
ಕಮಲಾಪುರ: ಕುಡಿಯಲು ನೀರಿಲ್ಲ, ಚರಂಡಿ ಸ್ವಚ್ಛಗೊಳಿಸಿಲ್ಲ, ಗ್ರಾಮಸ್ಥರಿಗೆ ಬೇಕಾಗುವ ದಾಖಲಾತಿಗಳಿಲ್ಲ. ಒಂದಾ.. ಎರಡಾ.. ಹಲವಾರು ಸಮಸ್ಯೆಗಳ ಸರಮಾಲೆ ಹೊತ್ತು ನರಳುತ್ತಿದೆ ಕಳೆದ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಅಂಬಲಗಾ ಗ್ರಾಮ ಪಂಚಾಯಿತಿ. ಇದಕೆಲ್ಲ ಮುಖ್ಯ ಕಾರಣ ಆರು ತಿಂಗಳಿಂದ ಅಭಿವೃದ್ಧಿ ಅಧಿಕಾರಿ ಇಲ್ಲದ್ದಿರುವುದಾಗಿದೆ.
ಅಂಬಲಗಾ, ಅಂಬಲಗಾ ತಾಂಡಾ, ಕುದಮೂಡ, ಕುದಮೂಡ ತಾಂಡಾ, ಕಲಕುಟಗಾ ಸೇರಿ 3 ಗ್ರಾಮ, ಎರಡು ತಾಂಡಾಗಳು ಈ ಪಂಚಾಯಿತಿ ವ್ಯಾಪ್ತಿಯಲ್ಲಿವೆ. ನರೇಗಾ ಕಾಮಗಾರಿಗಳ ಸಾಮಗ್ರಿ ಮೊತ್ತ, ಸ್ವಚ್ಛ ಭಾರತ ಯೋಜನೆಯ ವೈಯಕ್ತಿಕ ಶೌಚಾಲಯಗಳ ಪ್ರೋತ್ಸಾಹ ಧನ ಪಾವತಿಸುವುದು, ನೀರಿನ ಸಮಸ್ಯೆ ತಲೆದೋರಿದ್ದು ನಿರ್ವಹಣೆಗೆ ಹಣ ಒದಗಿಸುವುದು, ಕೆಲವು ದೇವಾಲಯ ಕಟ್ಟಡಕ್ಕೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಕಾಮಗಾರಿ ಕೈಗೊಳ್ಳಲು 9/11 ಬಿ–ಫಾರ್ಂ ಅವಶ್ಯಕತೆ ಇದೆ. ಸಾರ್ವಜನಿಕ ನಿವೇಶನಗಳ ಮೊಟೇಶನ್ ಸೇರಿದಂತೆ ಪಂಚಾಯಿತಿಯ ಎಲ್ಲ ಕೆಲಸ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.
ಈ ಗ್ರಾಮ ಪಂಚಾಯಿತಿ ಪಿಡಿಒ ಜಗನ್ನಾಥ ರೆಡ್ಡಿ ಅವರಿಗೆ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕರ ಪ್ರಭಾರ ಹುದ್ದೆ ನೀಡಿದ್ದರಿಂದ ಪಿಡಿಒ ಹುದ್ದೆ ಖಾಲಿ ಇತ್ತು. ಪಕ್ಕದ ಆಳಂದ ತಾಲ್ಲೂಕಿನ ಚಿಂಚನಸೂರ ಪಿಡಿಒ ಆಗಿದ್ದ ಅಮಿತಕುಮಾರ ಅವರನ್ನು ಕಮಲಾಪುರ ತಾಲ್ಲೂಕಿನ ಅಂಬಲಗಾ ಪಂಚಾಯಿತಿಗೆ ನಿಯೋಜಿಸಲಾಗಿತ್ತು. ಕಳೆದ 2025 ಜುಲೈ 21ರಂದು ಅಮಿತಕುಮಾರ ವರ್ಗವಣೆಯಾಗಿದ್ದಾರೆ.
‘ಕುರಿಕೋಟಾ ಪಂಚಾಯಿತಿ ಪಿಡಿಒ ಅಭಿಜಿತರನ್ನು ಹೆಚ್ಚುವರಿ ಪ್ರಭಾರ ವಹಿಸಿ ಜಿ.ಪಂ ಸಿಇಒ ಆದೇಶಿಸಿದ್ದಾರೆ. ಅಭಿಜಿತ ಎರಡು ಬಾರಿ ಮಾತ್ರ ಪಂಚಾಯಿತಿಗೆ ಹಾಜರಾಗಿ, ನಂತರ ಆ.8ರಂದು ಅಂಬಲಗಾ ಗ್ರಾ.ಪಂ ಹೆಚ್ಚುವರಿ ಪ್ರಭಾರ ಕೈಬಿಡುವಂತೆ ತಾ.ಪಂ ಇಒಗೆ ಪತ್ರ ಬರದಿದ್ದಾರೆ. ‘ನಾನು ನಿಮ್ಮ ಪಂಚಾಯಿತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಆರು ತಿಂಗಳಿಂದ ಎಲ್ಲ ಕಾರ್ಯಗಳು ಸ್ಥಗಿತಗೊಂಡಿವೆ’ ಎಂಬುದು ಗ್ರಾ.ಪಂ ಅಧ್ಯಕ್ಷ ತಾಜೋದ್ದಿನ ಪಟೇಲ ಹಾಗೂ ಸದಸ್ಯರ ಆರೋಪವಾಗಿದೆ.
ಪಿಡಿಒ ಅಭಿಜಿತ ನಿಯುಕ್ತಿಗೊಂಡಾಗಿನಿಂದ ಸುದೀರ್ಘವಾಗಿ ಗೈರಾಗಿದ್ದಾರೆ. ಮೊಬೈಲ್ ಸ್ವಿಚ್‌ಆಫ್ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ಖಾಲಿ ಹುದ್ದೆಗೆ ಬೇರೊಬ್ಬ ಪಿಡಿಒ ನೇಮಿಸುವಂತೆ ತಾ.ಪಂ ಇಒ ಹಾಗೂ ಜಿ.ಪಂ ಸಿಇಒ ಸೇರಿದಂತೆ ಸಚಿವ ಪ್ರಿಯಾಂಕ್ ಖರ್ಗೆಯವರಿಗೂ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ.
ಈ ಹಿಂದಿನ ಪಿಡಿಒ ಅಮಿತಕುಮಾರ ತಮ್ಮ ವರ್ಗಾವಣೆ ಪ್ರಶ್ನಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಸದ್ಯ ಹೊಳಕುಂದಾ ಗ್ರಾ.ಪಂ ಪಿಡಿಒ ಆಗಿ ನಿಯುಕ್ತಿಗೊಂಡಿದ್ದಾರೆ. ಅವರನ್ನಾದರೂ ನಮ್ಮ ಅಂಬಲಗಾ ಪಂಚಾಯಿತಿ ಪ್ರಭಾರ ನೀಡುವಂತೆ ಒತ್ತಾಯಿಸಿ ಕಳೆದ ಅ.10ರಂದು ಜಿ.ಪಂ ಸಿಇಒಗೆ ಮನವಿ ಸಲ್ಲಿಸಿದ್ದೇವೆ. ತಾ.ಪಂ ಕಾರ್ಯನಿರ್ವಾಹ ಅಧಿಕಾರಿಯೂ ಪತ್ರ ಬರೆದಿದ್ದಾರೆ. ಅದಕ್ಕೂ ಸಿಇಒ ಕವಡೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಅಧ್ಯಕ್ಷ ಹಾಗೂ ಸದಸ್ಯರು ಆಕ್ರೋಶ ಹೊರಹಾಕಿದರು.
- ಜಿ.ಪಂ ಸಿಇಒ ಆದೇಶಕ್ಕೂ ಇಲ್ಲ ಕಿಮ್ಮತ್ತು ಪ್ರಭಾರ ಕೈಬಿಡುವಂತೆ ತಾ.ಪಂ ಇಒಗೆ ಪಿಡಿಒ ಪತ್ರ ಗ್ರಾ.ಪಂ ಅಧ್ಯಕ್ಷ ಹಾಗೂ ಸದಸ್ಯರ ಆಕ್ರೋಶ
6 ತಿಂಗಳಿಂದ ಪಿಡಿಒ ಇಲ್ಲ. ತಾ.ಪಂ ಇಒ ನಿರ್ದೇಶನದ ಮೇರೆಗೆ ನೀರು ನಿರ್ವಹಣೆ ಸೇರಿದಂತೆ ಅನೇಕ ಕೆಲಸಗಳಿಗೆ ಕೈಯಿಂದ ದುಡ್ಡು ಸುರಿದಿದ್ದೇನೆ. ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಕೆಲಸ ಮಾಡಿಸಿದ್ದು ಅವರಿಗೆ ಹಣ ಒದಗಿಸಬೆಕು. ಫೆ.5ಕ್ಕೆ ಅಧಿಕಾರವಧಿ ಮುಗಿಯುತ್ತದೆ. ಸಚಿವರು ಸೂಚಿಸಿದರೂ ಪಿಡಿಒ ಒದಗಿಸದೆ ಜಿ.ಪಂ ಸಿಇಒ ನಮ್ಮ ಜೊತೆ ಚೆಲ್ಲಾಟವಾಡುತ್ತಿದ್ದಾರೆತಾಜೋದ್ದಿನ ಪಟೇಲ್ ಅಧ್ಯಕ್ಷ ಗ್ರಾ.ಪಂ ಅಂಬಲಗಾ
ಪಿಡಿಒ ಅವರು ಕೆಲವು ಕಾರ್ಯ ಕೈಗೊಂಡಿದ್ದಾರೆ. ಸುದೀರ್ಘ ಗೈರಾಗಿದ್ದು ಸೇರಿದಂತೆ ಇತರೆ ದೂರುಗಳು ಬಂದಿದ್ದು ಪಿಡಿಒ ಅಭಿಜಿತ ಬೇಜವಾಬ್ದಾರಿತನಕ್ಕೆ ಈಗಾಗಲೇ ನೋಟಿಸ್ ನೀಡಲಾಗಿದೆ. ಶೀಘ್ರದಲ್ಲೇ ಬೇರೆ ಪಿಡಿಒ ನೇಮಿಸಲಾಗುವುದುರಮೇಶ ಪಾಟೀಲ ತಾ.ಪಂ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.