
ಕಲಬುರಗಿ: ‘ಹೈದರಾಬಾದ್ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಅಂದಿನ ಕಲ್ಯಾಣ ವೈಭವದಿಂದ ಕೂಡಿತ್ತು. ಆದರೆ, ಇಂದಿನ ಕಲ್ಯಾಣ ಕರ್ನಾಟಕ ದಾರಿದ್ರ್ಯಗಳಿಂದ ತುಂಬಿದೆ’ ಎಂದು ಕಥೆಗಾರ ಅಮರೇಶ ನುಗಡೋಣಿ ಬೇಸರ ವ್ಯಕ್ತಪಡಿಸಿದರು.
ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಬೆಂಗಳೂರು ಮತ್ತು ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಹರಿಹರ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶಾಂತರಸರ ಸಾಹಿತ್ಯ ಲೋಕ ಸಾಹಿತ್ಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಶ್ರೀಮಂತಿಕೆ ಇದ್ದಲ್ಲಿ ಸಾಹಿತ್ಯ ಹುಟ್ಟುವುದಿಲ್ಲ. ಉತ್ತರ ಕರ್ನಾಟಕ ಯುದ್ಧದ ನಾಡು. ವಿಜಯನಗರ, ಬಹಮನಿ ಸುಲ್ತಾನರು, ಆದಿಲ್‌ಶಾಹಿಗಳ ಯುದ್ಧದ ನೆರಳಲ್ಲಿಯೇ ಇಲ್ಲಿನ ಜನರು ಬದುಕುತ್ತಿದ್ದರು. ಆದರೂ ಸಾಹಿತ್ಯ, ಕಲೆ, ಸಂಸ್ಕೃತಿಗೆ ಶೇ 90ರಷ್ಟು ಕೊಡುಗೆ ನೀಡಿದ್ದಾರೆ. ಬಡತನದಲ್ಲಿಯೇ ಸಾಹಿತ್ಯ ಹುಟ್ಟುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
ರಾಯಚೂರಿನಲ್ಲಿ ಹುಟ್ಟಿಬೆಳೆದು ಸಾಹಿತ್ಯಕೃಷಿ ಮಾಡಿದ ಶಾಂತರಸರನ್ನು ದಕ್ಷಿಣ ಕರ್ನಾಟಕಕ್ಕೆ ಒಯ್ಯುವ ಅಗತ್ಯ ಇದೆ. ಬೇಂದ್ರೆಯವರ ಗೆಳೆಯರ ಬಳಗದಂತೆ 1940ರಲ್ಲಿ ರಾಯಚೂರಿನಲ್ಲಿ ಸಂಗಡಿಗರ ಸಮಿತಿ ಕಟ್ಟಿದರು. ಅವರಿಗೆ ಮಠಗಳ ಬಗ್ಗೆ ವಿರೋಧವಿತ್ತು. ಪಂಚಪೀಠ ಸಂಸ್ಕೃತಿ ವಿರೋಧಿಸುತ್ತಿದ್ದರು. ಆದರೆ, ಮಠಗಳಲ್ಲಿ ವಚನ ಪರಂಪರೆ ಬೆಳೆಸಲು ಪ್ರಯತ್ನಿಸಿದರು. ಸುಸ್ಥಿರ ಸಮಾಜ ಕಟ್ಟಲು ವಚನಗಳು ಬೆನ್ನೆಲುಬು. ಸಾಹಿತ್ಯವನ್ನು ಸಂಗೀತದ ಮೂಲಕ ಬೆಳೆಸುವ ಪರಂಪರೆ ಹುಟ್ಟುಹಾಕಿದರು. ಜಾತ್ಯತೀತ ಮನೋಭಾವ, ದಲಿತಪ್ರಜ್ಞೆ ಬಿತ್ತುವ ಕೆಲಸ, ಬಂಡಾಯ ಸಾಹಿತ್ಯದ ಬೆಳವಣಿಗೆಗೆ ಶಾಂತರಸರು ಬುನಾದಿ ಹಾಕಿದರು’ ಎಂದು ಅವರು ಹೇಳಿದರು.
ಕಲ್ಯಾಣಕ್ಕೆ ಬೇಕು ಪ್ರತಿಷ್ಠಾನ: ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ‘ಬೆಸಗರಹಳ್ಳಿ ರಾಮಣ್ಣ ಮತ್ತು ಶಾಂತರಸರು ಇಬ್ಬರೂ ಕನ್ನಡದ ಶ್ರೇಷ್ಠ ಕತೆಗಾರರು. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಇಲ್ಲಿಗೆ ಬಂದು ಶಾಂತರಸರ ಕಾರ್ಯಕ್ರಮ ಮಾಡುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ಸರ್ಕಾರದಿಂದ ಸಾಹಿತ್ಯಿಕ, ಸಾಂಸ್ಕೃತಿಕ ಸೌಲಭ್ಯಗಳು ಸಿಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಯಾವೊಬ್ಬ ಲೇಖಕರ ಹೆಸರಲ್ಲೂ ಪ್ರತಿಷ್ಠಾನಗಳು ಆಗಿಲ್ಲ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪ್ರದೇಶವನ್ನೇ ನಿರ್ಲಕ್ಷಿಸಲಾಗುತ್ತಿದೆ. ಈ ಭಾಗದ ಲೇಖಕರಿಗೆ ಪ್ರೋತ್ಸಾಹವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ನಡೆದ ಗೋಷ್ಠಿಯಲ್ಲಿ ಸಂಶೋಧನೆ ಮತ್ತು ಗ್ರಂಥ ಸಂಪಾದನೆ ಕುರಿತು ಕೆ.ರವೀಂದ್ರನಾಥ, ಗದ್ಯ ಸಾಹಿತ್ಯ ಕುರಿತು ಶ್ರೀಶೈಲ್ ನಾಗರಾಳ ಹಾಗೂ ಮಧ್ಯಾಹ್ನದ ಗೋಷ್ಠಿಯಲ್ಲಿ ಸಾಹಿತ್ಯದಲ್ಲಿ ಸ್ತ್ರೀಲೋಕ ಕುರಿತು ವಿಮರ್ಶಕಿ ಶೈಲಜಾ ಬಾಗೇವಾಡಿ, ಕಾವ್ಯಲೋಕದ ಕುರಿತು ಮಹಾಂತೇಶ ನವಲಕಲ್, ಅನುವಾದ ಸಾಹಿತ್ಯ ಕುರಿತು ಸೂರ್ಯಕಾಂತ ಸುಜ್ಯಾತ ವಿಚಾರ ಮಂಡಿಸಿದರು.
ಸಮಾರೋಪ ಸಮಾರಂಭದಲ್ಲಿ ಕವಿ ಮತ್ತು ಸಾಹಿತಿ ಚಿದಾನಂದ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಶಾಂತರಸರ ಪುತ್ರ, ರಂಗಕರ್ಮಿ ಎಚ್.ಎಸ್.ಬಸವಪ್ರಭು ಮಾತನಾಡಿದರು. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಐಶ್ವರ್ಯ ಮತ್ತು ಭಾಗ್ಯಶ್ರೀ ಪ್ರಾರ್ಥಿಸಿದರು. ಸಂತೋಷ್‌ಕುಮಾರ್ ಕಂಬಾರ ನಿರೂಪಿಸಿದರು.
ಅಮರೇಶ ನುಗಡೋಣಿ ಅವರು ತಮ್ಮ ಭಾಷಣದಲ್ಲಿ ‘ಹೈದರಾಬಾದ್ ನಿಜಾಮನ ಆಡಳಿತದ ಕಾರಣಕ್ಕೆ ಸ್ವಾತಂತ್ರ್ಯದವರೆಗೂ ಇಲ್ಲಿ ಕನ್ನಡ ಕಣ್ಮರೆಯಾಗಿತ್ತು. ಉರ್ದು ಮಾತೃಭಾಷೆಯಾಗಿರಬೇಕು ಎಂಬುದು ನಿಜಾಮರ ಅಪೇಕ್ಷೆಯಾಗಿತ್ತು. ಜನರು ಕನ್ನಡ ಮಾತನಾಡಿದರೂ ಲಿಪಿ ಇದ್ದಿಲ್ಲ. ಅಂತಹ ಅರಾಜಕತೆಯ ಕಾಲದಲ್ಲಿ ಹುಟ್ಟಿಬೆಳೆದ ಶಾಂತರಸರು ಉರ್ದು ಕಲಿತರು. ಬಾಳ್ವೆಗಾಗಿ ಕನ್ನಡ ಕಲಿತು ಬೆಳೆಸಿದರು’ ಎಂದು ಹೇಳಿದರು. ಇದಕ್ಕೆ ಆಕ್ಷೇಪಿಸಿದ ಸಾಹಿತಿ ಬೋಡೆ ರಿಯಾಜ್ ಅಹ್ಮದ್ ‘ನಿಜಾಮರ ಕಾಲದಲ್ಲಿ ಪ್ರಾದೇಶಿಕ ಭಾಷೆಗಳಿಗೆ ವಿರೋಧವಿದ್ದಿಲ್ಲ. ತಪ್ಪು ಮಾಹಿತಿ ನೀಡಬೇಡಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪತ್ರಗಾರ ಇಲಾಖೆಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಧ್ವನಿಗೂಡಿಸಿದರು. ಮಧ್ಯಪ್ರವೇಶಿಸಿದ ಪ್ರೊ.ಎಚ್.ಟಿ.ಪೋತೆ ಅವರು ಉದ್ಘಾಟನಾ ಭಾಷಣದಲ್ಲಿಯೇ ಆಕ್ಷೇಪ ಬೇಡ; ವಿಚಾರಗೋಷ್ಠಿಗಳಲ್ಲಿ ಚರ್ಚಿಸೋಣ ಎಂದು ಕಾವೇರುತ್ತಿದ್ದ ಚರ್ಚೆಯನ್ನು ಶಾಂತಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.