ADVERTISEMENT

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆಯಿಲ್ಲ: ಅಮರನಾಥ ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಮೇ 2022, 16:33 IST
Last Updated 5 ಮೇ 2022, 16:33 IST
ಅಮರನಾಥ ಪಾಟೀಲ
ಅಮರನಾಥ ಪಾಟೀಲ   

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಟೀಕಿಸಿದ್ದಕ್ಕೆ ತಿರುಗೇಟು ನೀಡಿದ ವಿಧಾನಪ‍ರಿಷತ್ ಮಾಜಿ ಸದಸ್ಯ, ಬಿಜೆಪಿ ಮುಖಂಡ ಅಮರನಾಥ ಪಾಟೀಲ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ಯಾವುದೇ ನೈತಿಕತೆಯಿಲ್ಲ ಎಂದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ನಡೆದ ಪಂಚರಾಜ್ಯಗಳ ಸೋಲಿನಿಂದ ಕಾಂಗ್ರೆಸ್‌ ನಾಯಕರು ಕಂಗೆಟ್ಟಿದ್ದಾರೆ. ರಾಜ್ಯದ ನಾಯಕರು ನಿದ್ರಾಹೀನರಾಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರೂ ಜಾಮೀನಿನ ಮೇಲೆ ಹೊರಗಡೆಯೇ ಇದ್ದಾರೆ. ಗಲಭೆಗಳ ಸೃಷ್ಟಿ, ಅಲ್ಪಸಂಖ್ಯಾತರ ತುಷ್ಟೀಕರಣ, ಜಾತಿ ರಾಜಕೀಯ ಮಾಡಿಕೊಂಡಿದ್ದ ಕಾಂಗ್ರೆಸ್ ಮುಖಂಡರಿಗೆ ಅವು ಫಲಕೊಡುವ ಭರವಸೆ ಇಲ್ಲ. ಸಿದ್ದರಾಮಯ್ಯ ಅವರು ಹಗರಣದ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಆಗಿದೆ. 2013ರಲ್ಲಿ ಕೆಪಿಎಸ್ಸಿ ಹಗರಣ ನಡೆಯಿತು. 2015ರಲ್ಲಿ ಪೊಲೀಸ್ ನೇಮಕಾತಿಯಲ್ಲಿ ಗೋಲ್‌ಮಾಲ್ ನಡೆಯಿತು. ಆಗ ಇದ್ದ ಸರ್ಕಾರ ಯಾವುದು? ಮುಖ್ಯಮಂತ್ರಿ ಯಾರಾಗಿದ್ದರು’ ಎಂದು ಪ್ರಶ್ನಿಸಿದರು.

ತಾವು ಭಾಗಿಯಾಗಿದ್ದ ಹಗರಣಗಳನ್ನು ಮುಚ್ಚಿ ಹಾಕಲು ಲೋಕಾಯುಕ್ತದಂಥ ಸಂಸ್ಥೆಯ ಬುಡವನ್ನೇ ಕಿತ್ತೊಗೆದು ಹೆಸರಿಗೊಂದು ಸಂಸ್ಥೆಯನ್ನಾಗಿ ಎಸಿಬಿಯನ್ನು ಸ್ಥಾಪಿಸಿದ ನಾಯಕ ಯಾರು ಎಂದರು.

ADVERTISEMENT

‘ಸಾಲು ಸಾಲು ಹಗರಣಗಳನ್ನು ಮಾಡಿಕೊಂಡು, ಅದರಲ್ಲೇ ಮುಳುಗಿ ಅಧಿಕಾರವಧಿಯಲ್ಲಿ ನುಂಗಿ ನೀರು ಕುಡಿದ ಭ್ರಷ್ಟ ಕಾಂಗ್ರೆಸ್ ನಾಯಕರಿಂದ ನಿಯತ್ತಿನ ಪಾಠ ಕೇಳುವಂತಹ ದುರ್ದೈವದ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ’ ಎಂದು ಹೇಳಿದರು.

ಭ್ರಷ್ಟಾಚಾರವನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ. ಅದೇ ಕಾರಣಕ್ಕೆ ಶೇ 40ರಷ್ಟು ಕಮಿಷನ್ ಆರೋಪ, ಪಿಎಸ್‌ಐ ಹಗರಣಗಳ ಕುರಿತು ತಕ್ಷಣ ತನಿಖೆಗೆ ಆದೇಶ ನೀಡಿದೆ. ಕೆ.ಎಸ್‌. ಈಶ್ವರಪ್ಪ ಅವರು ಸ್ವಯಂಪ್ರೇರಿತರಾಗಿ ರಾಜೀನಾಮೆ ಕೊಟ್ಟಿದ್ದಾರೆ ಎಂದು ಪಕ್ಷದ ನಿಲುವನ್ನು ಸಮರ್ಥಿಸಿಕೊಂಡರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಲಿಂಗರಾಜ ಬಿರಾದಾರ, ಬಾಬುರಾವ ಹಾಗರಗುಂಡಗಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.