ಕಲಬುರಗಿ ತಾಲ್ಲೂಕಿನ ಕೆರಿಭೋಸಗಾ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ ಮಾಡಿದರು. ರಾಜು ಕಪನೂರ, ಅಲ್ಲಮಪ್ರಭು ಪಾಟೀಲ, ರಾಜೀವ ಜಾನೆ, ಸಂತೋಷ ಪಾಟೀಲ, ನೀಲಕಂಠರಾವ್ ಮೂಲಗೆ ಭಾಗವಹಿಸಿದ್ದರು
ಕಲಬುರಗಿ: ತಾಲ್ಲೂಕಿನ ಕೆರಿಭೋಸಗಾ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು.
ಗ್ರಾಮದ ಮುಖಂಡರು, ಯುವಕರು ಜೀಪಿನಲ್ಲಿ ನೀಲಿ ಧ್ವಜಗಳನ್ನು ಹಿಡಿದು ಮೆರವಣಿಗೆ ಮಾಡುವ ಮೂಲಕ ಪ್ರಿಯಾಂಕ್ ಅವರನ್ನು ಕಾರ್ಯಕ್ರಮದ ಸ್ಥಳಕ್ಕೆ ಕರೆದೊಯ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶದ ಜನರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ಮಾಹಾನ್ ಚೇತನ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಸಂಖ್ಯಾತ ಭಾಷೆ, ಜಾತಿ–ಧರ್ಮ ಅನುಸರಿಸುವ ಜನರಿಗೆ ಅನುಗುಣವಾಗುವಂತಹ ಸಂವಿಧಾನ ರಚನೆ ಮಾಡಬೇಕಿತ್ತು. ಇದೊಂದು ಸವಾಲಿನ ಕೆಲಸವಾಗಿತ್ತು. ಅದಕ್ಕೆ ಅಂಬೇಡ್ಕರ್ ಅವರು ದೇಶ ವಿದೇಶಗಳ ಸಂವಿಧಾನಗಳನ್ನು ಸತತ ಅಭ್ಯಸಿಸಿ ಬೃಹತ್ ಸಂವಿಧಾನ ರಚಿಸಿ ಸಂವಿಧಾನದ ಅಡಿಯಲ್ಲಿ ಸಮಾನತೆ, ಸ್ವಾತಂತ್ರ್ಯ ದೊರಕಿಸಿಕೊಟ್ಟು ಸ್ವಾಭಿಮಾನದ ಬದುಕು ಕಲ್ಪಿಸಿದ್ದಾರೆ’ ಎಂದರು.
‘ಅನಗತ್ಯ ಹಣ ಖರ್ಚು ಮಾಡಬೇಡಿ. ಗ್ರಂಥಾಲಯಕ್ಕೆ ಪುಸ್ತಕಗಳನ್ನು ತಂದುಕೊಡಿ. ಅದನ್ನು ಓದಿದ ಮಕ್ಕಳು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಾಗಲಿ. ನನ್ನ ಬಳಿ ಬರುವವರಿಗೆ ಪುಸ್ತಕ ತೆಗೆದುಕೊಂಡು ಬರಲು ಹೇಳಿದ್ದೇನೆ. ನನ್ನ ಬಳಿ ಸಾಕಷ್ಟು ಪುಸ್ತಕ ಜಮೆ ಆಗುತ್ತವೆ. ಆ ಪುಸ್ತಕಗಳನ್ನು ಇಲ್ಲಿನ ಗ್ರಂಥಾಲಯಕ್ಕೆ ಕಳಿಸಿಕೊಡುತ್ತೇನೆ. ಅವುಗಳನ್ನು ಓದುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ, ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ‘ಶಿಕ್ಷಣದ ಕ್ರಾಂತಿಯಾಗಬೇಕು. ಅಂಬೇಡ್ಕರ್ ಅವರನ್ನು ಕೇವಲ ಪ್ರತಿಮೆಗೆ ಸೀಮಿತ ಮಾಡಬಾರದು ಅವರ ವಿಚಾರಧಾರೆಗಳನ್ನು ಮನೆ ಮನೆಗೆ ತಲುಪಿಸಬೇಕು. ಅವರನ್ನು ಪುಸ್ತಕಗಳಲ್ಲಿ ಜೀವಂತವಾಗಿಡಬೇಕು’ ಎಂದು ಹೇಳಿದರು.
ವೇದಿಕೆಯ ಮೇಲೆ ಭಂತೆ ವರಜ್ಯೋತಿ, ಮಾತೋಶ್ರೀ ಪ್ರಭು ತಾಯಿ, ಸಂಸದ ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಸಂವಿಧಾನದ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ನಡೆಯುತ್ತಿರುವಾಗ ಆರ್‌ಎಸ್‌ಎಸ್ ಸಂವಿಧಾನ ಬೇಡ ಮನುಸ್ಮೃತಿ ಬೇಕು ಎಂದು ಹೊರಗಡೆ ಪ್ರತಿಭಟನೆ ಮಾಡುತ್ತಿತ್ತು. ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮನುವಾದ ನಿಮ್ಮ ಮಕ್ಕಳ ಸೋಂಕಲು ಬಿಡಬೇಡಿಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಸಮಾಜದಲ್ಲಿ ಇನ್ನೂ ಅಂಧಕಾರ ನೆರೆಯೂರಿದೆ. ಡಾ. ಅಂಬೇಡ್ಕರ್ ಅಂತಹ ಅಂಧಕಾರ ಹೊಡೆದೋಡಿಸುವ ಆಶಾಕಿರಣವಾಗಿದ್ದಾರೆ. ಅವರ ಸಾಮಾಜಿಕ ನ್ಯಾಯ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದನೆಯಿಂದಾಗಿ ಇಂದು ದೇಶವಾಸಿಗಳು ಸಂವಿಧಾನದ ಅಡಿಯಲ್ಲಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆಶಿವಯೋಗಿ ಸಿದ್ದರಾಮೇಶ್ವರ ಶರಣರು ಬೆಲ್ದಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.