
ಪಟ್ಟಣ ಗ್ರಾಮದಲ್ಲಿ ಶನಿವಾರ ಜಿನುಗು ಕೆರೆ ನಿರ್ಮಾಣ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು
ಕಲಬುರಗಿ: ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಪಟ್ಟಣ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ಬರುವ ಜಿನುಗು ಕೆರೆ ನಿರ್ಮಾಣ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಚಾಲನೆ ನೀಡಿದರು.
ಪಟ್ಟಣ ಗ್ರಾಮದ ಸರ್ವೆ ನಂಬರ್ 165, 12, 2ರಲ್ಲಿ ಈ ಜಿನುಗು ಕೆರೆ ನಿರ್ಮಾಣವಾಗುತ್ತಿದೆ. ಕೆರೆ ನಿರ್ಮಾಣದಿಂದ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ. ಅಲ್ಲದೆ ನೀರಾವರಿ, ದನಕರುಗಳಿಗೂ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆರೆ ನಿರ್ಮಾಣದ ಭರವಸೆ ನೀಡಿದಂತೆ, ಇಂದು ಬೇಡಿಕೆ ಪೂರೈಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಆಡಳಿತ ನೀಡುತ್ತಿದೆ ಎಂದು ಹೇಳಿದರು.
ಪಟ್ಟಣದಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಕೆರೆ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಕೆರೆಗೆ ಜಮೀನು ನೀಡಿದ ರೈತರ ಪ್ರತಿ ಎಕರೆ ಭೂಮಿಗೆ ₹13 ಲಕ್ಷದಂತೆ ಹಣ ನೀಡಲಾಗುತ್ತಿದೆ. ರೈತರು, ಗ್ರಾಮಸ್ಥರ ಸಹಕಾರದಿಂದ ಈ ಯೋಜನೆ ಜಾರಿಗೊಳ್ಳುತ್ತಿದೆ ಎಂದರು.
ಸಂತೋಷ ಪಾಟೀಲ ದಣ್ಣೂರ, ನೀಲಕಂಠ ಮೂಲಗೆ, ಭೀಮರಾವ ಮೇಳಕುಂದಿ, ಲಿಂಗರಾಜ ಕಣ್ಣಿ, ಇಸ್ಮಾಯಿಲ್ ಸಾಬ್, ಅಂಬಾರಾವ, ಶಿವಪುತ್ರ, ಶರಣು, ಖುರ್ಶೀದ್ ಪಟೇಲ್, ರಮೇಶ, ಅಸ್ಲಂ ಸೇರಿದಂತೆ ಪಟ್ಟಣದ ಪ್ರಮುಖರು, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.