ಚಿಂಚೋಳಿ: ಮೈಕ್ರೊ ಫೈನಾನ್ಸ್‌ನವರ ಕಿರುಕುಳಕ್ಕೆ ಹೆದರಿ ಬೇಕರಿ ಕಾರ್ಮಿಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುರಿತು ಮೃತರ ಪತ್ನಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಸುಲೇಪೇಟದಲ್ಲಿ ಸಲೀಂ ಕಾಸಿಂ ಸಾಬ್ (46) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಸೇಡಂನವರಾದ ಸಲೀಂ ಹಲವಾರು ವರ್ಷಗಳಿಂದ ಸುಲೇಪೇಟದಲ್ಲಿಯೇ ನೆಲೆಸಿದ್ದರು. ಸುಮಾರು ₹ 20 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು ಎನ್ನಲಾಗಿದೆ.
ಮೃತರ ಪತ್ನಿ ನಸೀಮಾ ಬೇಗಂ ನೀಡಿದ ದೂರಿನ ಅನ್ವಯ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಿಕ ಹೋರಾಟ ಸಮಿತಿ ದಿಢೀರ್ ಪ್ರತಿಭಟನೆ: ಸಲೀಂ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಹೆದ್ದಾರಿಯಲ್ಲಿ ಸಂಚಾರ ತಡೆದು ಸುಲೇಪೇಟದಲ್ಲಿ ಪ್ರತಿಭಟನೆ ನಡೆಸಿದರು.
ಮೃತನ ಕುಟುಂಬಕ್ಕೆ ₹1 ಕೋಟಿ ಪರಿಹಾರ ಹಾಗೂ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ತಾಹೇರ್ ಪಟೇಲ್, ರಜಾಕ್ ಪಟೇಲ್, ಮೋಯಿನ್ ಮೋಮಿನ್, ನಸೀರ್ ಮದ್ದರಗಿ, ಲಾಡಲೆಸಾಬ್, ಫಾರುಕ್, ರುದ್ರಮುನಿ ರಾಮತೀರ್ಥಕರ್, ಮಲ್ಲಿಕಾರ್ಜುನ ಗುಲಗುಂಜಿ, ಫಕ್ರೊದ್ದಿನ್ ಚಾಂಗಲೇರಾ, ಮಹಮದ್ ಫಾಜಿಲ್, ನವಾಜ್ ಪಟೇಲ್ ಬುರಾನ ಪಟೇಲ್, ಜಮೀರ್ ಮಿಯಾ, ರಸೂಲ್ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.