂಕರ ಮಾಡ್ಯಾಳ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ತಮ್ಮ ಪಕ್ಷವು ಎಲ್ಲ ರೀತಿಯಿಂದಲೂ ಸಹಕಾರ ನೀಡುವುದರ ಜೊತೆಗೆ ಬದ್ಧತೆ ಪ್ರದರ್ಶಿಸುವುದಾಗಿ ತಿಳಿಸಿದರು. ಸಿಪಿಐನ ಮತ್ತೋರ್ವ ಮುಖಂಡ ಡಾ. ಮಹೇಶ ರಾಠೋಡ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೇವಲ ಕಟ್ಟಡಗಳು ಬಂದರೆ ಸಾಲದು. ಇಲ್ಲಿಯ ಜನರಿಗೆ ಉದ್ಯೋಗ ಸೃಷ್ಟಿಯಾಗುವಂತಹ ಯೋಜನೆಗಳು ಬರಬೇಕು, ಏಮ್ಸ್ ಕಲಬುರ್ಗಿಯಲ್ಲಿಯೇ ಸ್ಥಾಪನೆಯಾಗಬೇಕು. ಇದಕ್ಕೆ ತಮ್ಮ ಪಕ್ಷ ಎಲ್ಲಾ ರೀತಿಯ ಬೆಂಬಲ ಸೂಚಿಸುವುದಾಗಿ ತಿಳಿಸಿದರು.

ಎಐಎಂಐಎಂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಹೀಂ ಮಿರ್ಚಿ ಮಾತನಾಡಿ ಈ ಮಹತ್ವದ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ತಮ್ಮ ಪಕ್ಷ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ತಿಳಿಸಿದರು. ಅದರಂತೆ ಇಂಡಿಯನ್ ಯೂನಿಯನ್ ಪಕ್ಷದ ಮುಖಂಡರಾದ ಮೌಲಾನಾ ನುಹೂ ಅವರು ಮಾತನಾಡಿ ಸರ್ವ ಪಕ್ಷಗಳ ನಿರ್ಣಯಕ್ಕೆ ತಾವು ಮತ್ತು ತಮ್ಮ ಪಕ್ಷ ಬದ್ಧವಾಗಿದೆ ಎಂದು ಮಾತನಾಡಿದರು.

ಸಭೆಯಲ್ಲಿ ಸಮಿತಿಯ ಪ್ರಮುಖ ಮುಖಂಡರುಗಳಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಭದ್ರಶೆಟ್ಟಿ, ಅಸ್ಲಂ ಚೌಂಗೆ, ಎಚ್.ಎಂ. ಹಾಜಿ, ಜ್ಞಾನಮಿತ್ರ ಸ್ಯಾಮ್ಯುವೆಲ್, ಶಾಂತಪ್ಪ ಕಾರಭಾಸಗಿ, ಮಲ್ಲಿನಾಥ ಸಂಗಶೆಟ್ಟಿ, ಬಸವರಾಜ ರಾವೂರ, ಲಿಂಗಣ್ಣ ಉದನೂರ, ಬಾಬುರಾವ ಗಂವಾರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.